Advertisement

ತಲೆ ಚಕ್ಕರ್‌ ಬರ್ತಿದೆ…

06:00 AM Aug 14, 2018 | |

ಅದು 1998. ನಾನಾಗ 6ನೇ ತರಗತಿ ಓದುತ್ತಿದ್ದೆ. ನನ್ನ ತಮ್ಮನೂ ಕೂಡ ನನಗೆ ಕ್ಲಾಸ್‌ ಮೇಟ್‌ ಆಗಿದ್ದ. ಈಗಿರುವಂತೆ ನೂರೆಂಟು ಟಿವಿ ಚಾನೆಲ್‌ಗ‌ಳು ಆಗ ಇರಲಿಲ್ಲ. ನಮ್ಮ ಮನರಂಜನೆಗೆ ಡಿಡಿ 1 ಚಾನೆಲ್‌ ಒಂದೇ ಆಧಾರ. ರವಿವಾರಕ್ಕೊಮ್ಮೆ ಬರುವ ಸಿನಿಮಾ ನೋಡಲು ಕಾತುರದಿಂದ ಕಾಯುತ್ತಿದ್ದೆವು. ಅದೇ ಚಾನೆಲ್‌ನಲ್ಲಿ ಪ್ರತಿ ಬುಧವಾರ ರಾತ್ರಿ 9ಕ್ಕೆ “ಮಿಸ್ಟರ್‌ – ಮಿಸೆಸ್‌ ಗುಂಡಣ್ಣ’ ಎನ್ನುವ ಹಾಸ್ಯ ಧಾರಾವಾಹಿ ಪ್ರಸಾರವಾಗುತ್ತಿತ್ತು. ದ್ವಾರಕೀಶ್‌, ಸಾಧುಕೋಕಿಲ ಅವರ ನಟನೆಯ ಆ ಧಾರಾವಾಹಿ ನಮಗೆ ತುಂಬಾ ಅಚ್ಚುಮೆಚ್ಚು. ಆದರೆ, ಅಪ್ಪ ಅಷ್ಟೊತ್ತಲ್ಲಿ ಟಿವಿ ನೋಡೋಕೆ ಬಿಡುತ್ತಿರಲಿಲ್ಲ. ಅದೇ ಧಾರಾವಾಹಿ ಶುಕ್ರವಾರ ಮಧ್ಯಾಹ್ನ 12ಕ್ಕೆ ಮರುಪ್ರಸಾರವಾಗುತ್ತಿತ್ತು. ಅದನ್ನು ನೋಡಲೇಬೇಕೆಂಬ ಹಂಬಲದಿಂದ ಒಮ್ಮೆ ನಾನು ನನ್ನ ತಮ್ಮ ಸೇರಿ ಒಂದು ಚಕ್ಕರ್‌ವ್ಯೂಹ ರಚಿಸಿದೆವು. 

Advertisement

ಒಂದು ಶುಕ್ರವಾರ ಶಾಲೆಯಲ್ಲಿ ಮೊದಲೆರಡು ತರಗತಿಗಳು ಮುಗಿದಿದ್ದವು. 3ನೇ ಪಿರಿಯಡ್‌ ತೆಗೆದುಕೊಳ್ಳಲು ಹಿಂದಿ ಟೀಚರ್‌ ತರಗತಿಗೆ ಬಂದರು. ಇನ್ನೇನು ಅವರು ಪಾಠ ಶುರುಮಾಡುತ್ತಾರೆ ಎನ್ನುವಷ್ಟರಲ್ಲಿ ನನ್ನ ತಮ್ಮ ಎದ್ದು ನಿಂತು “ಮೇಡಂ, ನಮ್ಮಣ್ಣಂಗೆ ಹುಷಾರಿಲ್ಲ. ತಲೆ ಚಕ್ಕರ್‌ ಬರ್ತಿದೆ’ ಅಂತೇಳಿ ಸುಮ್ನೆ ಕೂತ. ಟೀಚರ್‌ ನನ್ನತ್ರ ಬಂದು, “ಪಾಠ ಕೇಳ್ಳೋಕೆ ಆಗುತ್ತೋ ಅಥವಾ ಮನೆಗೆ ಹೋಗ್ತಿಯೋ?’ ಅಂತ ಕೇಳಿದರು. ಅವರು ಕೊಟ್ಟ ಈ ಬಂಪರ್‌ ಆಫ‌ರ್‌ ಕೇಳಿ ನಾನು ಮನದಲ್ಲೇ ಕುಣಿದಾಡಿ, “ಮೇಡಂ, ತುಂಬಾ ತಲೆ ಸುತ್ತುತ್ತಾ ಇದೆ. ಕೂತ್ಕೊಳಕ್ಕೆ ಆಗಲ್ಲ. ಮನೆಗೆ ಹೋಗ್ತಿನಿ’ ಅಂತ ಎದ್ದು ನಿಂತೆ. ಮೊದಲ ಹೆಜ್ಜೆಯಲ್ಲೇ ಬೀಳುವಂತೆ ನಟಿಸಿ ಅಲ್ಲೇ ಕುಸಿದು ಕೂತೆ. 

ಇದನ್ನು ನೋಡಿದ ಮೇಡಂ, “ನೀನೊಬ್ಬನೇ ಹೋಗಬೇಡ ಜೊತೇಲಿ ನಿನ್ನ ತಮ್ಮನ್ನ ಕರೆದುಕೊಂಡು ಹೋಗು’ ಎಂದು ಹೇಳಿದ ಕೂಡಲೇ ನನ್ನ ತಮ್ಮ ನನ್ನ ಪಕ್ಕ ಹಾಜರಾದ. ಒಂದೇ ಏಟಿಗೆ ಎರಡು ಹಕ್ಕಿ ಹೊಡೆದವರಂತೆ ಇಬ್ಬರೂ ಹಿಗ್ಗಿನಿಂದ ಶಾಲೆ ಆವರಣದಿಂದ ಮಾಯವಾಗಿ ಮನೆಗೆ ತಲುಪಿ, ಅಮ್ಮನಿಗೆ ಇನ್ನೊಂದು ಸುಳ್ಳು ಹೇಳಿ ಖುಷಿಯಾಗಿ ಧಾರಾವಾಹಿ ನೋಡಿದೆವು. ಹೀಗೆ ಕ್ಲಾಸಿಗೆ ಚಕ್ಕರ್‌ ಹೊಡೆದು, ನಮ್ಮಿಷ್ಟದ ಧಾರಾವಾಹಿ ನೋಡಿದ್ದು, ಆಗಾಗ ಮನಸ್ಸಿಗೆ ಕಚಗುಳಿ ಇಡುತ್ತಾ ನೆನಪಿನ ಅಂಗಳದಲ್ಲಿ ಹಾಗೆಯೇ ಉಳಿದುಕೊಂಡಿದೆ.

ಶಿವರಾಜ್‌ ಬಿ.ಎಲ್‌. ದೇವದುರ್ಗ

Advertisement

Udayavani is now on Telegram. Click here to join our channel and stay updated with the latest news.

Next