ನಾಯಕನಹಟ್ಟಿ (ಚಿತ್ರದುರ್ಗ): ಕಡಲೆ ಬಿತ್ತನೆ ಬೀಜ ಅಸಮರ್ಪಕ ವಿತರಣೆ ಯಿಂದ ಆಕ್ರೋಶಗೊಂಡ ರೈತರು ಕೃಷಿ ಅಧಿಕಾರಿಯನ್ನು ಥಳಿಸಿರುವ ಘಟನೆ ತುರುವನೂರು ಗ್ರಾಮದಲ್ಲಿ ಸೋಮವಾರ ನಡೆದಿದೆ.
ಹಿಂಗಾರು ಹಂಗಾಮಿನ ಬಿತ್ತನೆಗಾಗಿ ಬೀಜ ಪಡೆಯಲು ತುರುವನೂರು ಹೋಬಳಿ ಸುತ್ತಮುತ್ತಲಿನ ಸುಮಾರು 500ಕ್ಕೂ ಹೆಚ್ಚು ರೈತರು ರೈತ ಸಂಪರ್ಕ ಕೇಂದ್ರಕ್ಕೆ ಆಗಮಿಸಿದ್ದರು. ಬೆಳಗ್ಗೆ ಐದು ಗಂಟೆಯಿಂದ ಸರದಿ ಸಾಲಿನಲ್ಲಿ ನಿಂತು ಬಿತ್ತನೆ ಬೀಜಕ್ಕಾಗಿ ಕಾದಿದ್ದಾರೆ. ಆದರೆ ಸರಿಯಾಗಿ ಬೀಜ ಸಿಗದಿದ್ದರಿಂದ ಆಕ್ರೋಶಗೊಂಡ ರೈತರು ಹಾಗೂ ರೈತ ಮಹಿಳೆಯರು ಕಚೇರಿ ಬಾಗಿಲು ತೆರೆದು ಒಳನುಗ್ಗಿದ್ದಾರೆ. ನಂತರ ಕೃಷಿ ಅಧಿಕಾರಿ ಹಾಗೂ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ಸಿಬ್ಬಂದಿಯನ್ನು ಪಾರು ಮಾಡಿದ್ದಾರೆ. ನಂತರ ಬಿತ್ತನೆ ಬೀಜ ವಿತರಣೆ ಸ್ಥಗಿತಗೊಳಿಸಿದ್ದಾರೆ.
ಸ್ಥಳೀಯ ತುರುವನೂರು ಸೇರಿ ಕಲ್ಲೇ ದೇವರಪುರ, ಚಿಕ್ಕಗೊಂಡನಹಳ್ಳಿ, ಮಾಡ ನಾಯಕನಹಳ್ಳಿ ಹಾಗೂ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ರೈತರು ಬೀಜ ಪಡೆಯಲು ಬೆಳಗ್ಗೆಯಿಂದ ಕಾದಿದ್ದಾರೆ. ಆದರೆ ಇಲಾಖೆ ಸಿಬ್ಬಂದಿ ಮಧ್ಯಾಹ್ನ 12ಕ್ಕೆ ವಿತರಣೆ ಆರಂಭಿಸಿ ದ್ದಾರೆ. ಎಲ್ಲ ರೈತರ ಪಹಣಿ ಪರಿಶೀಲಿಸಿ ಟೋಕನ್ ನೀಡುವುದಕ್ಕೆ ವಿಳಂಬವಾಗಿದೆ. ಅಲ್ಲದೆ ಒಂದು ಎಕರೆಗೆ ಒಂದೇ ಪ್ಯಾಕೇಟ್ ಬೀಜ ನೀಡುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಇದರಿಂದ ರೈತರು ಗಲಾಟೆ ಆರಂಭಿಸಿದ್ದಾರೆ. ಸಿಬ್ಬಂದಿ ಹಾಗೂ ರೈತರ ಮಧ್ಯೆ ವಾಗ್ವಾದ ನಡೆದಿದೆ. ಸಿಬ್ಬಂದಿ ವರ್ತನೆಯಿಂದ ಆಕ್ರೋಶಗೊಂಡ ರೈತರು ಏಕಾಏಕಿ ಕಚೇರಿಯ ಒಳನುಗ್ಗಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿ ರೈತರನ್ನು ಚದುರಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.
ರೈತರು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿರುವುದು ಸರಿಯಲ್ಲ. ರೈತರ ಎಲ್ಲ ಸಮಸ್ಯೆಗಳಿಗೆ ಇಲಾಖೆ ಸ್ಪಂದಿಸುತ್ತಿದೆ. ಆದರೆ ರೈತರೊಂದಿಗೆ ಇಲಾಖೆ
ಸಂಘರ್ಷಕ್ಕಿಳಿಯುವುದಿಲ್ಲ. ರೈತರು ತಾಳ್ಮೆಯಿಂದ ವರ್ತಿಸಬೇಕು. ಬಿತ್ತನೆ ಬೀಜ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ಗ್ರಾಮದಲ್ಲಿ ಗೋದಾಮು ಸಮಸ್ಯೆ ಯಿದೆ. ಸರಕಾರದ ನಿಯಮ ಗಳಂತೆ ಬಿತ್ತನೆ ಬೀಜ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು
ವೆಂಕಟೇಶ್, ಚಿತ್ರದುರ್ಗ ತಾಲೂಕು ಸಹಾಯಕ ಕೃಷಿ ನಿರ್ದೇಶಕ