Advertisement

ಪೋಷಕಾಂಶ ಹಾಗೂ ಖನಿಜಾಂಶಗಳ ಆಗರ: ನಿತ್ಯ ಸಂಜೀವಿನಿ ಈ ಎಳನೀರು…

03:45 PM Jan 31, 2023 | Team Udayavani |

ಎಳನೀರಿನಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಹಾಗೂ ಖನಿಜಾಂಶಗಳಿದ್ದು, ಇದು ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಎಳನೀರಿನ ತೆಂಗಿನ ಮರವನ್ನು ಕಲ್ಪವೃಕ್ಷ ಎಂದೂ ಕರೆಯುತ್ತಾರೆ.

Advertisement

ಬೇಸಿಗೆ ಕಾಲ, ಚಳಿಗಾಲ, ಮಳೆಗಾಲ ಹೀಗೆ ಯಾವ ಕಾಲದಲ್ಲಿಯೂ ನಮ್ಮ ದೇಹದಲ್ಲಿ ನೀರಿನಾಂಶ ಇರುವಂತೆ ಕಾಪಾಡುವ ಪಾನೀಯ ಇದು ಎಂದರೆ ತಪ್ಪಲ್ಲ. ಬೇಸಿಗೆಯಲ್ಲಿ ಬಾಯಾರಿಕೆ ತಣಿಸಿದರೆ, ಚಳಿಗಾಲದಲ್ಲಿ ದೇಹವನ್ನು ಶುಷ್ಕವಾಗದಂತೆ ಕಾಪಾಡುತ್ತದೆ.

ಎಳನೀರು ಸೇವಿಸುವುದರಿಂದ ತಕ್ಷಣವೇ ದೇಹದಲ್ಲಿ ಶಕ್ತಿಸಂಚಯವಾಗುವುದರಿಂದ ಕ್ರೀಡಾ ಕ್ಷೇತ್ರದವರಿಗೆ ಅತೀ ಉತ್ತಮವಾಗಿ ಉಪಯೋಗವಾಗುವ ಪಾನೀಯ. ನಿಯಮಿತವಾಗಿ ವ್ಯಾಯಾಮ ಮಾಡುವವರು ಎಲೆಕ್ಟ್ರೋಲೈಟ್ಸ್​ ಗೆ ಪರ್ಯಾಯವಾಗಿ ಈ ಪಾನಿಯವನ್ನು ಸೇವಿಸಬಹುದು. ಇದರಲ್ಲಿ ಹೇರಳವಾಗಿ ಜೀವಸತ್ವಗಳು ಖನಿಜಗಳು ಲಭ್ಯವಾಗುತ್ತದೆ.

ಎಳನೀರಿನ ಉಪಯೋಗ ಕೇವಲ ಕುಡಿಯುವುದಕ್ಕಾಗಿ ಮಾತ್ರವಲ್ಲದೇ, ಚರ್ಮ ಮತ್ತು ಕೂದಲ ಆರೈಕೆಗೂ ಬಳಸಬಹುದು. ಎಳನೀರಿನ ಉಪಯೋಗಗಳ ಬಗ್ಗೆ ಮೊದಲು ತಿಳಿದುಕೊಳ್ಳೋಣ.

ತೂಕ ಇಳಿಸಿಕೊಳ್ಳಲು ಸಹಕಾರಿ:

Advertisement

ಎಳನೀರಿನಲ್ಲಿ ಫೈಬರ್ ಅಂಶ ಹೆಚ್ಚಾಗಿದ್ದು, ಕೊಬ್ಬಿನಾಂಶ ಕಡಿಮೆ ಇರುತ್ತದೆ. ಫೈಬರ್ ದೇಹದ ಜೀರ್ಣ ಕ್ರಿಯೆ ನಿಧಾನಗೊಳಿಸಿ, ಹಸಿವನ್ನು ನಿಗ್ರಹಿಸುತ್ತದೆ. ಆದ್ದರಿಂದ ತಾಜಾ ಎಳನೀರು ತೂಕ ನಷ್ಟ ಅಥವಾ ತೂಕ ನಿರ್ವಹಣೆ ಮಾಡಲು ಸಹಕಾರಿಯಾಗಿದೆ. ಒಂದು ಕಪ್ ಎಳನೀರು ಕೇವಲ 48 ಕ್ಯಾಲೋರಿಗಳನ್ನು ಹೊಂದಿರುತ್ತದೆ. ಇದು ತೂಕವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

ದೇಹದ ಶಕ್ತಿ ಹೆಚ್ಚಿಸುತ್ತದೆ:

ಎಳನೀರಿನಲ್ಲಿ ವಿವಿಧ ಪೌಷ್ಠಿಕ ಆಹಾರಗಳಿದ್ದು, ಇದು ದಿನಪೂರ್ತಿ ಅಗತ್ಯವಾದ ಶಕ್ತಿ ನೀಡುತ್ತದೆ. ಇದರಲ್ಲಿ ಕಡಿಮೆ ಪ್ರಮಾಣದಲ್ಲಿ ಸಕ್ಕರೆ ಮತ್ತು ಸೋಡಿಯಂ ಇದ್ದು ಹೆಚ್ಚಿನ ಪ್ರಮಾಣದಲ್ಲಿ ಪೊಟ್ಯಾಶಿಯಂ, ಕ್ಯಾಲ್ಸಿಯಂ ಮತ್ತು ಕ್ಲೋರೈಡ್ ಇವೆ ಎನ್ನಲಾಗುತ್ತದೆ. ಈ ಪ್ರಮಾಣದಲ್ಲಿರುವಾಗ ದೇಹಕ್ಕೆ ಶಕ್ತಿ ಒಮ್ಮೆಲೇ ಬಿಡುಗಡೆಯಾಗದೇ ನಿಧಾನಕ್ಕೆ ಶಕ್ತಿ ಉಡುಗಿದಂತೆ ಪೂರೈಸುತ್ತಾ ಹೋಗುತ್ತದೆ. ಈ ಕಾರಣದಿಂದ ದೈಹಿಕ ಕೆಲಸವನ್ನು ದಿನಪೂರ್ತಿ ಹೆಚ್ಚಿನ ಆಯಾಸವಿಲ್ಲದೇ ನಿರ್ವಹಿಸಲು ಸಾಧ್ಯವಾಗುತ್ತದೆ.

