Advertisement

“ನನಗೆ ಗೊತ್ತಿಲ್ಲ’ಎಂದು ಹೇಳುವವನೇ ಇಂದು ನಿಜವಾದ ಜ್ಞಾನಿ!

06:00 AM Sep 23, 2018 | |

ಲೋಕ ಸಂಚಾರ ಮಾಡುತ್ತಿರುವ ಯಿಮಾಯಿಟೋ ನಗರಿಯ ಪ್ರಖ್ಯಾತ ಜೆನ್‌ ಗುರುವೊಬ್ಬರು ಹಿಂದಿನ ರಾತ್ರಿ ತ‌ಮ್ಮ ಹಳ್ಳಿಗೆ ಬಂದಿದ್ದಾರೆ, ಅವರು ಸದ್ಯಕ್ಕೆ ಶಿಷ್ಯಂದಿರೊಡನೆ ನದಿ ತಟದಲ್ಲಿ ತಂಗಿದ್ದಾರೆ ಎನ್ನುವ ಸುದ್ದಿ ಶಿಬಿರೋ ಗ್ರಾಮದ ಜನರಲ್ಲಿ ಪುಳಕ ಮೂಡಿಸಿತು. ಆ ಜೆನ್‌ ಗುರುವಿಗೆ ಗೊತ್ತಿಲ್ಲದ 
ವಿಷಯವೇ ಇಲ್ಲವೆಂದೂ, ಅವರು ಮಹಾನ್‌ ಜ್ಞಾನಿಗಳೆಂದೂ, ಜಗತ್ತಿನ ಎಲ್ಲಾ ಸಮಸ್ಯೆಗಳಿಗೂ ಅವರ ಬಳಿ ಪರಿಹಾರವಿದೆಯೆಂದೂ ಸುದ್ದಿ ಹಬ್ಬಿತು. ಶಿಬಿರೋ ವಾಸಿಗಳೆಲ್ಲ ಗುರುವಿನ ಬಳಿ ಪರಿಹಾರ ಕೇಳಲು ಪ್ರಶ್ನೆಗಳನ್ನು ಸಿದ್ಧಮಾಡಿಕೊಂಡರು. ಅದರಲ್ಲೇ ಕೆಲ ಯುವಕರು ಆ ಗುರುವಿನ ಢೋಂಗಿತನವನ್ನು ಬಹಿರಂಗ ಮಾಡುತ್ತೇವೆ ಎಂದೂ ಸಿದ್ಧರಾಗಿ ಬಂದಿದ್ದರು.

Advertisement

ಮೊದಲನೇ ಯುವಕ ಜೆನ್‌ ಗುರುವಿಗೆ “ಭವಿಷ್ಯದಲ್ಲಿ ನಮ್ಮ ಶಿಬಿರೋ ಹಳ್ಳಿ ನಗರವಾಗಿ ಬದಲಾಗುವುದೇ?’ ಎಂದು ಪ್ರಶ್ನಿಸಿದ. ಆಗ ಜೆನ್‌ ಗುರು ನಿರ್ಲಿಪ್ತವಾಗಿ- “ನನಗೆ ಗೊತ್ತಿಲ್ಲ’ ಅಂದ. ಇನ್ನೊಬ್ಬ ಮುಂದೆ ಬಂದು “ಮುಂದೆ ಯಾವ ರಾಜಮನೆತನ ಜಪಾನ್‌ ಅನ್ನು ಆಳಬಹುದು?’ ಎಂದು 
ಪ್ರಶ್ನಿಸಿದ. ಆಗ ಗುರು “ನನಗೆ ಗೊತ್ತಿಲ್ಲ’ ಅಂದ. ಮಗದೊಬ್ಬ ಯುವಕ, ಜಪಾನ್‌ ಸಾಮ್ರಾಜ್ಯವೊಂದರ ಇತಿಹಾಸದ ಪ್ರಶ್ನೆ ಎದುರಿಟ್ಟ. ಆದರೆ ಯಾರು ಏನೇ ಕೇಳಿದರೂ ಜೆನ್‌ ಗುರು “ನನಗೆ ಗೊತ್ತಿಲ್ಲ’ ಎಂದೇ ಉತ್ತರಿಸಿದ. 

