ಉಡುಪಿ: ರಾಜಸ್ಥಾನ ರಾಜ್ಯದ ಉತ್ತರ ಭಾಗದಲ್ಲಿರುವ ಆಲ್ವಾರ್ ಜಿಲ್ಲೆಯ ಟಿಜಾರ ದಲ್ಲಿರುವ ಪ್ರೇಮ ಪೀಠ ಭಕ್ತಿಧಾಮ ಸಂಸ್ಥಾನಕ್ಕೆ ಸುಮಾರು 550 ವರ್ಷಗಳ ಇತಿಹಾಸವಿದೆ. ಇದು ಉಡುಪಿ ಶ್ರೀಕೃಷ್ಣ ಮಠಕ್ಕೆ ಸಂಬಂಧಿಸಿದ ತಣ್ತೀಜ್ಞಾನವನ್ನು ಪಸರಿಸುತ್ತಿದೆಯಾದರೂ ಭೌಗೋಳಿಕ ದೂರದಿಂದ ಸಂಪರ್ಕ ಕಡಿದು ಹೋಗಿತ್ತು. ಪ್ರಸ್ತುತ ಗೃಹಸ್ಥ ಪೀಠಾಧಿಪತಿ ಸ್ವಾಮಿ ಶ್ರೀ ಲಲಿತಮೋಹನಾಚಾರ್ಯರ ಪ್ರಯತ್ನದ ಫಲವಾಗಿ ಉಡುಪಿಯೊಂದಿಗೆ ಮರುಸಂಪರ್ಕ ಆಗಿದೆ.
ಇವರದು ಕಾಷಾಯ ವಸ್ತ್ರ ಧರಿಸುವ ಸಂಪ್ರದಾಯವಲ್ಲ. ಇವರು ಗೃಹಸ್ಥರು. ಕುಟುಂಬ ಸದಸ್ಯರೊಂದಿಗೆ ಇದ್ದು, ಪೀಠಾಧಿಪತಿಗಳು ಮಾಡುವ ಧರ್ಮ ಪ್ರಚಾರ ಕಾರ್ಯವನ್ನು ಮಾಡುತ್ತಾರೆ.
ಟಿಜಾರ ಊರು ದಿಲ್ಲಿಯಿಂದ 100 ಕಿ.ಮೀ. ದೂರದಲ್ಲಿದೆ. ಮಧುರೆ ಮೂಲದ ತೆಲುಗು ಮಾತನಾಡುವ ನಾರಾಯಣ ಭಟ್ಟರು ಉತ್ತರ ಪ್ರದೇಶದ ವೃಂದಾವನ, ರಾಧೆಯ ಜನ್ಮಸ್ಥಳ ಬರ್ಸಾನದಲ್ಲಿ ಮಧ್ವಾಚಾರ್ಯರ ಸಂಪ್ರದಾಯವನ್ನು ಸುಮಾರು 550 ವರ್ಷಗಳ ಹಿಂದೆ ಹುಟ್ಟು ಹಾಕಿದರು. ಇವರ ಭಕ್ತಿ ಸಿದ್ಧಾಂತದಿಂದಾಗಿ ಕೃಷ್ಣನ ಕರ್ಮಭೂಮಿ ಬೃಜ ಪ್ರದೇಶದಲ್ಲಿ ನಾರಾಯಣ ಭಟ್ಟರು ಬೃಜಾಚಾರ್ಯ ರೆಂದು ಪ್ರಸಿದ್ಧರಾದರು. ಇವರು ಆರಂಭಿಸಿದ ಕೇಂದ್ರ ಸ್ಥಾನ ರಾಜಸ್ಥಾನದ ಬರ್ಸಾನದ ಊಂಚಾವ್ ಗ್ರಾಮದಲ್ಲಿದೆ. ಇವರು ಎಂಟು ಶಿಷ್ಯರನ್ನು ಹೊಂದಿದ್ದರು. ಇವರಲ್ಲಿ ಮುಖ್ಯಸ್ಥರಾಗಿದ್ದವರು ಟಿಜಾರಾ ಪ್ರೇಮಪೀಠದ ಮೂಲ ಪುರುಷ ಸ್ವಾಮಿ ಮಥುರಾದಾಸ್. ನಾರಾಯಣ ಭಟ್ಟ ಚರಿತಾಮೃತಮ್, ಬೃಜ ಭಕ್ತಿ ವಿಲಾಸದಲ್ಲಿ ಪರಂಪರೆಯ ಉಲ್ಲೇಖ ಗಳಿವೆ. ಇವರ ಪರಂಪರೆಯಲ್ಲಿ ಈಗಿರುವವರೇ 22ನೇ ಪೀಠಾಧಿಪತಿ ಲಲಿತ ಮೋಹನಾಚಾರ್ಯರು.
