Advertisement

ಕಳವಿನ ನಂತರ ತಲೆ ಮಾಂಸದೂಟ!

12:33 PM Dec 01, 2018 | |

ಬೆಂಗಳೂರು: ಮನೆಕಳ್ಳತನ ಈತನ ವೃತ್ತಿ. ಕದ್ದ ಚಿನ್ನಾಭರಣಗಳ ಬಚ್ಚಿಡಲು “ಮೋರಿ’ ಗೌಪ್ಯ ಸ್ಥಳ. ಪ್ರತಿ ಯಶಸ್ವಿ ಕಳವಿನ ನಂತರ ತಲೆ ಮಾಂಸದ ಊಟ ಕಡ್ಡಾಯ… ಕೋರಮಂಗಲ ಠಾಣೆ ಪೊಲೀಸರ ಬಲೆಗೆ ಬಿದ್ದಿರುವ ಕುಖ್ಯಾತ ಮನೆಕಳ್ಳ ಕಾಂತರಾಜ್‌ ಅಲಿಯಾಸ್‌ ಮೋರಿ ಕಾಂತ (42)ನ ವಿಶೇಷತೆಗಳಿವು.

Advertisement

ಮಹಿಳೆಯೊಬ್ಬರ ಸರಕಳವು ಪ್ರಕರಣದ ಜಾಡು ಹಿಡಿದು ತನಿಖೆ ಆರಂಭಿಸಿದ ಪೊಲೀಸರು, ಆರೋಪಿ ಕಾಂತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ, ಆತ ನಗರದ ವಿವಿಧ ಭಾಗಗಳಲ್ಲಿ ನಡೆಸಿದ್ದ 13 ಮನೆ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಪೈಕಿ ಮಹಿಳಾ ಪೊಲೀಸ್‌ ಪೇದೆಯೊಬ್ಬರ ಮನೆಯಲ್ಲೂ ಕಳವು ಮಾಡಿದ್ದ ಎಂಬ ಸಂಗತಿ ಬಾಯ್ಬಿಟ್ಟಿದ್ದಾನೆ.

ಆರೋಪಿ ಕಾಂತ, ಹಲವು ತಿಂಗಳಿಂದ ಪೀಣ್ಯ, ತಿಪಟೂರು, ಎಲೆಕ್ಟ್ರಾನಿಕ್‌ ಸಿಟಿ ಸೇರಿ 8 ಪೊಲೀಸ್‌ ಠಾಣೆಗಳ ವ್ಯಾಪ್ತಿಗಳಲ್ಲಿ ನಡೆಸಿದ್ದ 13 ಮನೆಕಳವು ಪ್ರಕರಣಗಳಲ್ಲಿ 31 ಲಕ್ಷ ರೂ. ಮೌಲ್ಯದ 1 ಕೆ.ಜಿ. ಚಿನ್ನಾಭರಣಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.

“ಮೋರಿ’ ರಹಸ್ಯ: ಹಲವು ವರ್ಷಗಳಿಂದ ಕಳ್ಳತನವನ್ನೇ ಕಸುಬಾಗಿಸಿಕೊಂಡಿರುವ ಚಿಕ್ಕಬಳ್ಳಾಪುರ ಮೂಲದ ಕಾಂತನಿಗೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಪೀಣ್ಯದಲ್ಲಿ ಮನೆ ಮಾಡಿಕೊಂಡಿರುವ ಕಾಂತ, ಹಗಲು ವೇಳೆ ನಗರದ ವಿವಿಧ ಭಾಗಗಳಲ್ಲಿ ಸುತ್ತಾಡಿ, ಬೀಗ ಹಾಕಿದ ಒಂಟಿ ಮನೆಗಳನ್ನು ಗುರುತಿಸುತ್ತಿದ್ದ. ಬಳಿಕ ರಾತ್ರಿ ಹೊತ್ತು ಬೀಗ ಮುರಿದು ಒಳ ಪ್ರವೇಶಿಸಿ ಚಿನ್ನಾಭರಣ ದೋಚುತ್ತಿದ್ದ.