ಯುವಕರಿಗೆ ವಿಪರೀತ ಖುಷಿಯಾಯಿತು. “ನಾವು ಹೇಳಿರಲಿಲ್ಲವೇ ಇವನು ಢೋಂಗಿ ಗುರು ಅಂತ. ನಿಮಗೆ ಮಾಡೋಕ್ಕೆ ಬೇರೆ ಕೆಲಸವಿಲ್ಲ…’ ಎಂದು ನಗುತ್ತಾ ಗ್ರಾಮವಾಸಿಗಳತ್ತ ಕುಚೋದ್ಯದ ನಗೆ ಚಿಮ್ಮಿಸಿ ಎದ್ದು ಹೊರಟರು. ಜನರಿಗೂ ಭ್ರಮನಿರಸನವಾಯಿತು. ತಮ್ಮ ಸಮಯ ವ್ಯರ್ಥವಾಯಿತು ಎಂದು ಭಾವಿಸಿ ಒಬ್ಬೊಬ್ಬರೇ ಗೊಣಗುತ್ತಾ ಮನೆಯತ್ತ ಹೊರಟರು. ಕೊನೆಗೆ ಉಳಿದ ಮೂರ್ನಾಲ್ಕು ಜನರಲ್ಲಿ ಒಬ್ಬ “ಗುರುಗಳೇ… ನನಗೆ ಮನಶಾÏಂತಿ ಬೇಕಿದೆ. ಧ್ಯಾನ ಮಾಡುವುದು ಹೇಗೆ? ಮನಸ್ಸು ಚಂಚಲವಾಗದಂತೆ ತಡೆಯುವುದು ಹೇಗೆ?’ ಎಂದು ಪ್ರಶ್ನಿಸಿದ. ಕೂಡಲೇ ಜೆನ್‌ ಗುರು ತನ್ನ ಶಿಷ್ಯನೊಬ್ಬನಿಗೆ ಚಾಪೆಯೊಂದನ್ನು ಹಾಸಲು ಹೇಳಿ, ಈ ಪ್ರಶ್ನೆ ಕೇಳಿದ ವ್ಯಕ್ತಿಯನ್ನು ಅದರ ಮೇಲೆ ಕೂರಿಸಿ “ಧ್ಯಾನ’ದ ಒಳಗುಟ್ಟುಗಳನ್ನು ಹೇಳಿಕೊಡಲಾರಂಭಿಸಿದ…
ಈ ಕಥೆಯ ನೀತಿ ಏನೆಂದು ನಿಮಗೆ ತಿಳಿಯಿತೇ? 

ಇಂದು ಜಗತ್ತು ಹೇಗಾಗಿಬಿಟ್ಟಿದೆಯೆಂದರೆ ನಮ್ಮನ್ನೂ ಸೇರಿದಂತೆ ಎಲ್ಲರಿಗೂ ಎಲ್ಲಾ ವಿಷಯಗಳ ಮೇಲೂ ಒಂದು ಅಭಿಪ್ರಾಯವಿದ್ದೇ ಇರುತ್ತದೆ. ರಾಜಕಾರಣಿಗಳು, ಪರಿಣತರು, ಧಾರ್ಮಿಕ ನಾಯಕರು, ಆಧ್ಯಾತ್ಮ ಗುರುಗಳು, ಪತ್ರಕರ್ತರು, ವಿದ್ಯಾರ್ಥಿಗಳು…ಒಟ್ಟಲ್ಲಿ ಯಾರೇ ಆಗಿರಲಿ ಒಂದು ವಿಷಯದ ಮೇಲೆ ಚರ್ಚೆ ಅಥವಾ ಪ್ರಶ್ನೆ ಎದುರಾದಾಗ ಅಧಿಕಾರಯುತ ವಾಣಿಯಲ್ಲಿ ಒಂದು ತೀರ್ಪುಕೊಟ್ಟುಬಿಡುತ್ತೇವೆ. ಇತಿಹಾಸ, ರಾಜಕೀಯ ನೀತಿ, ಸಿನೆಮಾ, ಸೆಲೆಬ್ರಿಟಿಗಳ ಜೀವನ, ಸೈನ್ಯ, ಪೆಟ್ರೋ ರಾಜಕೀಯ, ಉಗ್ರವಾದ,  ಧರ್ಮ, ಗ್ಲೋಬಲ್‌ ವಾರ್ಮಿಂಗ್‌,  ಫಿಲಾಸಫಿ, ವಲಸಿಗರು, ಹಣಕಾಸು ನೀತಿಗಳು… ಯಾವುದೇ ವಿಷಯವಿರಲಿ ಅದರ ಬಗ್ಗೆ ನಮ್ಮದು ತೀರಾ ಖಚಿತ ಅಭಿಪ್ರಾಯ ಇರುತ್ತದೆ! ಇತ್ತೀಚೆಗಂತೂ ನನ್ನ ಒಬ್ಬೇ ಒಬ್ಬ ಸಹೋದ್ಯೋಗಿಯಾಗಲಿ ಅಥವಾ ಸ್ನೇಹಿತರಾಗಲಿ ಸಾರ್ವಜನಿಕ ವಿಷಯವೊಂದರ ಕುರಿತ ಚರ್ಚೆ ಬಂದಾಗ “ನನಗೆ ಗೊತ್ತಿಲ್ಲ’ ಎಂದು ಹೇಳಿದ್ದಂತೂ ನನಗೆ ನೆನಪಿಲ್ಲ. 

