Advertisement
ನಾನು ಹುಟ್ಟಿ, ಬೆಳೆದಿದ್ದು ತುಮಕೂರಿನಲ್ಲಿ. ನಮ್ಮ ತಂದೆಗೆ ಒಟ್ಟು ಏಳು ಜನ ಮಕ್ಕಳು. ಅವರಲ್ಲಿ ನಾನು ನಾಲ್ಕನೆಯವಳು. ನನಗೆ 13 ವರ್ಷವಾಗಿದ್ದಾಗ ಅಮ್ಮ ತೀರಿಕೊಂಡಿದ್ದರಿಂದ, ಅಕ್ಕ-ಭಾವನ ಆಶ್ರಯದಲ್ಲಿ ಬೆಳೆದೆ. ನಮ್ಮದು ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬ. ಮನೆ-ಶಾಲೆ ಬಿಟ್ಟು ಎಲ್ಲಿಗೂ ಹೋಗಲು ಬಿಡುತ್ತಿರಲಿಲ್ಲ. ಜಾತ್ರೆ, ಉತ್ಸವಗಳಿಗೆ ಹೋಗಿದ್ದೂ ನೆನಪಿಲ್ಲ.
ಅವತ್ತು ಊಟ ಮಾಡಿದ ನಂತರ ನಾವೆಲ್ಲಾ ನಾಟಕ ನೋಡಲು ಹೊರಟೆವು. “ಸದಾರಮೆ’ ನಾಟಕ ಪ್ರದರ್ಶನವದು. ತಂದೆಯವರು ಈಗಾಗಲೇ ಸಿರಾದಲ್ಲಿ ನಾಟಕ ನೋಡಿ ತುಂಬಾ ಮೆಚ್ಚಿಕೊಂಡಿದ್ದರು. ಅವರಿಗೆ ಹಿರಣ್ಣಯ್ಯನವರ ಬಗ್ಗೆ ಅಭಿಮಾನವೂ ಮೂಡಿತ್ತು. ”
Related Articles
Advertisement
ಆಮೇಲೆ, ಹುಡುಗ ಹೇಗಿದ್ದಾನೆ? ನಿನಗೆ ಒಪ್ಪಿಗೆಯೇ? ಅಂತ ಅಪ್ಪ ಕೇಳಿದರು. ಹುಡುಗ, ಕಪ್ಪಿದ್ದರೂ ಲಕ್ಷಣವಂತ ಅನ್ನಿಸಿತ್ತು. ಆದರೂ, ಅಕ್ಕ, ಭಾವ ಒಪ್ಪಬೇಕು ಅಂತ ಮೆಲ್ಲಗೆ ಹೇಳಿದ್ದೆ. ಮದುವೆ ನಿನಗೋ, ಅಕ್ಕನಿಗೋ ಅಂತ ಕೊನೆಯವರೆಗೂ ಅವರು ಹಾಸ್ಯ ಮಾಡುತ್ತಿದ್ದರು. ಕೊನೆಗೂ ಒಂದು ವಾರದ ಚರ್ಚೆಯ ನಂತರ ಮದುವೆ ನಿಶ್ಚಯವಾಯಿತು. 1958ರ ಡಿಸೆಂಬರ್ 20ರಂದು ನಾನು ಹಿರಣ್ಣಯ್ಯನವರ ಕೈ ಹಿಡಿದು ದಾಂಪತ್ಯ ಜೀವನಕ್ಕೂ, ಕಲಾವಿದರ ಜೀವನಕ್ಕೂ ಕಾಲಿರಿಸಿದೆ.