ಈ ಹಿಂದೆ ಕಳ್ಳತನ ಮಾಡುವಾಗ ಜನರ ಕೈಗೆ ಸಿಕ್ಕಿಬಿದ್ದಿದ್ದ ಆರೋಪಿ ಕಾಂತ, ಮೋರಿಯೊಂದರಲ್ಲಿ ಅಡಗಿಕೊಂಡು ತಪ್ಪಿಸಿಕೊಂಡಿದ್ದ.  ನಂತರ ಮೋರಿಯಿಂದಲೇ ತಾನು ಬಚಾವಾದೆ ಎಂದು ಬಲವಾಗಿ ನಂಬಿಕೆ ಬೆಳೆಸಿಕೊಂಡಿದ್ದ ಆತ, ಕಳವು ಮಾಡಿದ ಚಿನ್ನಾಭರಣಗಳನ್ನು ಬಟ್ಟೆಯೊಂದರಲ್ಲಿ ಸುತ್ತಿ ಮೋರಿಯಲ್ಲಿ ಬಚ್ಚಿಡುತ್ತಿದ್ದ. ಕೆಲ ದಿನಗಳ ಬಳಿಕ ಆ ಚಿನ್ನಾಭರಣಗಳನ್ನು ತೆಗೆದುಕೊಂಡು ಮಾರಾಟ ಮಾಡುತ್ತಿದ್ದ. ಅಂದಿನಿಂದ ಆತನಿಗೆ ಮೋರಿ ಕಾಂತ ಎಂಬ ಅಡ್ಡ ಹೆಸರು ಬಿದ್ದಿದೆ.

Advertisement

ಕುಡಿತ, ತಲೆಮಾಂಸದ ಊಟ ಕಡ್ಡಾಯ: ಮದ್ಯ ವ್ಯಸನಿ, ಮಾಂಸಾಹಾರ ಪ್ರಿಯನಾದ ಕಾಂತ, ಕಳವು ಮಾಡುವ ಮುನ್ನ ಮದ್ಯ ಸೇವಿಸುತ್ತಿದ್ದ. ಚಿನ್ನಾಭರಣ ಕಳವು ಮಾಡಿದ ಬಳಿಕ ಕಡ್ಡಾಯವಾಗಿ ತಲೆ ಮಾಂಸದ ಊಟ ಮಾಡುವ ಹವ್ಯಾಸ ಬೆಳೆಸಿಕೊಂಡಿದ್ದ. ಹೀಗಾಗಿ, ರಾತ್ರಿ ಎಷ್ಟೇ ಸಮಯವಾದರೂ ತಲೆ ಮಾಂಸ ಸಿಗುವ ಹೋಟೆಲ್‌ಗ‌ಳನ್ನು ಹುಡುಕಿಕೊಂಡು ಹೋಗುತ್ತಿದ್ದ. ತಿಪಟೂರಿನಲ್ಲಿ ಕಳ್ಳತನ ಮಾಡಿದ ಬಳಿಕ ತಲೆ ಮಾಂಸದ ಊಟ ಸಿಗಲಿಲ್ಲ ಎಂಬ ಕಾರಣಕ್ಕೆ ಬೆಂಗಳೂರಿಗೆ ಬಂದು ಹೋಟೆಲ್‌ ಒಂದರಲ್ಲಿ ಊಟ ಮಾಡಿದ್ದಾಗಿ ಕಾಂತ ಹೇಳಿದ್ದಾನೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಜೈಲಿನಿಂದ ಬಂದ ಬಳಿಕವೂ ಕಳವು: ಆರೋಪಿ ಮೋರಿ ಕಾಂತ, ಈ ಹಿಂದೆ ರಾಜಗೋಪಾನಗರ, ಮಂಡ್ಯ, ತುಮಕೂರು ಸೇರಿ ಹಲವೆಡೆ ನಡೆಸಿದ 10 ಮನೆಕಳ್ಳತನ ಪ್ರಕರಣಗಳಲ್ಲಿ ಜೈಲು ಸೇರಿದ್ದಾನೆ. ಆದರೆ, ಪ್ರತಿ ಬಾರಿ ಜಾಮೀನಿನ ಆಧಾರದಲ್ಲಿ ಬಿಡುಗಡೆಯಾಗುತ್ತಿದ್ದ. ಜೈಲಿನಿಂದ ಹೊರಬಂದ ಬಳಿಕ ಪುನಃ ತನ್ನ ಹಳೇ ಕಸುಬು ಮುಂದುವರಿಸುತ್ತಿದ್ದ. ಈ ವಿಚಾರ ಆತನ ಮನೆಯವರಿಗೂ ಗೊತ್ತಿತ್ತು ಎಂದು ಅಧಿಕಾರಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next