ಒಂದು ವಿಷಯದ ಬಗ್ಗೆ ಅಭಿಪ್ರಾಯ ವ್ಯಕ್ತಿಪಡಿಸುವುದಷ್ಟೇ ಅಲ್ಲ, ಆ ಅಭಿಪ್ರಾಯದಲ್ಲಿ ನಮ್ಮ ಕುಹಕ, ಕುಚೋದ್ಯ, ಚುಚ್ಚು ಮಾತುಗಳನ್ನೂ ಸೇರಿಸಿರುತ್ತೇವೆ. ಇತ್ತೀಚೆಗೆ ನಾನು ನನ್ನ ಬಹುಕಾಲದ ಗೆಳತಿ ಎಸ್ತೆರ್‌ ಪರೆಲ್‌ ಜೊತೆಗೆ ನ್ಯೂಯಾರ್ಕಿನ ಕೆಫೆಯೊಂದರಲ್ಲಿ ಹರಟೆ ಹೊಡೆಯುತ್ತಾ ಕುಳಿತಿದ್ದೆ. ಬೆಲ್ಜಿಯನ್‌ ಮೂಲದ ಎಸ್ತೆರ್‌ ಬಹಳ ಸಮಯದ ನಂತರ ನನಗೆ ಸಿಕ್ಕಿದ್ದಳು. ಹೀಗಾಗಿ ನಮ್ಮ ಮಾತು ಹಿಂದಿನ ದಿನಗಳತ್ತ ತಿರುಗಿತು. ಅದೇ ಸಮಯದಲ್ಲೇ ಆ ಕೆಫೆಗೆ ನನ್ನ ಕಿರಿಯ ಸಹೋದ್ಯೋಗಿಯೊಬ್ಬ ಎಂಟ್ರಿ ಕೊಟ್ಟ, ನಾನು ಅವನನ್ನು ಮಾತನಾಡಿಸಿದೆ. ಅವನು ಕಾಫಿ ಹಿಡಿದು ನಮ್ಮ ಟೇಬಲ್‌ಗೇ ಬಂದ. ಎಸ್ತೆರ್‌ ಮತ್ತು ನನ್ನ ಮಾತು ಯೌವನದ ಆ “ಮಜಾಭರಿತ’ ದಿನಗಳತ್ತ ಗಿರಕಿ ಹೊಡೆದು, ನಂತರ ಅದ್ಹೇಗೋ ಅಮೆರಿಕದಲ್ಲಿ ಹೆಚ್ಚುತ್ತಿರುವ ಡಿವೋರ್ಸ್‌ ಪ್ರಕರಣಗಳತ್ತ ಹೊರಳಿತು. 