ಏನೂ ಗೊತ್ತಿರಲಿಲ್ಲನನಗಾಗ ಜೀವನ ಅಂದರೆ ಏನೆಂದೇ ಗೊತ್ತಿರಲಿಲ್ಲ. ಗ್ರಂಥಾಲಯದಿಂದ ಅಣ್ಣ ತರುತ್ತಿದ್ದ ಅ.ನ.ಕೃಷ್ಣರಾಯರ ಕಾದಂಬರಿಗಳನ್ನು ಓದಿ, ಜೀವನ ಹೀಗೆ ಎಂದುಕೊಂಡಿದ್ದೆ. ಮನೆ, ಶಾಲೆ ಅಷ್ಟೇ ನನಗೆ ಗೊತ್ತಿದ್ದುದು. ತಂದೆ ಶಾನುಭೋಗಿಕೆ ಮಾಡುತ್ತಿದ್ದರೂ, ಯಾರಿಂದಲೂ ಏನೂ ಪಡೆಯದ ಸ್ವಾಭಿಮಾನಿಗಳು. ಅದೇ ಗುಣ ನಮಗೂ ಬಂದಿತ್ತು. ಮದುವೆಯ ನಂತರ ಅವರು ಅರಸೀಕೆರೆಗೆ ಕಂಪನಿ ಶಿಫ್ಟ್ ಮಾಡಿದರು. ಆಗೆಲ್ಲಾ ನಾಟಕ ನೋಡಲು ಫಸ್ಟ್ ಕ್ಲಾಸ್‌ಗೆ 1 ರೂ., ಚಾಪೆ ಅಥವಾ ನೆಲಕ್ಕೆ ಎಂಟಾಣೆ ಇರುತ್ತಿತ್ತು. ಹಿರಣ್ಣಯ್ಯನವರಿಗೆ ಬರುತ್ತಿದ್ದ ಸಂಭಾವನೆ ಕೇವಲ 100 ರೂ. ಅದರಲ್ಲೇ ಮನೆ ಬಾಡಿಗೆ, ಸಂಸಾರ ನಡೆಸಬೇಕಿತ್ತು. ಆಗಿನ ಕಾಲಕ್ಕೇ ಅವರ ಬಳಿ ಕಾರಿತ್ತು. ಮನೆ ಬಾಡಿಗೆಯೇ 20 ರೂ. ಮನೆ ಅಂದರೆ ಖಾಲಿಮನೆ ಅಷ್ಟೇ. ಮನೆಯಲ್ಲಿ ಏನೇನೂ ಇರಲಿಲ್ಲ. ಎಲ್ಲವನ್ನೂ ನಮ್ಮ ತಂದೆಯವರು ಕೊಡಿಸಿದರು. ಆ ಸಂದರ್ಭದಲ್ಲಿ ನೋಡಿದ್ದನ್ನೆಲ್ಲಾ ಕೊಂಡುಕೊಳ್ಳುವ ಆಸೆಯಿದ್ದರೂ ಅದು ಆಗುತ್ತಿರಲಿಲ್ಲ. ಇಬ್ಬರಿಗೂ ಅದು ಗೊತ್ತಿತ್ತು. ಅತಿ ಆಸೆ ಮಾಡದೆ, ವೃತ್ತಿಪರತೆಗೆ ಬೆಲೆ ಕೊಡುತ್ತಾ ಬಂದೆವು. ಅದೇ ನಮ್ಮನ್ನು ಕೈ ಹಿಡಿಯಿತು. ಇದೇ ಸಮಯದಲ್ಲಿ ನಮಗೆ ಮಕ್ಕಳು ಹುಟ್ಟಿದರು. ಮೊದಲನೆಯವಳು ಶಾರದಾಂಬ, ಆಮೇಲೆ ಹಿರಣ್ಣಯ್ಯ ಬಾಬು, ಶ್ರೀಕಾಂತ, ಗೀತ, ಗುರುಪ್ರಸಾದ್. ಹೆಚ್ಚಿದ ಖರ್ಚು ವೆಚ್ಚಗಳನ್ನು ತೂಗಿಸುವುದನ್ನು ಬದುಕೇ ಕಲಿಸಿತು.
ಔಷಧಿಯಲ್ಲ, ವಿಸ್ಕಿ! ನಾವು ಸಣ್ಣವರಿದ್ದಾಗ ಕುಡುಕರು ಬಂದರೆ, ಕಿಟಕಿ-ಬಾಗಿಲುಗಳನ್ನು ಮುಚ್ಚಿ ಹೆದರಿಕೆಯಲ್ಲಿ ಮನೆಯೊಳಗೆ ಕುಳಿತಿರುತ್ತಿದ್ದೆವು. ಅಷ್ಟು ಭಯ ಕುಡುಕರೆಂದರೆ. ಮದುವೆ ನಂತರ ಅವರು, ಒಂದು ವಿಸ್ಕಿ ಬಾಟಲಿ ತಂದು ಔಷಧಿಯೆಂದು ಎಂದು ನಂಬಿಸಿ, ದಿನವೂ ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳಬೇಕು ಎಂದರು. ನಾನೇ ಅದನ್ನು