ಶಿರಸಿ: “ಪೂಜನೀಯ ಶ್ರೀ ಕೆಂಪೇಗೌಡರ ವಿಷಯದಲ್ಲಿ ನನ್ನ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿರುವವರ ವಿರುದ್ಧ ಕಾನೂನು ರೀತಿಯ ಹೋರಾಟ ಮಾಡಿರುವೆನು’ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿದ್ದಾರೆ.
ಮಾ.11ರಂದು ತಮ್ಮ ಫೇಸ್‌ಬುಕ್ ಪುಟದಲ್ಲಿ ಸುಳ್ಳು ಸುದ್ದಿ ಹರಡುವ ವ್ಯಕ್ತಿಗಳ ವಿರುದ್ಧ ನಗರದ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಪ್ರತಿ ಪ್ರಕಟಿಸಿ ಅನಂತಕುಮಾರ ಹೆಗಡೆ ತಮ್ಮ ಅಭಿಮತವನ್ನು ಕನ್ನಡ ಹಾಗೂ ಆಂಗ್ಲ ಭಾಷೆಗಳಲ್ಲಿ ವ್ಯಕ್ತಪಡಿಸಿದ್ದಾರೆ.
“ಶ್ರೀ ಕೆಂಪೇಗೌಡರ ಆ ಕಾಲದ ಪ್ರಬುದ್ಧ ಚಿಂತನೆ ಹಾಗೂ ಕಾರ್ಯದಿಂದಾಗಿ ಬೆಂಗಳೂರು ಅಂದರೆ ಕೆಂಪೇಗೌಡರು ಎನ್ನುವ ಅನುಭೂತಿ ತರುವ ಮಹಾನ್ ವ್ಯಕ್ತಿ. ನಾಡು, ನುಡಿ, ದೇಶದ ಬಗ್ಗೆ ಹೋರಾಟ ಮಾಡುವವರ ವಿರುದ್ಧ ನನ್ನ ಗೌರವ ಯಾವತ್ತೂ ಇದೆ’ ಎಂದು ಹೇಳಿದ್ದಾರೆ.
ಏನಿದು ಪ್ರಕರಣ?: ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಆಪ್ತ ಕಾರ್ಯದರ್ಶಿ ಸುರೇಶ ಗೋವಿಂದ ಶೆಟ್ಟಿ ಶಿರಸಿಯ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಮಾ.11ರಂದು ದೂರೊಂದು ದಾಖಲಿಸಿದ್ದಾರೆ. ತಾವು ದಾಖಲಿಸಿದ ದೂರಿನಲ್ಲಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರಿಗೆ ತೇಜೋವಧೆ ಆಗುವಂತಹ ಹೇಳಿಕೆಗಳು ಬಂದಿವೆ ಎಂದು ಅಸಮಾಧಾನ ವ್ಯಕ್ತಪಡಿಸಿ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಮಾ.10ರಂದು ಪ್ರಜಾಕೀಯ ಎಂಬ ಫೇಸ್‌ಬುಕ್ ಖಾತೆಯಿಂದ “ಬಿಜೆಪಿ ಅ ಧಿಕಾರಕ್ಕೆ ಬಂದರೆ ಕೆಂಪೇಗೌಡ ಪ್ರತಿಮೆಯನ್ನು ಉರುಳಿಸಿ ಶಿವಾಜಿ ಪ್ರತಿಮೆಯನ್ನು ಸ್ಥಾಪಿ ಸುತ್ತೇವೆ- ಅನಂತಕುಮಾರ ಹೆಗಡೆ’ ಎಂಬ ತಲೆಬರಹವುಳ್ಳ ಸಂದೇಶಗಳನ್ನು ಅನಂತಕುಮಾರ ಹೆಗಡೆ ಅವರೇ ಹೇಳಿರು ವಂತೆ ರೀತಿಯಲ್ಲಿ ಬರೆದು ಇತರರಿಗೆ ಕಳುಹಿಸಿದ್ದಾರೆ.