Advertisement

ಡಿವೋರ್ಸ್‌ ಎನ್ನುವ ಪದ ಕಿವಿಗೆ ಬಿದ್ದದ್ದೇ ತಡ ಈ ಯುವಕ ಭಾಷಣ ಆರಂಭಿಸಿ ಬಿಟ್ಟ. “ಜಗತ್ತಿನಲ್ಲಿ ಯಾಕೆ ಡಿವೋರ್ಸ್‌ಗಳು ಹೆಚ್ಚಾಗುತ್ತಿವೆ’, “ಅವನ್ನು ಹೇಗೆ ತಡೆಯಬೇಕು’, “ಸಂಬಂಧಗಳು ಹಾಳಾಗುವುದರಲ್ಲಿ ಮಹಿಳೆಯರ ಪಾತ್ರ’, “ಸೆಕ್ಸ್‌ ಸೈಕಾಲಜಿ’  ಇತ್ಯಾದಿ ವಿಷಯಗಳ ಕುರಿತು ಏಕ್‌ಮಾರ್‌ ದೋ ತುಕಾx ಅಭಿಪ್ರಾಯ ನೀಡಲಾರಂಭಿಸಿದ. ಆಗ ಗೆಳತಿ ಎಸ್ತೆರ್‌, ಅವನ ಮಾತನ್ನು ತಿದ್ದಲು ಪ್ರಯತ್ನಿಸಿದಳು. ಆದರೆ ಆಸಾಮಿ ಕೇಳಲೇ ಇಲ್ಲ. “ಮೇಡಂ, ನಿಮಗೆ ಏನೂ ಗೊತ್ತಿಲ್ಲ, ನಾನು ಡಿವೋರ್ಸ್‌ಗಳನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ. ನನ್ನ ಫ್ರೆಂಡ್‌ದೇ ಇತ್ತೀಚೆಗೆ ಡಿವೋರ್ಸ್‌ ಆಯಿತು ಗೊತ್ತಾ?’ ಎಂದು ಫೈನಲ್‌ ಪಾಯಿಂಟ್‌ ಎದುರಿಟ್ಟ. ಎಸ್ತೆರ್‌ ಸುಮ್ಮನಾದಳು. 

ನಾನೂ ತೆಪ್ಪಗಾದೆ. ಅವನು ಇಬ್ಬರ ವಿರುದ್ಧ ಯುದ್ಧ ಗೆದ್ದಂಥ ಪುಳಕದಿಂದ ಎದ್ದುಹೊರಟ, ನಾವಿಬ್ಬರೂ ಅವನ ಬುದ್ಧಿಮತ್ತೆಯ ಬಗ್ಗೆ ಬಹಳ ಇಂಪ್ರಸ್‌ ಆಗಿಬಿಟ್ಟಿದ್ದೇವೆ ಎಂದು ಅವನು ಭಾವಿಸಿದನೇನೋ? ಅವನು ಅತ್ತ ಹೋದಮೇಲೆ ನಾನು ಹಣೆ ಹಣೆ ಚಚ್ಚಿಕೊಂಡೆ. ಅಂದಹಾಗೆ, ಆ ಯುವ ಸಹೋದ್ಯೋಗಿ ತಾನು ಯಾರ ಜೊತೆ ವಾದಿಸಿದೆ ಎನ್ನುವುದನ್ನು ತಿಳಿದುಕೊಳ್ಳಲೇ ಇಲ್ಲ! ನನ್ನ ಸ್ನೇಹಿತೆ ಎಸ್ತೆರ್‌ ಪರೆಲ್‌ ಇದ್ದಾಳಲ್ಲ, ಆಕೆ ಇಂದು ಜಗತ್ತಿನ ಅತಿ ಪ್ರಭಾವಶಾಲಿ ಮತ್ತು ಪ್ರಖ್ಯಾತ ಮನಶಾÏಸ್ತ್ರಜ್ಞರ‌ಲ್ಲಿ ಒಬ್ಬಳು,  ಸುಮಾರು ಮೂವತ್ತು ವರ್ಷದಿಂದ ವಿಚ್ಛೇದನದ ಹಂತಕ್ಕೆ ಹೊರಟುನಿಂತ ಸಾವಿರಾರು ದಂಪತಿಗಳಿಗೆ ಥೆರಪಿ ನೀಡಿ ಅವರ ಜೀವನವನ್ನು ಸರಿಪಡಿಸಿದವಳು, ಆಕೆಯ ಮನಶಾÏಸ್ತ್ರದ ಪುಸ್ತಕಗಳು 24 ಭಾಷೆಗಳಿಗೆ ತರ್ಜುಮೆಯಾಗಿವೆ. ಲಕ್ಷಾಂತರ ಜನ ಅಭಿಮಾನಿಗಳನ್ನು ಹೊಂದಿದ್ದಾಳೆ. ಸೆಕ್ಷುವಾಲಿಟಿ ಮತ್ತು ರಿಲೇಷನ್‌ಶಿಪ್‌ಗೆ ಹೊಸ ವ್ಯಾಖ್ಯಾನ ಬರೆದು ಇಂದು ಮನಶಾಸ್ತ್ರ ಲೋಕದಲ್ಲಿ ಅತ್ಯಂತ ಪ್ರಭಾವಿ ತಜ್ಞೆಯೆಂಬ ಹೆಗ್ಗಳಿಕೆ ಗಳಿಸಿದವಳು! “ನೀನು ಯಾರು ಅಂತ ಅವನಿಗೆ ಮೊದಲೇ ಹೇಳಬೇಕಿತ್ತು’ ಎಂದು ನಾನು ಎಸ್ತೆರ್‌ಗೆ ಅಂದೆ. ಅವಳು ನಗುತ್ತಾ ಕಾಫಿ ಗುಟುಕರಿಸಿದಳು.