ಕೊಡುತ್ತಿದ್ದೆ, ಔಷಧಿ ಎಂದುಕೊಂಡು. ಎರಡೇ ದಿವಸಕ್ಕೆ ಬಾಟಲು ಖಾಲಿ! ನನಗೆ ಆಶ್ಚರ್ಯ, ಎರಡೇ ದಿವಸಕ್ಕೆ ಹೇಗೆ ಔಷಧಿ ಮುಗಿದು ಹೋಯ್ತು ಅಂತ. ಅವರ ಒಳ್ಳೆಯ ಗುಣ ಎಂದರೆ ಎಂದೂ ಕುಡಿದು ಬಂದು ಗಲಾಟೆ ಮಾಡಲಿಲ್ಲ. ಎಷ್ಟೇ ಕುಡಿದರೂ ನಾಟಕದ ಪಾತ್ರಗಳನ್ನು ಅತ್ಯುತ್ತಮವಾಗಿ ಅಭಿನಯಿಸುತ್ತಿದ್ದರು. ತಂದೆಯವರಿಂದ ಬಂದ ಕಲೆ ರಕ್ತಗತವಾಗಿತ್ತು. ನಾನೂ ಅವರ ಹಿಂದೆ ನಾಟಕದ ತಾಲೀಮಿಗೆ, ನಾಟಕದ ಕಂಪನಿಗೆ ಹೋಗುತ್ತಿದ್ದೆ. ಅವರು ರಾತ್ರಿಯೆಲ್ಲಾ ನಾಟಕದ ತಾಲೀಮು ನಡೆಸುತ್ತಿದ್ದರು. “ಹತ್ತು ಜನ ರಾತ್ರಿ ಊಟಕ್ಕೆ ಬರುತ್ತಾರೆ. ಅಡುಗೆ ಮಾಡಿರು’ ಎನ್ನುತ್ತಿದ್ದರು. ನಾಟಕ ಮುಗಿಯುವುದು ರಾತ್ರಿ ಎರಡು ಗಂಟೆ ಆಗುತ್ತಿತ್ತು. ನಾನು ಬೇಸರವಿಲ್ಲದೆ ಅಡುಗೆ ಮಾಡಿ, ಎಲ್ಲರಿಗೂ ಬಡಿಸುತ್ತಿದ್ದೆ. ಒಳ್ಳೆ ಯ ದಿನಗಳು ಬಂದವು
ನಮ್ಮದೇ ಸಂಘ ಸ್ಥಾಪನೆಯ ನಂತರ ಹಣ, ಹೆಸರು ಬರಲಾರಂಭಿಸಿತು. ಬೆಂಗಳೂರಿನಲ್ಲಿ ಸ್ವಂತ ಮನೆಯನ್ನೂ ಕಟ್ಟಿಸಿದೆವು. ಲಂಚಾವತಾರದ ಮೂಲಕ ಹಿರಣ್ಣಯ್ಯ ಅವರ ಹೆಸರು ಜನಪ್ರಿಯವಾಯ್ತು. ಲಂಚಾವತಾರವನ್ನು ಅವರು ಬರೆದದ್ದು. ಮಾವನವರು ಬರೆದ ದೇವದಾಸಿಯನ್ನು, ಪರಿಷ್ಕೃತಗೊಳಿಸಿದ್ದೂ ಅವರೇ. ಆದರೆ, ಅವರು ಯಾವತ್ತೂ ಹಣದ ಹಿಂದೆ ಬೀಳಲಿಲ್ಲ. ಹಣ ನೋಡಿ ಅವರಿಗೆ ತಲೆ ತಿರುಗಲಿಲ್ಲ. ರೇಸ್ ಕೋರ್ಸ್‌ಗೆ ಹೋಗುತ್ತಿದ್ದರು. ಮಗನ ಕೈಯಲ್ಲಿ ನಾನೇ ದುಡ್ಡು ಕಳಿಸುತ್ತಿದ್ದೆ. ಬಂದ ಹಣವೆಲ್ಲಾ ನನಗೇ ನೀಡುತ್ತಿದ್ದರು. ಅವರೆಂದೂ ಲೆಕ್ಕ ಕೇಳಲಿಲ್ಲ. ಹಣಕ್ಕೆ ಎಂದೂ ಬೆಲೆ ಕಟ್ಟಲಿಲ್ಲ. ನಾನೆಂದೂ, ಹೀಗೇಕೆ ಮಾಡುತ್ತೀರಿ ಎಂದು ಅವರ ಜೊತೆಗೆ ಜಗಳ ಕಾಯಲಿಲ್ಲ. ರಾತ್ರಿ ಎಷ್ಟು ತಡವಾಗಿ ಬಂದರೂ ಮಕ್ಕಳನ್ನು ಮಾತಾಡಿಸಿ, ಚಾಕೊಲೇಟ್ ನೀಡುತ್ತಿದ್ದರು. ನಂತರ ಯಾವಾಗಲೋ ಕುಡಿತ, ಸಿಗರೇಟ್ ಎಲ್ಲಾ ಬಿಟ್ಟರು. ಅದು ಹೇಗೆಂದರೆ, ನನ್ನಲ್ಲಿ ಅದಕ್ಕೆ ಉತ್ತರವಿಲ್ಲ. ನಾವ್ಯಾಕೆ ಕುಡೀಬಾರ್ಧು?
