ಹೈದರಾಬಾದ್: ರಾಮಾಯಣದಲ್ಲಿ ಸೀತಾಮಾತೆ ತನ್ನ ಪಾವಿತ್ರ್ಯವನ್ನು ಸಾಬೀತು ಮಾಡಲು ಅಗ್ನಿಪರೀಕ್ಷೆಗೊಳಗಾಗಿದ್ದು ಜನಜನಿತ ಕಥೆ. ಇದೀಗ ಅಂತಹದ್ದೊಂದು ಘಟನೆ ತೆಲಂಗಾಣ ರಾಜ್ಯದ ಬಂಜಾರುಪಲ್ಲಿ ಎಂಬ ಹಳ್ಳಿಯಲ್ಲಿ ನಡೆದಿದೆ.
ಇದನ್ನೂ ಓದಿ:ಇಂದೋರ್ ಟೆಸ್ಟ್ ಗೆದ್ದು ತಿರುಗೇಟು ನೀಡಿದ ಆಸ್ಟ್ರೇಲಿಯಾ: ರೋಹಿತ್ ಪಡೆಗೆ ಮುಖಭಂಗ
ಅಕ್ರಮ ಸಂಬಂಧದ ಆರೋಪದ ಕುರಿತು ಗಂಡ, ಹೆಂಡತಿ ನಡುವೆ ಪ್ರತಿದಿನ ಜಗಳ ನಡೆಯುತ್ತಿತ್ತು. ಕೊನೆಗೆ ಈ ಪ್ರಕರಣ ಊರಿನ ಹಿರಿಯರ ಪಂಚಾಯ್ತಿ ಕಟಕಟೆ ಏರಿತ್ತು. ಇದರ ಪರಿಣಾಮ ಆ ವ್ಯಕ್ತಿ ತನ್ನ ಅಣ್ಣನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿಲ್ಲ ಎಂದು ಸಾಬೀತುಪಡಿಸಲು, ಹಳ್ಳಿಗರು ಅಗ್ನಿಪರೀಕ್ಷೆ ಗೊಳಪಡುವಂತೆ ಸೂಚಿಸಿದ್ದರು. ಅದರಂತೆ ಆ ವ್ಯಕ್ತಿ ಚೆನ್ನಾಗಿ ಉರಿಯುತ್ತಿದ್ದ ಕೆಂಡದ ಮಧ್ಯೆದಲ್ಲಿದ್ದ ಕಬ್ಬಿಣದ ರಾಡನ್ನು ಕೈಯಲ್ಲಿ ಹಿಡಿದುಕೊಳ್ಳಲು ಒಪ್ಪಿಕೊಂಡಿದ್ದ.
ಅಗ್ನಿಕುಂಡಕ್ಕೆ ಮೂರು ಪ್ರದಕ್ಷಿಣೆ ಹಾಕಿ ಬೆಂಕಿಯಲ್ಲಿ ಉರಿಯುತ್ತಿದ್ದ ಕಬ್ಬಿಣದ ಸರಳನ್ನು ಕೈಯಲ್ಲಿ ಹಿಡಿದುಕೊಂಡಿದ್ದ. ಅಚ್ಚರಿ ಎಂಬಂತೆ ಆತನ ಕೈ ಸುಟ್ಟು ಹೋಗದೆ ಯಥಾಸ್ಥಿತಿಯಲ್ಲೇ ಇತ್ತು. ಜಾತಿ ಮುಖಂಡರ ಪದ್ಧತಿ ಪ್ರಕಾರ, ಒಂದು ವೇಳೆ ಬಿಸಿಯಾದ ಕಬ್ಬಿಣದ ಸರಳನ್ನು ಕೈಯಲ್ಲಿ ಹಿಡಿದುಕೊಂಡಾಗ ಕೈಸುಡದೇ ಇದ್ದರೆ, ಆತ ಅಗ್ನಿಪರೀಕ್ಷೆಯಲ್ಲಿ ನಿರಪರಾಧಿ ಎಂಬುದು ಸಾಬೀತಾದಂತೆ.
ಆದರೆ ಆತ ಅಗ್ನಿಪರೀಕ್ಷೆಯಲ್ಲಿ ತನ್ನ ನಿಷ್ಠೆಯನ್ನು ಸಾಬೀತುಪಡಿಸಿದ್ದರು ಕೂಡಾ ಇದನ್ನು ಪಂಚಾಯ್ತಿಗೆ ಸೇರಿದ್ದ ವ್ಯಕ್ತಿಗಳು ಮನ್ನಿಸಿಲ್ಲ. ವ್ಯಕ್ತಿಗೆ ತಪ್ಪನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸಿದ್ದಾರೆ. ಈಗ ವ್ಯಕ್ತಿಯ ಪತ್ನಿ ಪೊಲೀಸ್ ದೂರನ್ನು ನೀಡಿದ್ದಾರೆ. ಇದರ ವಿಡಿಯೊ ಎಲ್ಲ ಕಡೆಗೆ ಹರಿದಾಡುತ್ತಿದೆ.