ಈ ಚರ್ಚೆಯಲ್ಲಿ ಆ ಯುವಕ ನಿಜಕ್ಕೂ ಸೋತ ಎಂದೆನಿಸಿತು ನನಗೆ. “ಮೇಡಂ, ಡಿವೋರ್ಸ್‌ಗೆ ನಿಜವಾದ ಕಾರಣಗಳ ಬಗ್ಗೆ ನಿಮಗೇನೂ ಗೊತ್ತಿಲ್ಲ’ ಎನ್ನುವ ಬದಲು “ಈ ಬಗ್ಗೆ ನನಗೆ ಅಷ್ಟು ಚೆನ್ನಾಗಿ ಗೊತ್ತಿಲ್ಲ’ ಎಂದು ಅವನು ಹೇಳಿದ್ದರೆ, ಖಂಡಿತ ಎಸ್ತೆರ್‌ ಅವನಿಗೆ ವಾಸ್ತವ ಸಂಗತಿಗಳನ್ನು ಬಿಡಿಸಿ ಹೇಳುತ್ತಿದ್ದಳು. ಜಗತ್ತಿನ ಅತಿ ಪ್ರಖ್ಯಾತ ಮನಶಾಸ್ತ್ರಜ್ಞಳಿಂದ “ಫ್ರೀ’ ಪಾಠ ಹೇಳಿಸಿಕೊಳ್ಳುವ, ಆ ಮೂಲಕ ತನ್ನ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಅವಕಾಶವನ್ನು ಅವನು ಮಿಸ್‌ ಮಾಡಿಕೊಂಡ. 

ಇದೊಂದೇ ವಿಷಯವೆಂದಲ್ಲ, ಅಂತರ್ಜಾಲದ ವಿಸ್ತರಣೆಯಾದ ನಂತರವಂತೂ, ಅದರಲ್ಲೂ ಫೇಸ್‌ಬುಕ್‌-ಟ್ವಿಟರ್‌ ಹೆಚ್ಚಾದ ಮೇಲಂತೂ ಈ ರೋಗ ಹೆಚ್ಚಾಗಿಬಿಟ್ಟಿದೆ. “ನನಗೆ ಗೊತ್ತಿಲ್ಲ’ ಎಂದು ಒಪ್ಪಿಕೊಳ್ಳುವವರೇ ಇಲ್ಲ. ಆದರೆ ಈ ರೀತಿಯ ಮನಸ್ಥಿತಿಯಿಂದ ನಮ್ಮ ಮಾನಸಿಕ ನೆಮ್ಮದಿ ಎಷ್ಟು ಹಾಳಾಗುತ್ತಿದೆ ಎನ್ನುವುದನ್ನು ಯೋಚಿಸಿದ್ದೇವಾ? “ನನಗೆ ಗೊತ್ತಿಲ್ಲ’ ಎಂದು ಹೇಳಿಬಿಟ್ಟರೆ  ನಾನು ದಡ್ಡನಾಗಿಬಿಡುತ್ತೇನೆ ಎಂಬ ಭಯವೇಕೆ? 
ಹಾಗೆಂದು ನಿಮ್ಮ ಅಭಿಪ್ರಾಯ ಹಂಚಿಕೊಳ್ಳಲೇಬಾರದು ಎಂದೇನೂ ಅಲ್ಲ. ಆದರೆ ಒಂದು ಸಂಗತಿ ನೆನಪಿಡಿ, ಅಭಿಪ್ರಾಯ ಮುಂದಿಡುವವನಿಗೆ ಒಂದು ಜವಾಬ್ದಾರಿಯೂ ಇರುತ್ತದೆ. 