ಅವರು ಕುಡಿಯುವುದನ್ನು ನೋಡಿ ಮಕ್ಕಳು, ನಾವೂ ಕುಡಿಯುತ್ತೇವೆ ಅಂತಿದ್ದರು. ನಾನವರಿಗೆ ಒಂದೇ ಮಾತು ಹೇಳಿದೆ: “ನಿಮ್ಮ ತಾತ ಹಾಗೂ ತಂದೆಯಂತೆ ನೀವೂ ಪ್ರಶಸ್ತಿ, ಗೌರವ, ಕೀರ್ತಿ ಸಂಪಾದಿಸಿ. ಆ ನಂತರ ಎಷ್ಟು ಬೇಕಾದರೂ ಕುಡಿಯಿರಿ’ ಎಂದೆ. ಅಂದಿನಿಂದ ಯಾವತ್ತೂ ಮಕ್ಕಳು ಆ ಕುರಿತು ಮಾತಾಡಲಿಲ್ಲ. ಅವರು ಚೈನ್ ಸ್ಮೋಕರ್ ಕೂಡಾ. ಅದರ ದುಷ್ಪರಿಣಾಮಗಳ ಕುರಿತು ಮಕ್ಕಳಿಗೆ ತಿಳಿ ಹೇಳುತ್ತಿದ್ದೆ. ಅದೇ ಮಕ್ಕಳಿಗೆ ಪಾಠವಾಯಿತು. ಅವರ್ಯಾರೂ ಚಟ ಬೆಳೆಸಿಕೊಳ್ಳಲಿಲ್ಲ. ಮಕ್ಕಳೆಲ್ಲಾ ಅವರ ನಾಟಕಗಳನ್ನು ನೋಡುತ್ತಿದ್ದರು. ಬಾಬು ಹಿರಣ್ಣಯ್ಯನಿಗೆ ಮಾತ್ರವೇ ಆ ಕಲೆ ಒಲಿದದ್ದು. ಗಂಡನನ್ನು ದೂರಬಾರದು
ಗಂಡನಿಗೆ ಏನೇ ದುರ್ಗುಣಗಳಿದ್ದರೂ, ಹೆಂಡತಿ ಆ ಕುರಿತು ಎಲ್ಲರೆದುರು ದೂರಬಾರದು. ಮಕ್ಕಳ ಎದುರೂ ಪತಿಯನ್ನು ಅವಮಾನಿಸಬಾರದು. ಇಲ್ಲದಿದ್ದರೆ, ಮಕ್ಕಳಿಗೆ ಅಪ್ಪನ ಮೇಲೆ ತಿರಸ್ಕಾರ ಮೂಡುತ್ತದೆ. ಅವರನ್ನು ಸರಿದಾರಿಗೆ ತರುತ್ತೇನೆ ಎಂಬ ಆತ್ಮಶ್ವಾಸವಿದ್ದರೆ, ನಗುನಗುತ್ತಾ ಎಲ್ಲವನ್ನು ಎದುರಿಸಬಹುದು. ನಾನು ಮಾಡಿದ್ದೂ ಅದನ್ನೇ. ಗಂಡ ಕುಡುಕ ಎಂದು ಮಕ್ಕಳೆದುರು ದೂರಿದ್ದರೆ, ರೋದಿಸಿದ್ದರೆ ಅಪ್ಪನ ಬಗ್ಗೆ ಅವರ ಭಾವನೆಯೇ ಬದಲಾಗುತ್ತಿತ್ತೇನೋ. ಆದರೆ, ನಮ್ಮ ಮಕ್ಕಳಿಗೆ ತಂದೆ ಅಂದ್ರೆ ಅಪಾರ ಗೌರವ. ತಂದೆ-ಮಕ್ಕಳ ಸಂಬಂಧವನ್ನು ಭದ್ರಗೊಳಿಸುವ ಶಕ್ತಿ ಹೆಂಡತಿಯ ಕೈಯಲ್ಲೇ ಇದೆ. ರಾಧಿಕಾ ರಂಜನಿ
ಚಿತ್ರಗಳು: ಡಿ.ಸಿ. ನಾಗೇಶ್