ಚಾಮರಾಜನಗರ: ತಾಲೂಕಿನ ಹರವೆ ಗ್ರಾಮದಲ್ಲಿ ಶ್ರೀಚನ್ನಬಸವೇಶ್ವರ ವಿದ್ಯಾಸಂಸ್ಥೆ, ರೋಟರಿ ಸಂಸ್ಥೆ, ಜೆಎಸ್‌ಎಸ್ ಅಸ್ಪತ್ರೆ, ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ ಹಾಗೂ ಕೊಯತ್ತೂರು ಅರವಿಂದ ಕಣ್ಣಿನ ಅಸ್ಪತ್ರೆಯ ಸಹಯೋಗದಲ್ಲಿ ಆರೋಗ್ಯ ತಪಾಸಣೆ ಶಿಬಿರ ನಡೆದು, 604 ಮಂದಿ ಶಿಬಿರದ ಉಪಯೋಗ ಪಡೆದರು.
2019-20ನೇ ಸಾಲಿನ ರೋಟರಿ ಸಂಸ್ಥೆಯ 50ನೇ ಸೇವಾ ಕಾರ್ಯಕ್ರಮ ಇದಾಗಿದ್ದು, ಮೈಸೂರು ಹಾಗೂ ಚಾಮರಾಜನಗರ ಜೆಎಸ್‌ಎಸ್ ಅಸ್ಪತ್ರೆಯ ತಜ್ಞ ವೈದ್ಯರ ತಂಡ, ಅಸ್ಪತ್ರೆಯ ಅಧೀಕ್ಷಕರಾದ ಡಾ.ಕುಲದೀಪ್, ಡಾ.ಗುರುಪ್ರಸಾದ್ ನೇತೃತ್ವದಲ್ಲಿ 400ಕ್ಕೂ ಹೆಚ್ಚು ಮಂದಿಗೆ ವಿವಿಧ ತಪಾಸಣೆಗಳನ್ನು ಮಾಡಿ, ಸಲಹೆ ನೀಡುವ ಜೊತೆಗೆ ಔಷಧ ನೀಡಿದರು.
ಅಲ್ಲದೆ, ಕೊಯಮತ್ತೂರಿನ ಅರವಿಂದ ಕಣ್ಣಾಸ್ಪತ್ರೆ ವೈದ್ಯರ ತಂಡ ಕಣ್ಣಿನ ತೊಂದರೆಯುಳ್ಳ 200ಕ್ಕೂ ಹೆಚ್ಚು ಮಂದಿ ಪರೀಕ್ಷೆ ಮಾಡಿ, ಕಣ್ಣಿನ ಪೊರೆಯುಳ್ಳ 20 ಮಂದಿಯನ್ನು ಶಸ್ತ್ರ ಚಿಕಿತ್ಸೆಗಾಗಿ ಕೊಯಮತ್ತೂರಿನ ಅರವಿಂದ ಕಣ್ಣಾಸ್ಪತ್ರಗೆ ಕರೆದೊಯ್ದರು. ಹೋಬಳಿ ಕೇಂದ್ರವೊಂದರಲ್ಲಿ ಆರೋಗ್ಯ ತಪಾಸಣೆ ಶಿಬಿರ ವ್ಯವಸ್ಥಿತವಾಗಿ ನಡೆಯಿತು.