ಕಿಡ್ನಿಸ್ಟೋನ್ಸ್ ನಿಯಂತ್ರಣಕ್ಕೆ ಸಹಕಾರಿ:

ಹೆಚ್ಚು ನೀರು ಕುಡಿಯುವುದರಿಂದ ಕಿಡ್ನಿಯಲ್ಲಿರುವ ಕಲ್ಲು ಹೊರ ಬರುತ್ತದೆ ಎಂದು ಹೇಳಲಾಗುತ್ತದೆ. ಕಿಡ್ನಿಸ್ಟೋನ್ಸ್ ಸಮಸ್ಯೆಯಿಂದ ಬಳಲುವವರು ನೀರು ಹೆಚ್ಚಾಗಿ ಕುಡಿಯುವುದರಿಂದ ಕಿಡ್ನಿಯಲ್ಲಿರುವ ಕಲ್ಲುಗಳು ನಿಯಂತ್ರಣವಾಗುತ್ತದೆ. ಮೂತ್ರಪಿಂಡಗಳಲ್ಲಿ ಸಂಗ್ರಹಗೊಳ್ಳುವ ಲವಣಾಂಶಗಳನ್ನು ಮೂತ್ರದ ಮೂಲಕ ಹೊರ ಹಾಕಲು ಎಳನೀರು ಸಹಾಯ ಮಾಡುತ್ತದೆ. ಎಳನೀರನ್ನು ಮಧ್ಯಮ ಪ್ರಮಾಣದಲ್ಲಿ ಕುಡಿದರೆ ಮೂತ್ರಪಿಂಡದ ಕಲ್ಲುಗಳ ರಚನೆ ತಡೆಯಲು ಸಹಕಾರಿ.

ಮಧುಮೇಹ ನಿಯಂತ್ರಣ:

ಎಳನೀರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಮತ್ತು ಮಧುಮೇಹ ರೋಗಲಕ್ಷಣಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.

ರಕ್ತದೊತ್ತಡ ನಿಯಂತ್ರಣ:

ಎಳನೀರಿನಲ್ಲಿ ಪೊಟ್ಯಾಸಿಯಮ್ ಹೆಚ್ಚಾಗಿರುವುದರಿಂದ ಇದು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಚರ್ಮದ ಆರೈಕೆಗೂ ಉತ್ತಮ:

ಮುಖದಲ್ಲಿರುವ ಮೊಡವೆಗಳನ್ನು ನಿವಾರಿಸಲು ಸಹಕರಿಯಾಗಿದೆ. ತೆಂಗಿನ ಕಾಯಿ ನೀರನ್ನು ಮೊಡವೆ, ಕಲೆಗಳು, ಸುಕ್ಕುಗಳು ಇರುವ ಜಾಗಗಳಿಗೆ ನಿರಂತರವಾಗಿ ಎರಡರಿಂದ ಮೂರು ವಾರಗಳ ಕಾಲ ರಾತ್ರಿ ಹಚ್ಚಿ ಮಲಗಿದರೆ ತ್ವಚೆ ಸ್ವಚ್ಛವಾಗುತ್ತದೆ ಹಾಗೂ ಕಾಂತಿಯುತವಾಗುತ್ತದೆ. ಎಳನೀರು ಹೆಚ್ಚಾಗಿ ಕುಡಿಯುತ್ತಿರುವುದರಿಂದ ಚರ್ಮದಲ್ಲಿರುವ ಹೆಚ್ಚಿನ ಎಣ್ಣೆ ಅಂಶ ಕಡಿಮೆಯಾಗುತ್ತದೆ.

ಕೂದಲ ಸಮಸ್ಯೆ:

ಎಳನೀರಿನಲ್ಲಿರುವ ವಿವಿಧ ವಿಟಮಿನ್ ಮತ್ತು ವಿಶೇಷವಾಗಿ ವಿಟಮಿನ್ ಕೆ ಮತ್ತು ಕಬ್ಬಿಣದ ಅಂಶ ಕೂದಲಿಗೆ ಸಹಕಾರಿಯಾಗಿದೆ. ಕೂದಲನ್ನು ಕೊಂಚ ಎಳನೀರಿನಿಂದ ಮಸಾಜ್ ಮಾಡುವುದರಿಂದ ತಲೆಯ ಚರ್ಮದಲ್ಲಿ ರಕ್ತಸಂಚಾರ ಹೆಚ್ಚುತ್ತದೆ. ಇದರ ಪರಿಣಾಮ ಕೂದಲ ಬುಡ ಹೆಚ್ಚು ಶಕ್ತಿಯುತವಾಗುತ್ತವೆ. ಕೂದಲು ಉದುರುವುದು ಕಡಿಮೆಯಾಗಿ ಕೂದಲ ಹೊಳಪು ಹೆಚ್ಚುತ್ತದೆ. ಕೂದಲು ಮೃದುವಾಗಿಸುವಲ್ಲಿ ಕೂಡಾ ಸಹಾಯ ಮಾಡುತ್ತದೆ.

*ಕಾವ್ಯಶ್ರೀ

Advertisement

Udayavani is now on Telegram. Click here to join our channel and stay updated with the latest news.

Next