Advertisement

ಮುಖ್ಯ ಗುರುಗಳ ವಾಹನವೇ ಸ್ಕೂಲ್‌ ಬಸ್‌!

10:25 AM Dec 05, 2018 | Team Udayavani |

ಕಾಣಿಯೂರು: ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರೇ ಹೆಚ್ಚು. ಹೆಚ್ಚಿನ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ತೀರಾ ಕಡಿಮೆ. ಆದರೆ, ದೋಳ್ಪಾಡಿ ಗ್ರಾಮದ ಇಡ್ಯಡ್ಕ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ವರ್ಷ ಮಕ್ಕಳ ದಾಖಲಾತಿ ಜಾಸ್ತಿಯಾಗಿದೆ. ಇದಕ್ಕೆ ಕಾರಣ ಈ ಶಾಲೆಯವರು ಕೈಗೊಂಡ ಒಂದು ಪ್ರಯೋಗ.

Advertisement

ಸದ್ರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ 5ಕ್ಕೆ ಇಳಿದು ಇನ್ನೇನು ಮುಚ್ಚಿ ಹೋಯಿತು ಎಂಬ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕುಸುಮಾಧರ ಇಡ್ಯಡ್ಕ, ಗ್ರಾ.ಪಂ. ಸದಸ್ಯರಾದ ದಿನೇಶ್‌ ಇಡ್ಯಡ್ಕ, ಶಾಲಾ ಮುಖ್ಯ ಗುರುಗಳಾದ ಜಯಂತ ವೈ. ಅವರ ನೇತೃತ್ವದಲ್ಲಿ ಮನೆ ಮನೆಗೆ ತೆರಳಿ ಮಕ್ಕಳನ್ನು ಶಾಲೆಗೆ ದಾಖಲಾತಿ ಮಾಡಲು ಪ್ರಚಾರ ಕೈಗೊಂಡರು.

ಮಕ್ಕಳಿಗೆ ಶಾಲೆಗೆ ನಡೆದುಕೊಂಡು ಹೋಗಲು ಕಷ್ಟವಾಗುತ್ತದೆ. ವಾಹನದ ವ್ಯವಸ್ಥೆ ಮಾಡಿದರೆ ಶಾಲೆಗೆ ಕಳುಹಿಸಲು ಸಿದ್ಧರಿದ್ದೇವೆ ಎಂದು ಬಹುತೇಕ ಮಕ್ಕಳ ಹೆತ್ತವರು ಬೇಡಿಕೆ ಮುಂದಿಟ್ಟರು. ಇದಕ್ಕೆ ಒಪ್ಪಿದ ಶಾಲೆಯ ಮುಖ್ಯ ಗುರು ಜಯಂತ ವೈ. ಅವರು ತಮ್ಮ ವಾಹನದಲ್ಲೇ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರುತ್ತಿದ್ದಾರೆ.

ಈ ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ಸಂಖ್ಯೆ ಏರಿಕೆಯಾಗಿದ್ದು, 1ರಿಂದ 4ನೇ ತರಗತಿವರೆಗೆ 22 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ 35ಕ್ಕೆ ಏರಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ. ಸರ್ಕಾರಿ ಶಾಲೆ ಉಳಿಸಲು ಭಾಷಣ, ಹೋರಾಟ ನಡೆಸುವ ಬದಲು ಇಂತಹ ಪ್ರಯತ್ನ ಕೈಗೊಂಡರೆ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ಶಿಕ್ಷಕರ ಮಕ್ಕಳೂ ಇದೇ ಶಾಲೆಯಲ್ಲಿ
ಶಾಲಾ ಮುಖ್ಯ ಗುರು ಜಯಂತ ವೈ. ಹಾಗೂ ಕಾಣಿಯೂರು ಸಿಆರ್‌ಪಿ ಆಗಿರುವ ಯಶೋದಾ ದಂಪತಿಯ ಇಬ್ಬರು ಮಕ್ಕಳನ್ನು ಇದೇ ಶಾಲೆಯಲ್ಲಿ ಓದಿಸುತ್ತಿದ್ದಾರೆ. ಈ ಮೂಲಕ ಅವರು ಇತರ ಶಿಕ್ಷಕರಿಗೂ ಮಾದರಿ ಹೆಜ್ಜೆಯಿಟ್ಟಿದ್ದಾರೆ.

Advertisement

ಸಂತೃಪ್ತಿ ಇದೆ
ಹಿರಿಯರ ಪ್ರಯತ್ನದಿಂದ ಊರಿಗೆ ಮಂಜೂರಾದ ಶಾಲೆ ಮುಚ್ಚುವ ಹಂತಕ್ಕೆ ತಲುಪಿದಾಗ ಶಾಲೆಯನ್ನು ಉಳಿಸಲು ನಮ್ಮ ಪ್ರಯತ್ನ ಅಷ್ಟೆ. ದೂರದ ಮಕ್ಕಳನ್ನು ಅವರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಿರುವುದರಿಂದ ಸಂತೃಪ್ತಿ ಇದೆ.
– ಕುಸುಮಾಧರ ಇಡ್ಯಡ್ಕ 
 ಅಧ್ಯಕ್ಷರು ಎಸ್‌.ಡಿ.ಎಂ.ಸಿ., ಇಡ್ಯಡ್ಕ ಶಾಲೆ

ಅನುಕೂಲವಾಗಿದೆ
ನನ್ನ ಮನೆಯಿಂದ ಹತ್ತಿರದ ಶಾಲೆಗೆ ಹೋಗಲು ಎರಡು ಕಿ.ಮೀ. ನಡೆಯಬೇಕು. ಹೀಗಾಗಿ ದೂರದ ಖಾಸಗಿ ಶಾಲೆಗೆ ವಾಹನದಲ್ಲಿ ಹೋಗುತ್ತಿದ್ದೆ. ಈಗ ಮುಖ್ಯ ಗುರುಗಳ ವಾಹನದಲ್ಲಿ ಉಚಿತವಾಗಿ ಹೋಗುತ್ತಿರುವುದರಿಂದ ತುಂಬಾ ಸಂತೋಷವಾಗಿದೆ. ಆರ್ಥಿಕವಾಗಿ ಹಿಂದುಳಿದಿರುವ ನನ್ನ ಹೆತ್ತವರಿಗೂ ಅನುಕೂಲವಾಗಿದೆ.
– ಆಪ್ತಿ ಕೆ.ಎಸ್‌.,
ನಾಲ್ಕನೇ ತರಗತಿಯ ವಿದ್ಯಾರ್ಥಿನಿ

 ಪ್ರವೀಣ್‌ ಚೆನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next