Advertisement

Theft: ಸಾಲ ತೀರಿಸಲು ಹೆಡ್‌ಕಾನ್‌ಸ್ಟೇಬಲ್‌ ಕಳ್ಳಾಟ!

10:21 AM Nov 07, 2023 | Team Udayavani |

ಬೆಂಗಳೂರು: ಕಳ್ಳರು, ದರೋಡೆಕೋರರನ್ನು ಹಿಡಿಯಬೇಕಾದ ಪೊಲೀಸ್‌ ಸಿಬ್ಬಂದಿಯೇ ಕಳ್ಳನೊಬ್ಬನ ಜತೆ ಸೇರಿ ರೈಲುಗಳಲ್ಲಿ ಕಳವು ಮಾಡಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಹೆಡ್‌ಕಾನ್‌ಸ್ಟೇಬಲ್‌ ಒಬ್ಬನ “ಕಳ್ಳ-ಪೊಲೀಸ್‌’ ಆಟ ಬಯಲಾಗಿದೆ.

Advertisement

ಚಿಕ್ಕಬಳ್ಳಾಪುರ ರೈಲ್ವೇ ಹೊರ ಪೊಲೀಸ್‌ ಠಾಣೆಯ ಹೆಡ್‌ಕಾನ್‌ ಸ್ಟೇಬಲ್‌ ಸಿದ್ದರಾಮರೆಡ್ಡಿ (38)ಮತ್ತು ಆತನ ಸಹಚರ ಸಾಬಣ್ಣ(38) ಎಂಬವರನ್ನು ದಂಡು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

ಇಬ್ಬರು ಏಳು ವರ್ಷಗಳಿಂದ ಪರಸ್ಪರ ಪರಿಚಯಸ್ಥರಾಗಿದ್ದು, ಅಂದಿನಿಂದ ಸಾಬಣ್ಣನ ಕಳವು ಕೃತ್ಯಕ್ಕೆ ಸಿದ್ದರಾಮ ರೆಡ್ಡಿಯೇ “ಪ್ಲಾನರ್‌’ ಎಂಬುದು ಗೊತ್ತಾಗಿದೆ. ಹೀಗಾಗಿ ಹೆಡ್‌ಕಾನ್‌ಸ್ಟೇಬಲ್‌ ನನ್ನು ಕರ್ತವ್ಯ ಲೋಪದ ಆರೋಪದಲ್ಲಿ ಅಮಾ ನತು ಗೊಳಿಸಲಾಗಿದೆ ಎಂದು ರೈಲ್ವೇ ಪೊಲೀಸರು ಹೇಳಿದರು.

ರಾಯಚೂರು ಮೂಲದ ಸಿದ್ದರಾಮರೆಡ್ಡಿ 2011ರ ಬ್ಯಾಚ್‌ನ ಕಾನ್‌ಸ್ಟೇಬಲ್‌ ಆಗಿ ಕರ್ತವ್ಯಕ್ಕೆ ನೇಮಕಗೊಂಡಿದ್ದ. ರಾಯಚೂರು ರೈಲ್ವೇ ಪೊಲೀಸ್‌ ಠಾಣೆಯಲ್ಲಿ ಕಾನ್‌ ಸ್ಟೇಬಲ್‌ ಆಗಿ ಕೆಲಸ ಮಾಡುತ್ತಿದ್ದ. ಮತ್ತೂಂದೆಡೆ ಯಾದಗಿರಿ ಮೂಲದ ಸಾಬಣ್ಣ 2016ರಲ್ಲಿ ರೈಲಿನಲ್ಲಿ ಕಳವು ಮಾಡಿ ಬಂಧನವಾಗಿದ್ದ. ಈ ವೇಳೆ ಇಬ್ಬರು ಪರಸ್ಪರ ಪರಿಚಯವಾಗಿದ್ದು, ಆನಂತರ ಸಿದ್ದರಾಮರೆಡ್ಡಿ ಯಾವ ರೀತಿ ಕಳವು ಮಾಡಬೇಕು. ಕದ್ದ ಚಿನ್ನಾಭರಣಗಳನ್ನು ಎಲ್ಲೆಲ್ಲಿ ವಿಲೇವಾರಿ ಮಾಡಬೇಕು? ರೈಲುಗಳಲ್ಲಿ ಯಾವ ಸಮಯ, ಹೇಗೆ ಕಳವು ಮಾಡಬೇಕು? ಎಂದು ಈತನೇ ಸಾಬಣ್ಣನಿಗೆ ಸಲಹೆ ನೀಡುತ್ತಿದ್ದ. ಅದೇ ಮಾದರಿಯಲ್ಲಿ ಸಾಬಣ್ಣ ಕಳವು ಮಾಡಿದ್ದ ನಗದು, ಚಿನ್ನಾಭರಣಗಳನ್ನು ಇಬ್ಬರು ಸಮಾನಾಗಿ ಹಂಚಿಕೊಳ್ಳುತ್ತಿದ್ದರು ಎಂದು ರೈಲ್ವೆ ಪೊಲೀಸರು ಮಾಹಿತಿ ನೀಡಿದರು.

