ಕಿನ್ನಿಗೋಳಿ: ಇಲ್ಲಿನ ಮುಖ್ಯರಸ್ತೆ, ಮೂರು ಕಾವೇರಿ ರಾಜ್ ಹೆರಿಟೇಜ್ ಕಟ್ಟಡದಲ್ಲಿ ಗೂಡು ಕಟ್ಟಿದ್ದ ಹೆಜ್ಜೇನುಗಳು ರಸ್ತೆಯಲ್ಲಿ ಸಂಚರಿಸುತ್ತಿದ್ದ ಜನರ ಮೇಲೆ ಸೋಮವಾರ ಬೆಳಿಗ್ಗೆ ಏಕಾಏಕಿ ದಾಳಿ ನಡೆಸಿದ್ದು, 8 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಒಬ್ಬರು ವಾಕಿಂಗ್ ಹೋಗುತ್ತಿದ್ದ ವ್ಯಕ್ತಿ, ಶಿಕ್ಷಕರು, ಕೆಲಸಕ್ಕೆ ಹೋಗುತ್ತಿದ್ದವರು ಸೇರಿ 8ರಿಂದ 10 ಮಂದಿ ಮೇಲೆ ಏಕಾಏಕಿ ದಾಳಿ ನಡೆಸಿದೆ.
ಪಕ್ಷಿಯೊಂದು ಗೂಡಿಗೆ ಕುಕ್ಕಿದ ಕಾರಣದಿಂದ ಜನರ ಮೇಲೆ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ.
ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಂಜೆ ವೇಳೆ ಪಟ್ಟಣ ಪಂಚಾಯತಿನಿಂದ ಹೆಜ್ಜೇನು ಗೂಡು ತೆರವುಗೊಳಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಸ್ಥಳೀಯ ವಸತಿ ಸಮುಚ್ಚಯ ನಿವಾಸಿಗಳಿಗೆ ಹೊರಗೆ ಬಾರದಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.