Advertisement

ವಿದ್ಯಾರ್ಥಿಗಳನ್ನು ಆಕರ್ಷಿಸಲು ಆಂದೋಲನ 

06:00 AM Apr 25, 2018 | |

ಬೆಂಗಳೂರು: ಒಂದನೇ ತರಗತಿಯಿಂದ ಪದವಿಯವರೆಗೆ ಸರ್ಕಾರಿ ಶಾಲಾ- ಕಾಲೇಜುಗಳಿಗೆ ವಿದ್ಯಾರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ಸಾರ್ವಜನಿಕ ಶಿಕ್ಷಣ, ಪದವಿ ಪೂರ್ವ ಶಿಕ್ಷಣ ಹಾಗೂ ಕಾಲೇಜು ಶಿಕ್ಷಣ ಇಲಾಖೆ ಆಂದೋಲನ ಕೈಗೊಂಡಿವೆ. 2018-19ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ 45 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಶಾಲಾ-ಕಾಲೇಜುಗಳತ್ತ ಆಕರ್ಷಿಸುವುದು ಆಂದೋಲನದ ಗುರಿಯಾಗಿದ್ದು, ಇದಕ್ಕಾಗಿ ದಾಖಲಾತಿ ಹೆಚ್ಚಿಸುವ ಜವಾಬ್ದಾರಿಯನ್ನು ಮುಖ್ಯೋಪಾಧ್ಯಾಯರು ಹಾಗೂ ಪ್ರಾಂಶುಪಾಲರಿಗೆ ವಹಿಸಲಾಗಿದೆ. ಪ್ರಸ್ತುತ ಸರ್ಕಾರಿ ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿಗಳನ್ನು ಸೆಳೆಯಲು ಉಚಿತ ಸಮವಸ್ತ್ರ,
ಮಧ್ಯಾಹ್ನದ ಬಿಸಿಯೂಟ, ಪೌಷ್ಠಿಕಾಂಶ ಯುಕ್ತ ಮಾತ್ರೆ, ವಿದ್ಯಾರ್ಥಿನಿಯರಿಗೆ ಶುಲ್ಕ ರಹಿತ ಶಿಕ್ಷಣ, ಲ್ಯಾಪ್‌ಟಾಪ್‌ ಹೀಗೆ ಹತ್ತಾರು ಯೋಜನೆಗಳಿದ್ದರೂ ವಿದ್ಯಾರ್ಥಿಗಳು ನಿರೀಕ್ಷಿತ ಸಂಖ್ಯೆಯಲ್ಲಿ ದಾಖಲಾಗುತ್ತಿಲ್ಲ. ಹೀಗಾಗಿ, ಆಂದೋಲನ ನಡೆಸಲು ತೀರ್ಮಾನಿಸಲಾಗಿದೆ.

Advertisement

ರಾಜ್ಯದಲ್ಲಿ 43,712 ಸರ್ಕಾರಿ ಪ್ರಾಥಮಿಕ ಶಾಲೆ, 4,618 ಪ್ರೌಢಶಾಲೆ ಹಾಗೂ 1,210 ಪಿಯು ಕಾಲೇಜುಗಳಿವೆ. 2017-18ನೇ ಸಾಲಿನಲ್ಲಿ ಪ್ರಾಥಮಿಕ ಶಾಲೆಗೆ 38,60,203, ಪ್ರೌಢಶಾಲೆಗೆ 5,97,332 ಸೇರಿ 1ರಿಂದ 10ನೇ ತರಗತಿಗೆ 44,57,353 ವಿದ್ಯಾರ್ಥಿಗಳು ದಾಖಲಾಗಿದ್ದರು. ಮುಂದಿನ ವರ್ಷ 50 ಸಾವಿರ ವಿದ್ಯಾರ್ಥಿಗಳನ್ನು ದಾಖಲಿಸಲು ಕಾರ್ಯತಂತ್ರ ರೂಪಿಸಲಾಗಿದೆ. ಪ್ರಾಥಮಿಕ ಶಾಲೆಗಳಲ್ಲಿ ಮುಖ್ಯೋಪಾಧ್ಯಾಯರು ಹಾಗೂ ಸಹ ಶಿಕ್ಷಕರು ಮಕ್ಕಳ ದಾಖಲಾತಿ ಹೆಚ್ಚಿಸುವ ಪ್ರಕ್ರಿಯೆ ಆರಂಭಿಸಿದ್ದು ತಮ್ಮ ಶಾಲಾ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಲ್ಲಿದ್ದ ಮಕ್ಕಳ ಸಂಖ್ಯೆ ಸಂಗ್ರಹಿಸಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ನೀಡುತ್ತಿರುವ ಸೌಲಭ್ಯಗಳನ್ನು ಪಾಲಕ-ಪೋಷಕರಿಗೆ ತಿಳಿಸುವ ಕೆಲಸ ಮಾಡುತ್ತಿದ್ದಾರೆ. 