ಇಬ್ಬರು ಬೆಂಗಳೂರಿಗೆ!: ಈ ಮಧ್ಯೆ ಮೂರು ವರ್ಷಗಳ ಹಿಂದೆ ಸಿದ್ದರಾಮರೆಡ್ಡಿ ಹೆಡ್‌ಕಾನ್‌ ಸ್ಟೇಬಲ್‌ ಮುಂಬಡ್ತಿ ಪಡೆದು ಚಿಕ್ಕಬಳ್ಳಾಪುರ ರೈಲ್ವೇ ಹೊರ ಪೊಲೀಸ್‌ ಠಾಣೆಗೆ ವರ್ಗಾವಣೆಗೊಂಡಿದ್ದ. ಈ ವಿಚಾರ ತಿಳಿದ ಸಾಬಣ್ಣ ಕೂಡ ಬೆಂಗಳೂರಿಗೆ ಬಂದಿದ್ದು, ಚಿಕ್ಕಬಾಣವಾರದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ. ಬೆಂಗಳೂರಿ ನಲ್ಲಿಯೂ ಇಬ್ಬರು ತಮ್ಮ ಕಳವು ಕೃತ್ಯ ಮುಂದುವರಿಸಿದ್ದರು. ಆ.23 ರಂದು ದೂರುದಾರರಾದ ಉಷಾ ಶ್ರೀಕುಮಾರ್‌ ತ್ರಿಶ್ಯೂರ್‌ನಿಂದ ಬೈಯ್ಯಪ್ಪನಹಳ್ಳಿಯ ಸರ್‌ ಎಂ.ವಿಶ್ವೇಶ್ವರಯ್ಯ ರೈಲಿನಲ್ಲಿ ಬರುತ್ತಿದ್ದರು. ಇದೇ ವೇಳೆ ಸಾಬಣ್ಣ ಮಹಿಳೆಯ ಬ್ಯಾಗ್‌ ಕದ್ದು ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿ ನಿಧಾನವಾಗಿ ಚಲಿಸುತ್ತಿದ್ದ ರೈಲಿನಿಂದ ಜಿಗಿದು ಪರಾರಿಯಾಗಿದ್ದ.

Advertisement

ಈ ಸಂಬಂಧ ದಂಡು ರೈಲ್ವೇ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಆರೋಪಿಗಳ ಪತ್ತೆಗಾಗಿ ಠಾಣಾಧಿಕಾರಿ ಎಂ.ಜಿ. ನಟರಾಜ್‌ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಈ ತಂಡ ಆರೋಪಿ ಸಾಬಣ್ಣನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಹೆಡ್‌ಕಾನ್‌ಸ್ಟೆàಬಲ್‌ ಸಿದ್ದರಾಮರೆಡ್ಡಿ ಸಹಕಾರ ಬೆಳಕಿಗೆ ಬಂದಿದೆ. ಬಳಿಕ ಹೆಡ್‌ಕಾನ್‌ಸ್ಟೇಬಲ್‌ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು.

ಮಾಡಿದ್ದ ಸಾಲ ತೀರಿಸಲು ಕೃತ್ಯ: ಹೆಡ್‌ಕಾನ್‌ ಸ್ಟೇಬಲ್‌ ಸಿದ್ದರಾಮರೆಡ್ಡಿ ಬೆಟ್ಟಿಂಗ್‌, ಜೂಜಾಟ ದಲ್ಲಿ ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದ. ಅದನ್ನು ತೀರಿಸಲು ಸಾಬಣ್ಣನಿಗೆ ಕಳ್ಳತನಕ್ಕೆ ಸಹಕಾರ ನೀಡುತ್ತಿದ್ದ ಎಂಬುದು ಗೊತ್ತಾಗಿದೆ. ಹೆಡ್‌ಕಾನ್‌ಸ್ಟೇಬಲ್‌ ಸಿದ್ದರಾಮರೆಡ್ಡಿ ಈ ಹಿಂದೆ ಕರ್ತವ್ಯ ನಿರ್ವಹಿಸುವಾಗ ಯಾವುದಾದರೂ ಪ್ರಕರಣ ದಲ್ಲಿ ಭಾಗಿಯಾಗಿದ್ದಾನೆಯೇ ಎಂಬ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ರೈಲ್ವೇಎಸ್ಪಿ ಡಾ ಎಸ್‌.ಕೆ.ಸೌಮ್ಯಲತಾ ಮಾಹಿತಿ ನೀಡಿದರು.

ಈ ಕುರಿತು ಮಾಹಿತಿ ನೀಡಿದ ರೈಲ್ವೇ ವಿಭಾಗ ಡಿಐಜಿ ಡಾ.ಎಸ್‌.ಡಿ.ಶರಣಪ್ಪ, ಕಳವು ಕೃತ್ಯದಲ್ಲಿ ಭಾಗಿಯಾಗಿದ್ದ : ಹೆಡ್‌ಕಾನ್‌ ಸ್ಟೇಬಲ್‌ ಸಿದ್ದರಾಮರೆಡ್ಡಿಯನ್ನು ಕರ್ತವ್ಯ ಲೋಪದ ಆರೋಪದಡಿ ಅಮಾನತುಗೊಳಿಸಲಾಗಿದೆ. ಇಲಾಖೆ ವಿಚಾರಣೆ ಮುಂದುವರಿದಿದೆ ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next