Advertisement

ಆರೋಗ್ಯ ಕಾಳಜಿಗೆ ಕಾರ್ಯಗಾರ ಅಗತ್ಯ

01:06 AM Jun 22, 2019 | Team Udayavani |

ಬೆಂಗಳೂರು: ಆರೋಗ್ಯ ಜಾಗೃತಿಗಾಗಿ ಆಸ್ಪತ್ರೆಗಳು ಸಾರ್ವಜನಿಕರಿಗೆ ತಿಳಿವಳಿಕೆ ಮೂಡಿಸುವ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಬೇಕು ಎಂದು ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಹೇಳಿದರು.

Advertisement

ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆಯು “ಮಕ್ಕಳಲ್ಲಿ ಉಂಟಾಗುವ ರಕ್ತ ಕ್ಯಾನ್ಸರ್‌’ ಕುರಿತು ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.

ಸಾರ್ವಜನಿಕರಿಗೆ ತೊಂದರೆ ಉಂಟಾದರೆ ಕಾನೂನಿನ ಮೂಲಕ ಹೇಗೆ ಪರಿಹಾರ ಕಂಡುಕೊಳ್ಳಬಹುದು ಎಂದು ತಿಳಿಸಲು ಕಾನೂನು ಕಾರ್ಯಾಗಾರ ನಡೆಸಲಾಗುತ್ತದೆ. ಅದೇ ರೀತಿ ಆಸ್ಪತ್ರೆಗಳೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರೆ, ಆರೋಗ್ಯ ಸಮಸ್ಯೆಗಳಿಗೆ ಕಡಿವಾಣ ಬೀಳಲಿದೆ ಎಂದು ಅಭಿಪ್ರಾಯಪಟ್ಟರು.

ನ್ಯಾಯಾಂಗ ಮತ್ತು ವೈದ್ಯಕೀಯ ವೃತ್ತಿಗೆ ಜನರು ಹೆಚ್ಚು ಗೌರವ ಕೊಡುತ್ತಾರೆ. ಈ ಗೌರವವನ್ನು ತಮ್ಮ ಇಚ್ಛಾಶಕ್ತಿಗೆ ಬಳಸಿಕೊಳ್ಳದೆ ಜನರ ಒಳಿತಿಗಾಗಿ ಬಳಸಿಕೊಳ್ಳಬೇಕು. ಖಾಸಗಿ ಆಸ್ಪತ್ರೆಗಳಿಗಿಂತಲೂ ಸರ್ಕಾರಿ ಆಸ್ಪತ್ರೆಯ ವೈದ್ಯರು ಹೆಚ್ಚು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ.

ಖಾಸಗಿ ವೈದ್ಯರಿಗಿಂತ ಮೂರು ಪಟ್ಟು ಹೆಚ್ಚು ರೋಗಿಗಳನ್ನು ಸರ್ಕಾರಿ ಆಸ್ಪತ್ರೆಯ ವೈದ್ಯರು ನಿಭಾಯಿಸುತ್ತಿರುವುದೇ ಇದಕ್ಕೆ ಕಾರಣ. ಆದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಸಾರ್ವಜನಿಕರು ಮತ್ತು ವೈದ್ಯರ ನಡುವೆ ಸಂವಹನದ ಕೊರತೆ ಇದೆ. ಇದು ನಿವಾರಣೆಯಾಗಬೇಕು ಎಂದು ಹೇಳಿದರು.

Advertisement

ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆ ನಿರ್ದೇಶಕ ಡಾ.ಸಿ.ರಾಮಚಂದ್ರ ಅವರು ಮಾತನಾಡಿ, ದೇಶದಲ್ಲೇ ಮೊದಲು ಕಿದ್ವಾಯಿಯಲ್ಲಿ ಇ-ಆಡಳಿತ ಪರಿಚಯಿಸಲಾಗಿದೆ. ದೇಶದ ಹಲವು ರಾಜ್ಯಗಳಿಂದ ಇಲ್ಲಿಗೆ ಜನ ಕ್ಯಾನ್ಸರ್‌ ಚಿಕಿತ್ಸೆಗೆ ಬರುತ್ತಾರೆ.

ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದ್ದು, ಯಾವುದೇ ಲೋಪವಿಲ್ಲದಂತೆ ನೋಡಿಕೊಳ್ಳಲಾಗುತ್ತಿದೆ. ಇನ್ಫೋಸಿಸ್‌ ಸಂಸ್ಥೆ ಹೊಸದಾಗಿ ಐದು ಶಸ್ತ್ರಚಿಕಿತ್ಸೆ ಕೊಠಡಿಗಳನ್ನು ಆರಂಭಿಸಿರುವುದರಿಂದ ಶಸ್ತ್ರಚಿಕಿತ್ಸೆಗೆ ರೋಗಿಗಳು 15 ದಿನಕಾಯಬೇಕಾದ ಪರಿಸ್ಥಿತಿಯೂ ತಪ್ಪಿದೆ ಎಂದು ಹೇಳಿದರು.

“ಮಕ್ಕಳಲ್ಲಿ ಉಂಟಾಗುವ ರಕ್ತ ಕ್ಯಾನ್ಸರ್‌’ ವಿಷಯದ ಕಾರ್ಯಗಾರದಲ್ಲಿ ದೇಶದ ವಿವಿಧ ಭಾಗಗಳಿಂದ ನೂರಕ್ಕೂ ಹೆಚ್ಚು ತಜ್ಞರು ಭಾಗಿಯಾಗಿದ್ದರು. ಕಾರ್ಯಗಾರದಲ್ಲಿ ಮಕ್ಕಳಲ್ಲಿ ಉಂಟಾಗುವ ರಕ್ತ ಕ್ಯಾನ್ಸರ್‌ ತಪ್ಪಿಸಲು ಇರುವ ಸಾಧ್ಯತೆಗಳು, ಚಿಕಿತ್ಸಾ ವಿಧಾನಗಳು ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next