ಪ್ರಾಂಶುಪಾಲರಿಗೆ ಜವಾಬ್ದಾರಿ: ಸರ್ಕಾರಿ ಪಿಯು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸುವ ಜವಾಬ್ದಾರಿಯನ್ನು ಪ್ರಾಂಶುಪಾಲರಿಗೆ ವಹಿಸಲಾಗಿದೆ. ಸಮೀಪದ ಪ್ರೌಢಶಾಲೆಗಳಲ್ಲಿರುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಿಸುವಂತೆ ಸೂಚಿಸಿದ್ದಾರೆ. ಎಸ್ಸೆಸ್ಸೆಲ್ಸಿ ಫ‌ಲಿತಾಂಶ ಹೊರ ಬೀಳುತ್ತಿದ್ದಂತೆ ಶಾಲೆಗಳಿಗೆ ವರ್ಗಾವಣೆ ಪತ್ರ ಪಡೆಯಲು ಬರುವ
ವಿದ್ಯಾರ್ಥಿಗಳನ್ನು ಸಂಪರ್ಕಿಸಿ, ಸಮೀಪದ ಸರ್ಕಾರಿ ಪಿಯು ಕಾಲೇಜಿಗೆ ಸೇರಿಕೊಳ್ಳಲು ಉತ್ತೇಜಿಸಲು ನಿರ್ದೇಶನ ನೀಡಿದ್ದಾರೆ. ಫ‌ಲಿತಾಂಶ ಬಂದ ನಂತರ ಒಬ್ಬ ಉಪನ್ಯಾಸಕ ಅಥವಾ ಪ್ರಾಂಶುಪಾಲರೇ ಖುದ್ದಾಗಿ ಸಮೀಪದ ಪ್ರೌಢಶಾಲೆಗೆ ಹೋಗಿ ವಿದ್ಯಾರ್ಥಿಗಳನ್ನು ತಮ್ಮ ಕಾಲೇಜಿಗೆ ಸೇರಿಸಿಕೊಳ್ಳುವ ಕುರಿತು ಆಕರ್ಷಿಸಲು ಸೂಚಿಸಲಾಗಿದೆ ಎಂದು ಪಿಯು ಇಲಾಖೆ ಹಿರಿಯ
ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. 

ಸರ್ಕಾರಿ ಪದವಿ ಕಾಲೇಜಿನಲ್ಲೂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಅಧಿಕಾರಿಗಳು ರೂಪುರೇಷೆ ಸಿದ್ಧಪಡಿಸುತ್ತಿದ್ದಾರೆ. ಕಾಲೇಜು ಶಿಕ್ಷಣ ಇಲಾಖೆ ಅಡಿಯಲ್ಲಿ 400ಕ್ಕೂ ಅಧಿಕ ಕಾಲೇಜುಗಳಿದ್ದು, ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸಲು ಆಂದೋಲನ ನಡೆಸಲು ಮುಂದಾಗಿದ್ದಾರೆ. ಜತೆಗೆ ವಿದ್ಯಾರ್ಥಿಗಳ ಆಯ್ಕೆಗೆ ಅನುಗುಣವಾಗಿ ಕಾಲೇಜುಗಳಲ್ಲಿ ವಿಷಯವಾರು ಕಾಂಬಿನೇಷನ್‌ ಹೆಚ್ಚಿಸಲು ಕ್ರಮ
ಕೈಗೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. 

ಇದರ ಜವಾಬ್ದಾರಿಯನ್ನು ಕಾಲೇಜಿನ ಪ್ರಾಂಶುಪಾಲರಿಗೆ ವಹಿಸಲಾಗಿದೆ. ಸಮೀಪದ ಪ್ರೌಢಶಾಲೆಗಳಲ್ಲಿರುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಮಾಹಿತಿ ಪಡೆಯಲಿದ್ದಾರೆ.
● ಸಿ.ಶಿಖಾ, ನಿರ್ದೇಶಕಿ, ಪಿಯು ಇಲಾಖೆ

Advertisement

ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆ ಆರಂಭಿಸಿದ್ದೇವೆ. ಸ್ಥಳೀಯವಾಗಿ ಸರ್ಕಾರಿ ಶಾಲೆಗೆ ಮಕ್ಕಳನ್ನು ಆಕರ್ಷಿಸಲು ಬೇಕಾದ
ಕ್ರಮ ತೆಗೆದುಕೊಳ್ಳಲಾಗಿದೆ. ಶಾಲಾ ಮುಖೋಪಾಧ್ಯಾಯರು ಇದರ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.

● ಬಿ.ಕೆ.ಬಸವರಾಜು, ನಿರ್ದೇಶಕ, ಪ್ರಾಥಮಿಕ ಶಿಕ್ಷಣ

ರಾಜು ಖಾರ್ವಿ

Advertisement

Udayavani is now on Telegram. Click here to join our channel and stay updated with the latest news.

Next