Advertisement

ಪಡುತೋನ್ಸೆ ಕೆಮ್ಮಣ್ಣಿನಲ್ಲಿ 2 ವರ್ಷಗಳಿಂದ ಮುಚ್ಚಿದ ಕೇಂದ್ರ

06:00 AM Jul 05, 2018 | Team Udayavani |

ಮಲ್ಪೆ: ಜನರ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬೇಕಿದ್ದ ಕೆಮ್ಮಣ್ಣು ಪಡುತೋನ್ಸೆ ಆರೋಗ್ಯ ಉಪಕೇಂದ್ರಕ್ಕೇ ಅನಾರೋಗ್ಯ ಬಡಿದಿದೆ. ಎರಡು ವರ್ಷಗಳಿಂದ ಬೀಗ ಹಾಕಿದ ಸ್ಥಿತಿಯಲ್ಲಿರುವ ಈ ಕೇಂದ್ರ ಬೀದಿ ನಾಯಿಗಳ ತಾಣವಾಗಿದೆ.  

Advertisement

ಎಲ್ಲ ವ್ಯವಸ್ಥೆ ಇದ್ದೂ ಬೀಗ  
ಪಡುತೋನ್ಸೆ ಗುಳಿಬೆಟ್ಟು ಜೂನಿಯರ್‌ ಕಾಲೇಜಿನ ಬಳಿ ಜನರ ಅನುಕೂಲಕ್ಕಾಗಿ 20 ವರ್ಷಗಳ ಹಿಂದೆ ಸುಸಜ್ಜಿತ ಆರೋಗ್ಯ ಉಪಕೇಂದ್ರ ತೆರೆಯಲಾಗಿತ್ತು. ಇಲ್ಲಿ ಎಲ್ಲ ಸೌಕರ್ಯಗಳು ಇವೆ. ಒಬ್ಬರು ಮಹಿಳಾ ನರ್ಸ್‌ ಕಾರ್ಯ ನಿರ್ವಹಿಸುತ್ತಿದ್ದು, ವಸತಿಗೃಹದ ವ್ಯವಸ್ಥೆ ಇರುವುದರಿಂದ ಅಲ್ಲಿಯೇ ಇರುತ್ತಿದ್ದರು. 2 ವರ್ಷಗಳ ಹಿಂದೆ ಅವರಿಗೆ ವರ್ಗಾವಣೆಯಾಗಿದ್ದು, ಅಂದಿನಿಂದ ಉಪಕೇಂದ್ರಕ್ಕೆ ಬೀಗ ಬಿದ್ದಿದೆ. ಬಡವರಿಗೆ ಉಪಯೋಗವಾಗುತ್ತಿದ್ದ ಕೇಂದ್ರವನ್ನು ಸುಸ್ಥಿತಿಗೆ ತರಬೇಕೆಂದು ಹಲವು ಬಾರಿ ಗ್ರಾಮಸಭೆಯಲ್ಲಿ ಪ್ರಸ್ತಾಪವಾಗಿದೆ. ಆದರೂ ಏನೂ ಪ್ರಯೋಜನವಾಗಿಲ್ಲ. 
 
ಬಾಲಕನಿಗೆ ನಾಯಿ ಕಡಿತ
15 ದಿವಸಗಳ ಹಿಂದೆ ಈ ದಾರಿಯಲ್ಲಿ ಶಾಲೆಗೆ ಹೋಗುತ್ತಿದ್ದ ಬಾಲಕನಿಗೆ ಇಲ್ಲಿ ಸೇರಿರುವ ಬೀದಿ ನಾಯಿಗಳು ದಾಳಿ ನಡೆಸಿವೆ. ಪರಿಣಾಮ ಬಾಲಕ ಗಂಭೀರ ಗಾಯಗೊಂಡಿದ್ದಾನೆ. ಈ ಹಿನ್ನೆಲೆಯಲ್ಲಾದರೂ ಸ್ಥಳೀಯಾಡಳಿತ ಗಮನಹರಿಸಲು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಬೀದಿ ನಾಯಿಗಳ ಕಾಟ 
ಸಿಬಂದಿ ಇಲ್ಲದಿರುವುದರಿಂದ ಕಟ್ಟಡ ಪಾಳುಬಿದ್ದಂತಿದೆ. ಆರೋಗ್ಯ ಕೇಂದ್ರ ಸುತ್ತಲೂ ಗಿಡಗಂಟಿಗಳು ಬೆಳೆದು ನಿಂತಿದೆ. ಬೀದಿ ನಾಯಿಗಳ ವಾಸ ಸ್ಥಳವಾಗಿದೆ. ಇನ್ನೂ ಹಲವು ದಿನಗಳು ಹೀಗೇ ಇದ್ದರೆ ಅನೈತಿಕ ಚಟುವಟಿಕೆಗಳಿಗೂ ಇದು ಅವಕಾಶವಾದೀತು ಎಂಬ ಆತಂಕ ಸ್ಥಳೀಯರದ್ದಾಗಿದೆ.

