ಉಡುಪಿ: ಆರೋಗ್ಯ ಕಾರ್ಡ್ ಸೌಲಭ್ಯ ನೀಡುವ ಮೂಲಕ ಜಿಲ್ಲೆಯ ಪೊಲೀಸರಿಗೆ ಮಹೋನ್ನತ, ದೊಡ್ಡಮಟ್ಟದ ಉಪಯೋಗ ನೀಡುತ್ತಿದೆ. ಪೊಲೀಸರಿಗೆ ಈ ಸೌಲಭ್ಯ ನೀಡುವ ವ್ಯವಸ್ಥೆ ಬೇರೆ ಎಲ್ಲಿಯೂ ಇಲ್ಲ. ಆ ಮೂಲಕ ಉಡುಪಿಯೂ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಎಸ್‌ಪಿ ಕೆ. ಟಿ. ಬಾಲಕೃಷ್ಣ ಹೇಳಿದರು.
ಅವರು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ, ಯುವ ಮೊಗವೀರ ಸಂಘಟನೆ ಹಾಗೂ ಮಣಿಪಾಲ ವಿ.ವಿ. ಸಹಯೋಗದಲ್ಲಿ ಎಸ್‌ಪಿ ಕಚೇರಿಯಲ್ಲಿ ನಡೆದ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ಸಿಬಂದಿ ಹಾಗೂ ನಿವೃತ್ತ ಪೊಲೀಸ್ ಸಿಬಂದಿಗೆ ಮಣಿಪಾಲ ಸುರಕ್ಷಾ ಆರೋಗ್ಯ ಕಾರ್ಡ್ ವಿತರಿಸಿ ಮಾತನಾಡಿದರು.
ಸರಕಾರದಿಂದಲೂ ಸೇವೆಯಲ್ಲಿರುವ ಪೊಲೀಸರಿಗೆ ಆರೋಗ್ಯ ಭಾಗ್ಯ ಯೋಜನೆಯಿಂದ ಕೆಲವು ಸವಲತ್ತುಗಳು ಸಿಗುತ್ತಿವೆ. ಆದರೆ ನಿವೃತ್ತರಾದವರಿಗೆ ಇದ್ಯಾವ ಸೇವೆಯೂ ಲಭಿಸುತ್ತಿಲ್ಲ. ಜಿ. ಶಂಕರ್ ಅವರು ನಿವೃತ್ತ ಸಿಬಂದಿ ಹಾಗೂ ಕುಟುಂಬದವರಿಗೂ ಈ ಆರೋಗ್ಯ ಕಾರ್ಡ್ ವಿತರಿಸುತ್ತಿರುವುದು ಶ್ಲಾಘಧಿನೀಯ ಕಾರ್ಯ. ಈ ಸೇವೆ ಜಿಲ್ಲೆಯ ಇತರ ಇಲಾಖೆಯ ಅಧಿಕಾರಿಗಳಿಗೂ ಸಿಗಲಿ. ರಾಜ್ಯಾದ್ಯಂತ ಈ ಯೋಜನೆ ವಿಸ್ತರಿಸಲಿ ಎಂದರು.
ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ನಾಡೋಜ ಡಾ| ಜಿ. ಶಂಕರ್ ಮಾತನಾಡಿ, ಪ್ರತಿ ವರ್ಷ 25,000 ಕುಟುಬಂಗಳ 1.25 ಲಕ್ಷ ಮಂದಿಗೆ ಈ ಸೌಲಭ್ಯ ನೀಡುತ್ತಿದ್ದೇವೆ. ಪೊಲೀಸರು ದೊಡ್ಡ ಹೊಣೆಗಾರಿಕೆ ನಿರ್ವಹಿಸುತ್ತಿದ್ದಾರೆ. ಅವರಿಗೆ ಈ ಸೇವೆ ಅನುಕೂಲವಾಗಲಿ. ಗ್ರಾಮೀಣ ಪ್ರದೇಶದಲ್ಲಿರುವವರಿಗೆ ಅನುಕೂಲ ವಾಗುತ್ತಿದೆ. ಎಲ್ಲರಿಗೂ ಉತ್ತಮ ಆರೋಗ್ಯವನ್ನು ಕರುಣಿಸಲಿ. ಸರಕಾರದಿಂದ ಪೊಲೀಸರಿಗೆ ಇನ್ನಷ್ಟು ಸೌಲಭ್ಯ ಗಳು ಸಿಗುವಂತಾಗಲಿ ಎಂದರು.
ಜಿಲ್ಲೆಯ ಒಟ್ಟು 950 ಪೊಲೀಸ್ ಸಿಬಂದಿಗೆ ಆರೋಗ್ಯ ಕಾರ್ಡ್ ವಿತರಿಸಲಾಗುತ್ತದೆ.
ಮಣಿಪಾಲ ವಿ.ವಿ.ಯ ಸಹಕುಲಪತಿ, ಎಂಐಟಿ ನಿರ್ದೇಶಕ ಡಾ| ಜಿ. ಕೆ. ಪ್ರಭು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ನಿವೃತ್ತ ಪೊಲೀಸ್ ಸಿಬಂದಿ ಸಂಘದ ಅಧ್ಯಕ್ಷ ಪ್ರಭುದೇವ ಮಾಣೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎನ್. ವಿಷ್ಣುವರ್ಧನ್ ಉಪಸ್ಥಿತರಿದ್ದರು. ಯುವ ಮೊಗವೀರ ಸಂಘಟನೆಯ ಜಿಲ್ಲಾಧ್ಯಕ್ಷ ಗಣೇಶ್ ಕಾಂಚನ್ ಸ್ವಾಗತಿಸಿದರು. ಚಂದ್ರೇಶ್ ಪಿತ್ರೋಡಿ ಅವರು ವಂದಿಸಿದರು.