ನಾವು ನಮ್ಮ ಅಭಿಪ್ರಾಯವನ್ನು ಹೇಗೆ ರೂಪಿಸಿಕೊಂಡಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳುವುದು ಮೊದಲು ಮುಖ್ಯವಾಗುತ್ತದೆ. 
ಈ ವಿಷಯದಲ್ಲಿ ನಿಮಗೆ 3 ಸಲಹೆ ಕೊಡಲು ಬಯಸುತ್ತೇನೆ. 

1    ಇಂದು ಫೇಕ್‌ ನ್ಯೂಸ್‌ಗಳ ಹಾವಳಿ ವಿಪರೀತ ಹೆಚ್ಚಾಗುತ್ತಿದೆ. ನಿಮ್ಮ ಅಭಿಪ್ರಾಯ ಸುಳ್ಳು ಸುದ್ದಿಯನ್ನು ಅವಲಂಬಿಸಿರಬಹುದೇ ಯೋಚಿಸಿ. ಅಮೆರಿಕನ್‌ ಚುನಾವಣೆಗಳ ಸಮಯದಲ್ಲಿ ಟ್ರಂಪ್‌ ಬೆಂಬಲಿಗರು ಹಿಲರಿಯ ಬಗ್ಗೆ, ಆಕೆಯ ರಾಜನೀತಿಯ ಬಗ್ಗೆ, ಸೆಕ್ಷುವಲ್‌ ಜೀವನದ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಿಬಿಟ್ಟರೆ, ಇತ್ತ ಹಿಲರಿಯ ಬೆಂಬಲಿಗರು ಡೊನಾಲ್ಡ್‌ ಟ್ರಂಪ್‌ ವಿರುದ್ಧ ಇಲ್ಲ ಸಲ್ಲದ ಸುಳ್ಳು ಸುದ್ದಿಗಳನ್ನು ಹರಿಬಿಟ್ಟರು. ಸುಳ್ಳು ಸುದ್ದಿ ಹರಡುವುದಕ್ಕಾಗಿಯೇ ಸಂಬಳ ಪಡೆಯುವ ದೊಡ್ಡ ಪಡೆಯೇ ರಾಜಕೀಯ ಪಕ್ಷಗಳಲ್ಲಿ ಇರುತ್ತದೆ. ನೀವು ಇಂಥ ಸುದ್ದಿಯೊಂದನ್ನು ಓದಿ ಒಂದು ವಿಷಯದ ಬಗ್ಗೆ ಅಭಿಪ್ರಾಯ ರೂಪಿಸಿಕೊಂಡಿರಬಹುದಲ್ಲವೇ? ಹೀಗಾಗಿ ಮೊದಲು ಕೆಲವು ಪ್ರಶ್ನೆಗಳನ್ನು ಕೇಳಿಕೊಳ್ಳಿ- ಈ ಸುದ್ದಿಯಿಂದ ಯಾರಿಗೆ ಲಾಭವಾಗುತ್ತದೆ? ಯಾರಿಗೆ ಹಾನಿಯಾಗುತ್ತದೆ? ಇದು ಸುಳ್ಳಾಗಿರಬಹುದಾ? ಇದರ ಹಿಂದೆ ರಾಜಕೀಯ ದುರುದ್ದೇಶವಿರಬಹುದಾ?