ಲಲಿತ ಮೋಹನಾಚಾರ್ಯರ ತಂದೆ ಗೋವಿಂದಸ್ವಾಮಿ ಹಿಂದೆ ಪೀಠಾಧಿಪತಿಯಾಗಿದ್ದರು. ಅವರ ಕಾಲಾನಂತರ 2001ರ ಜೂ. 2ರಂದು ಲಲಿತ ಮೋಹನಾಚಾರ್ಯರು ಪೀಠಾಧಿಪತಿ ಯಾದರು. ಇವರದು ಕೀರ್ತನ ಪರಂಪರೆ. ಭಗವದ್ಗೀತೆ, ಶ್ರೀಮದ್ಭಾಗವತ ಮೊದಲಾದ ಧಾರ್ಮಿಕ ಪ್ರವಚನವನ್ನು ನಡೆಸಿ ಧಾರ್ಮಿಕ ಜಾಗೃತಿ ಮಾಡುತ್ತಿದ್ದಾರೆ. ಲಲಿತ ಮೋಹನಾಚಾರ್ಯರು ಪೀಠಾಧಿಪತಿಯಾದ ಬಳಿಕ ಮೊದಲ ಬಾರಿಗೆ 2008ರಲ್ಲಿ ಉಡುಪಿಗೆ ಬಂದು ಶ್ರೀ ಪೇಜಾವರ ಮಠಾಧೀಶರೇ ಮೊದಲಾದ ಪೀಠಾಧಿಪತಿಗಳೊಂದಿಗೆ ಸಂಪರ್ಕ ಆರಂಭಿಸಿದರು. ಇದರ ಪರಿಣಾಮ ಅನೇಕ ಉಡುಪಿಯ ಪೀಠಾಧಿಪತಿಗಳು ಟಿಜಾರಾಕ್ಕೆ ಭೇಟಿ ನೀಡಿದ್ದಾರೆ. ಲಲಿತ ಮೋಹನಾಚಾರ್ಯರು ವಿಶ್ವ ಹಿಂದೂ ಪರಿಷದ್ ರಾಜಸ್ಥಾನ ರಾಜ್ಯದ ಉಪಾಧ್ಯಕ್ಷರಾಗಿದ್ದು ಹೋದ ವರ್ಷ ಉಡುಪಿಯಲ್ಲಿ ನಡೆದ ಧರ್ಮ ಸಂಸದ್ ಅಧಿವೇಶನದಲ್ಲಿಯೂ
ಪಾಲ್ಗೊಂಡಿದ್ದರು.
ಮೂರು ದಿನಗಳ ಉಡುಪಿ ಭೇಟಿಗೆಂದು ರವಿವಾರ ಆಗಮಿಸಿದ ಅವರು “ಉದಯವಾಣಿ’ಯೊಂದಿಗೆ ಮಾತನಾಡಿ, ತಮ್ಮ ಪರಂಪರೆಯ ಕ್ಷೇತ್ರವಾದ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ಕೊಡಲು ಸಂತಸವಾಗುತ್ತಿದೆ, ನಾವೂ ಉಡುಪಿಯ ಪೀಠಾಧಿಪತಿಗಳನ್ನು ಟಿಜಾರಾಕ್ಕೆ ಆಮಂತ್ರಿಸುತ್ತಿದ್ದೇವೆ. ಹಲ ವಾರು ಪೀಠಾಧಿಪತಿಗಳು ನಮ್ಮ ಮಠಕ್ಕೆ ಆಗಮಿಸಿದ್ದಾರೆಂದು ತಿಳಿಸಿದರು.
ಗೃಹಸ್ಥ ಜೀವನದ ಧರ್ಮಪ್ರಚಾರ ಕಾರ್ಯ
ನಾರಾಯಣ ಭಟ್ಟರನ್ನು ನಾರದರ ಅವತಾರವೆಂದು ನಂಬುತ್ತೇವೆ. ನಮ್ಮ ವಂಶದ ಹಿರಿಯರಾದ ಸ್ವಾಮಿ ಮಥುರಾದಾಸರು ಎಷ್ಟು ಪ್ರಭಾವಶಾಲಿಗಳೆಂದರೆ ಅವರ ಶಿಷ್ಯೆ ಭಕ್ತಿಯ ಪರಾಕಾಷ್ಠೆಯಂತಿದ್ದ ಮೀರಾ ಬಾಯಿ. ನಾವು ನಮ್ಮ ಹಿರಿಯರಿಂದ ಬಂದ ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದೇವೆ. ನಮ್ಮ ಪರಂಪರೆಯಲ್ಲಿ ಶಾಸ್ತ್ರಜ್ಞಾನದ ಜತೆ ಜ್ಯೋತಿಷ, ವಾಸ್ತುಶಾಸ್ತ್ರದ ವಿದ್ವಾಂಸರು ಬೆಳಗಿದ್ದಾರೆ. ನಾವು ಭಕ್ತರಿಂದ ದೇಣಿಗೆ ಪಡೆಯದೆ ಜ್ಯೋತಿಷ, ವಾಸ್ತುಶಾಸ್ತ್ರದಿಂದ ಬಂದ ಆದಾಯವನ್ನು ಧರ್ಮಪ್ರಚಾರಕ್ಕಾಗಿ ಬಳಸುತ್ತಿದ್ದೇವೆ. ನಮ್ಮದು ಗೃಹಸ್ಥ ಜೀವನದ ಧರ್ಮಪ್ರಚಾರ ಕಾರ್ಯ. ಶ್ರೀಕೃಷ್ಣ ಜನ್ಮಾಷ್ಟಮಿ, ಕಾರ್ತಿಕ ಮಾಸದ ದಾಮೋದರ ಉತ್ಸವ, ದೀಪಾವಳಿ, ಗುರುಪೂರ್ಣಿಮದಂತಹ ಪರ್ವಕಾಲದಲ್ಲಿ ನಡೆಸುವ ಧಾರ್ಮಿಕ ಆಚರಣೆಗಳಲ್ಲದೆ ಆರ್ಥಿಕವಾಗಿ ಹಿಂದುಳಿದವರಿಗೆ ನೆರವು, ಬಡವರ ಮದುವೆಗಳಿಗೆ ನೆರವು ಇತ್ಯಾದಿ ಸಾಮಾಜಿಕ ಸೇವೆಗಳನ್ನು ನಡೆಸುತ್ತಿದ್ದೇವೆ.
– ಸ್ವಾಮಿ ಶ್ರೀಲಲಿತಾ ಮೋಹನಾಚಾರ್ಯ