ಮನುಷ್ಯನಿಗೆ ಆರೋಗ್ಯ ಮುಖ್ಯ: ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದ ವಿರಕ್ತ ಮಠದ ಅಧ್ಯಕ್ಷ ಸರ್ಪಭೂಷಣ ಸ್ವಾಮೀಜಿ ಮಾತನಾಡಿ, ಮನುಷ್ಯನಿಗೆ ಆರೋಗ್ಯ ಬಹಳ ಮುಖ್ಯ. ಗ್ರಾಮಾಂತರ ಪ್ರದೇಶದ ಜನರು ಅನೇಕ ಜಂಜಾಟಗಳಲ್ಲಿ ಆರೋಗ್ಯದ ಕಾಳಜಿಯನ್ನು ಮರೆತು ಬಿಡುತ್ತಾರೆ. ಇದರಿಂದ ಅನೇಕ ತೊಂದರೆಗಳಿವೆ. ಅವರನ್ನು ನಂಬಿದ್ದ ಕುಟುಂಬಗಳು ಅನಾಥವಾಗುತ್ತಿವೆ. ಹೀಗಾಗಿ ಪ್ರತಿಯೊಬ್ಬರೂ ನಿಯಮಿತವಾಗಿ ತಮ್ಮ ಆರೋಗ್ಯ ಪರೀಕ್ಷೆ ಮಾಡಿಸಿಕೊಂಡು ವೈದ್ಯರ ಸಲಹೆ, ಸೂಚನೆಗಳನ್ನು ಪಾಲನೆ ಮಾಡಿದರೆ, ಆರೋಗ್ಯವಂತ ಜೀವನ ನಡೆಸಲು ಸಾಧ್ಯವಿದೆ ಎಂದರು.
ಕಲುಷಿತ ವಾತಾವರಣದಿಂದ ತೊಂದರೆ: ಇತ್ತೀಚಿನ ಆಹಾರ ಪದ್ಧತಿ ಹಾಗೂ ಕಲುಷಿತ ವಾತಾವರಣದಿಂದ ನಮ್ಮ ದೇಹದಲ್ಲಿ ನಮಗೆ ಅರಿವೇ ಇಲ್ಲದೆ ಅನೇಕ ತೊಂದರೆಗಳು ಉಲ್ಬಣಿಸುತ್ತಿವೆ. ಇದನ್ನು ಹತೋಟಿಗೆ ತಂದು ಆರೋಗ್ಯವಂತ ಜೀವನ ನಡೆಸಲು ಆರೋಗ್ಯ ತಪಾಸಣೆ ಶಿಬಿರಗಳು ಪ್ರಯೋಜನವಾಗುತ್ತಿದೆ.
ಈ ಶಿಬಿರದಲ್ಲಿ ಪ್ರಮುಖವಾಗಿ ಹೃದಯ ತಪಾಸಣೆ, ಮಧುಮೇಹ, ಬಿಪಿ, ಕೀಲು ಮತ್ತು ಮೂಳೆ, ಸಾಮಾನ್ಯ ವೈದ್ಯಕೀಯ ಮತ್ತು ಶಸ್ತ್ರ ಚಿಕಿತ್ಸೆ, ಸ್ತ್ರೀರೋಗ, ಪ್ರಸೂತಿ ಸಮಸ್ಯೆ, ಕಿವಿ, ಮೂಗು, ಗಂಟಲಿನ ಸಮಸ್ಯೆ, ಕಣ್ಣಿನ ತಪಾಸಣೆಯನ್ನು ಒಂದೇ ಶಿಬಿರದಲ್ಲಿ ಆಯೋಜನೆ ಮಾಡುವ ಮೂಲಕ ಈ ಭಾಗದ ಜನರಿಗೆ ಅನುಕೂಲ ಮಾಡಿಕೊಡಲಾಗಿದೆ. ಅಲ್ಲದೆ, ಉಚಿತವಾಗಿ ಔಷಧಿಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ಆರ್.ಎಂ.ಸ್ವಾಮಿ, ಜಿಪಂ ಸದಸ್ಯ ಕೆರೆಹಳ್ಳಿ ನವೀನ್, ರೋಟರಿಯನ್‌ಗಳಾದ ಕಾಗಲವಾಡಿ ಚಂದ್ರು, ಎಲ್. ನಾಗರಾಜು, ಪ್ರಕಾಸ್, ಚಂದ್ರಪ್ರಭ ಜೈನ್, ಮೋಹನ್, ಯೋಗರಾಜ್, ಸುರೇಶ್, ನಾರಾಯಣ್, ವೆಂಕಟೇಶ್ ಹಾಜರಿದ್ದರು.