2    ಸಾಮಾನ್ಯವಾಗಿ ನಮ್ಮ ಮಿದುಳು ಶಾರ್ಟ್‌ಕಟ್‌ಗಳನ್ನು ಹುಡುಕುತ್ತಿರುತ್ತದೆ. ಯಾವುದೇ ಒಂದು ವಿಷಯ ಅಥವಾ ವ್ಯಕ್ತಿಗಳ ಬಗ್ಗೆ ಅದರಲ್ಲಿ ಮೊದಲೇ ತುಂಬಲಾದ ಮಾಹಿತಿಗಳನ್ನು ಆಧರಿಸಿ ಅದು ಒಂದು ಅಭಿಪ್ರಾಯ ರೂಪಿಸಿ ಬಿಡುತ್ತದೆ. ಉದಾಹರಣೆಗೆ, ನಾವು ಒಂದು ವರ್ಗದ 
ಬಗ್ಗೆಯೋ ಅಥವಾ ಪಕ್ಷದ ಬಗ್ಗೆ ಒಂದು ಪೂರ್ವಗ್ರಹ ರೂಪಿಸಿಕೊಂಡುಬಿಟ್ಟರೆ ಆ ವರ್ಗ ಅಥವಾ ಪಕ್ಷದವರ ಬಗ್ಗೆ ನಿಶ್ಚಿತ ಅಭಿಪ್ರಾಯವನ್ನು ಕೊಟ್ಟುಬಿಡುತ್ತೇವೆ. “ರಿಪಬ್ಲಿಕನ್ನರು ದೇಶ ಹಾಳು ಮಾಡುತ್ತಿದ್ದಾರೆ. ಆ ಪಕ್ಷದವರು ಕಳ್ಳರು’ ಎಂಬುದು ಡೆಮಾಕ್ರಟಿಕ್‌ ಪಕ್ಷದ ಬೆಂಬಲಿಗರ ಅಭಿಪ್ರಾಯ, ಇನ್ನೊಂದೆಡೆ “ಡೆಮಾಕ್ರಟಿಕ್‌ ಪಕ್ಷದವರಷ್ಟು ದಗಲಾºಜಿಗಳು ಇನ್ನೊಬ್ಬರಿಲ್ಲ. ಅವರು ಬಂದರೆ ದೇಶ ಹಾಳಾಗುತ್ತದೆ’ ಎನ್ನುವುದು ರಿಪಬ್ಲಿಕನ್ನರ ಗಟ್ಟಿ ನಿಲುವು. ಈಗ ಸುಮ್ಮನೇ ಯೋಚಿಸಿನೋಡಿ… ಎರಡೂ ಪಕ್ಷದಲ್ಲೂ ಕಳ್ಳರಿರಬಹುದು, ಎರಡೂ ಪಕ್ಷದಲ್ಲೂ ಒಳ್ಳೆಯವರಿರಬಹುದು ಅಲ್ಲವೇ? ಇದು ಅತ್ಯಂತ ಬೇಸಿಕ್‌ ಸಂಗತಿ. ಆದರೆ ಈ ಸರಳ ಸಂಗತಿಯನ್ನು ಯೋಚಿಸದಷ್ಟು ಪ್ರಜ್ಞೆಗೆ ಗರ ಬಡಿಸುತ್ತದೆ “ಪೂರ್ವಗ್ರಹ’. 

3    ತರ್ಕಬದ್ಧವಾಗಿ ಯೋಚಿಸಿ, ಭಾವನಾತ್ಮಕವಾಗಿ ಅಲ್ಲ. ಯಾವಾಗ ನೀವು ಭಾವನಾತ್ಮಕವಾಗುತ್ತೀರೋ ನಿಮ್ಮ ತರ್ಕಕ್ಕೆ ಕತ್ತರಿ ಬಿದ್ದಂತೆ ಅರ್ಥ. ಭಾವನೆಗಳು ಎಷ್ಟು ಬಲಿಷ್ಠವಾಗಿರುತ್ತ ವೆಂದರೆ ತರ್ಕವನ್ನು ಅವು ಕ್ಷಣಮಾತ್ರದಲ್ಲಿ ಕಿತ್ತೆಸೆದುಬಿಡುತ್ತವೆ. 

ನಿಜಕ್ಕೂ ಇಂದು ಜಗತ್ತಿಗೆ ಆ ಜೆನ್‌ ಗುರು ಮಾದರಿ ಯಾಗ ಬೇಕಿದೆ. ಯಾವುದಾದರೂ ವಿಷಯದ ಬಗ್ಗೆ ನಿಮಗೆ ಗೊತ್ತಿಲ್ಲ ಎಂದಾಗ “ನನಗೆ ಗೊತ್ತಿಲ್ಲ’ ಎಂದು ಹೇಳಿಬಿಡಿ. ಸಾಧ್ಯವಾದರೆ ತಿಳಿದುಕೊಳ್ಳಲು ಪ್ರಯತ್ನಿಸಿ. ಏನೂ ಅರಿಯದೆ ” ನನಗೆ ಅರಿವು ಇದೆ’ ಎಂದು ನಿರೂಪಿಸಲು ಮುಂದಾಗಿ ನಿಮ್ಮ ಮತ್ತು ಎದುರಿನವರ ಮಾನಸಿಕ ನೆಮ್ಮದಿ ಹಾಳು ಮಾಡಬೇಡಿ. 

ಎಲೆನಾ ಸ್ಯಾಂಟರೆಲಿ, ಅಮೆರಿಕನ್‌ ಉದ್ಯಮಿ

Advertisement

Udayavani is now on Telegram. Click here to join our channel and stay updated with the latest news.

Next