ಸಿಬಂದಿ ನೇಮಕ
ಸಿಬಂದಿ ಕೊರತೆಯಿಂದ ಕೇಂದ್ರ ಮುಚ್ಚಿಕೊಂಡಿದೆ. ಗ್ರಾಮಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಂಡು ನೇಮಕಾತಿ ಗೊಳಿಸುವಂತೆ ಜಿ.ಪಂ.ಗೆ ಮನವಿಯನ್ನು ಸಲ್ಲಿಸಲಾಗಿತ್ತು. ಈಗಾಗಲೇ ಒಬ್ಬ ಮೇಲ್‌ ನರ್ಸ್‌ ನಿಯೋಜನೆಯಾಗಿದ್ದು, ಕೆಲವೇ ದಿನಗಳಲ್ಲಿ ಕೇಂದ್ರ ಮತ್ತೆ ಕಾರ್ಯಾರಂಭ ಮಾಡಲಿದೆ.  
– ಫೌಜಿಯಾ ಸಾಧಿಕ್‌,  
ಅಧ್ಯಕ್ಷರು ತೋನ್ಸೆ ಕೆಮ್ಮಣ್ಣು ಗ್ರಾ. ಪಂ.

ಸಿಬಂದಿ ಕೊರತೆ: ಜಿ.ಪಂ.ಗೆ ಮನವಿ 
ಹೂಡೆ ಪ್ರಾ. ಆರೋಗ್ಯ ಕೇಂದ್ರದಲ್ಲಿಯೇ ಸಿಬಂದಿ ಕೊರತೆ ಇದೆ. ಆರೋಗ್ಯ ಸಹಾಯಕರಿಲ್ಲದೆ ಉಪಕೇಂದ್ರ ಮುಚ್ಚಿದ್ದರಿಂದ ಈ ಬಗ್ಗೆ ಜಿ.ಪಂ. ಮನವಿ ಮಾಡಲಾಗಿದೆ. ಆರೋಗ್ಯ ಇಲಾಖಾಧಿಕಾರಿಗಳ ಗಮನಕ್ಕೂ ತರಲಾಗಿದೆ. ಇಲಾಖೆಯಿಂದ ಇದುವರೆಗೂ ನೇಮಕಾತಿ ಆಗಿಲ್ಲ. ಸದ್ಯಕ್ಕೆ ಕೆಮ್ಮಣ್ಣು ತೋನ್ಸೆ ಗ್ರಾಮಕ್ಕೆ ಕಿರಿಯ ಪುರುಷ ಆರೋಗ್ಯ ಸಹಾಯಕ ಒಬ್ಬರನ್ನು ನಿಯೋಜಿಸಿಲಾಗಿದೆ. ಗುಜ್ಜರ್‌ಬೆಟ್ಟು, ಕೆಮ್ಮಣ್ಣು, ಹೂಡೆ ಉಪ ಕೇಂದ್ರಗಳು ಅವರ ವ್ಯಾಪ್ತಿಗೆ ಬರಲಿದ್ದು ವಾರಕ್ಕೆ ಎರಡು ಮೂರು ಬಾರಿ ಭೇಟಿ ನೀಡಲಿದ್ದಾರೆ. 
– ಪ್ರೀಮ, ವೈದ್ಯಾಧಿಕಾರಿಗಳು, ಹೂಡೆ ಪ್ರಾಥಮಿಕ ಆರೋಗ್ಯ ಕೇಂದ್ರ

Advertisement
Advertisement

Udayavani is now on Telegram. Click here to join our channel and stay updated with the latest news.

Next