ಉಡುಪಿ: ವಿವಿಧ ರೀತಿಯ ಜ್ವರಗಳು ಉಡುಪಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಒಂದೆಡೆ ಡೆಂಗ್ಯೂನಿಂದ ಜನರು ತತ್ತರಿಸುತ್ತಿದ್ದರೆ, ಇನ್ನೊಂದು ಕಡೆ ಮಲೇರಿಯಾ ಹಬ್ಬುತ್ತಿದೆ. ಈ ನಿಟ್ಟಿನಲ್ಲಿ ಜನರೂ ಸಾಕಷ್ಟು ಮುಂಜಾಗ್ರತೆ ವಹಿಸಬೇಕೆಂದು ಜಿಲ್ಲಾಡಳಿತ ತಿಳಿಸಿದೆ.
ಇಲಾಖಾ ಮಟ್ಟದಲ್ಲಿಯೂ ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿದೆ. ಅಧಿಕಾರಿಗಳೂ ಎಚ್ಚರಿಕೆಯಿಂದ ಪರಿಸ್ಥಿತಿಯ ಮೇಲೆ ನಿಗಾ ಇರಿಸಿದ್ದಾರೆ ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳು ತಿಳಿಸಿದ್ದಾರೆ.
ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಜು. 15ರ ವರೆಗೆ ಒಟ್ಟು 11 ಡೆಂಗ್ಯೂ ಹಾಗೂ 45 ಮಲೇರಿಯಾ ಪ್ರಕರಣಗಳು ದಾಖಲಾಗಿವೆ.
ಎಲ್ಲೆಲ್ಲಿ ಪ್ರಕರಣ ಜಾಸ್ತಿ?
ಉಡುಪಿಯ ಮಲ್ಪೆ ಭಾಗದಲ್ಲಿ ಹೆಚ್ಚಿನ ಮಲೇರಿಯಾ ಪ್ರಕರಣ, ಹನುಮಂತ ನಗರ, ಕೊಡಂಕೂರು, ನಿಟ್ಟೂರು ಪ್ರದೇಶಗಳಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ. ಉಡುಪಿಯಲ್ಲಿ ವಲಸೆ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಮಲ್ಪೆಯಂತಹ ಪ್ರದೇಶಗಳಲ್ಲಿ ಹೆಚ್ಚಿನ ಜನರು ವಾಸಿಸುತ್ತಿದ್ದು, ಇಲ್ಲಿ ಈ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಇದು ಮುಖ್ಯವಾಗಿ ವಲಸೆ ಹೋಗುವ ಜನರಿಂದ ಹರಡುವುದು ಹೆಚ್ಚು. ಕೆಮ್ಮಣ್ಣಿನಲ್ಲಿ 6 ಮಲೇರಿಯಾ ಪ್ರಕರಣಗಳು ಕಂಡುಬಂದಿದ್ದು ಗುಣಮುಖರಾಗಿದ್ದಾರೆ.