Advertisement

ಧೋನಿ ಕಾಲದಲ್ಲಿ ಆಡಿದ್ದಕ್ಕೆ ಬೇಸರವಿಲ್ಲ: ಮುಸುಡಿಗೆ ಗುದ್ದುವೆ ಎಂದಿದ್ದ ಹೇಡನ್‌!

02:24 AM May 08, 2020 | Hari Prasad |

ಹೊಸದಿಲ್ಲಿ: ವಿಶ್ವ ಕ್ರಿಕೆಟ್‌ನಲ್ಲಿ ವಿಕೆಟ್‌ ಕೀಪರ್‌ ಆಗುವುದು ಅದೃಷ್ಟವೂ ಹೌದು, ದುರದೃಷ್ಟವೂ ಹೌದು. ಒಮ್ಮೆ ಆತ ಕ್ಲಿಕ್‌ ಆದನೆಂದರೆ ಕೆಲವು ವರ್ಷಗಳ ಕಾಲ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವುದು ಖಂಡಿತ.

Advertisement

ಇದು ನಿಜಕ್ಕೂ ಅದೃಷ್ಟದ ಸಂಗತಿ. ಆದರೆ ಈತನ ಮೆರೆದಾಟದ ಅವಧಿಯಲ್ಲಿ ಉಳಿದ ಕೀಪರ್‌ಗಳೆಲ್ಲ ಅವಕಾಶ ವಂಚಿತರಾಗಬೇಕಾಗುತ್ತದೆ. ಇವರು ನಿಜಕ್ಕೂ ನತದೃಷ್ಟರು! ಇದಕ್ಕೊಂದು ಉತ್ತಮ ಉದಾಹರಣೆಯೆಂದರೆ ಮಹೇಂದ್ರ ಸಿಂಗ್‌ ಧೋನಿ ಯುಗ.

ಇವರ ಮೆರೆದಾಟದ ವೇಳೆ ಮತ್ತೋರ್ವ ಪ್ರತಿಭಾನ್ವಿತ ಕೀಪರ್‌, ಗುಜರಾತ್‌ ರಣಜಿ ವಿಜೇತ ತಂಡದ ನಾಯಕನೂ ಆದ ಪಾರ್ಥಿವ್‌ ಪಟೇಲ್‌ ಮೂಲೆಗುಂಪಾಗಬೇಕಾಯಿತು. ವಿಪರ್ಯಾಸವೆಂದರೆ, ಪಾರ್ಥಿವ್‌ ಧೋನಿಗಿಂತ ಮೊದಲೇ ಭಾರತ ತಂಡವನ್ನು ಪ್ರವೇಶಿಸಿಯೂ ಈ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ವಿಫ‌ಲರಾದದ್ದು.

ಪಶ್ಚಾತ್ತಾಪವಿಲ್ಲ
ಇದಕ್ಕೆ ಸಂಬಂಧಿಸಿದಂತೆ ‘100 ಅವರ್, 100 ಸ್ಟಾರ್’ ಕಾರ್ಯಕ್ರಮದಲ್ಲಿ ಮಾತಾಡಿದ ಪಾರ್ಥಿವ್‌ ಪಟೇಲ್‌, ‘ನಾನು ಧೋನಿ ಯುಗದಲ್ಲಿ ಹುಟ್ಟಿದ ಕಾರಣಕ್ಕಾಗಿ ನತದೃಷ್ಟ ಎಂದು ಭಾವಿಸಲಾರೆ. ಇದಕ್ಕಾಗಿ ಯಾವ ಪಶ್ಚಾತ್ತಾಪವೂ ಇಲ್ಲ..’ ಎಂಬುದಾಗಿ ಹೇಳಿದ್ದಾರೆ.

‘ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ ಜೀವನವನ್ನು ಧೋನಿ ಅವರಿಗಿಂತ ಮೊದಲೇ ಆರಂಭಿಸಿದ್ದೆ. ಆದರೆ ಒಂದೆರಡು ಪ್ರಮುಖ ಸರಣಿಗಳಲ್ಲಿ ನನ್ನ ನಿರ್ವಹಣೆ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಹೀಗಾಗಿ ನನ್ನ ಸ್ಥಾನ ಧೋನಿ ಪಾಲಾಯಿತು. ಅವರು ಸಿಕ್ಕಿದ ಅವಕಾಶಗಳನ್ನು ಸಮರ್ಥ ರೀತಿಯಲ್ಲಿ ಬಳಸಿಕೊಂಡರು. ಬಳಿಕ ಹಿಂದಿರುಗಿ ನೋಡಲಿಲ್ಲ. ಧೋನಿಯಿಂದಾಗಿ ನನಗೆ ಅವಕಾಶ ತಪ್ಪಿತು ಎಂದು ಜನರು ಹೇಳುತ್ತಾರೆ. ಆದರೆ ನಾನು ಮಾತ್ರ ಇದನ್ನು ಒಪ್ಪಲಾರೆ’ ಎಂದು ಪಾರ್ಥಿವ್‌ ಪಟೇಲ್‌ ಈ ಕಾರ್ಯಕ್ರಮದ ವೇಳೆ ಹೇಳಿದರು.

Advertisement

ಮುಸುಡಿಗೆ ಗುದ್ದುವೆ ಎಂದಿದ್ದ ಹೇಡನ್‌!
ಈ ಕಾರ್ಯಕ್ರಮದ ವೇಳೆ ಮ್ಯಾಥ್ಯೂ ಹೇಡನ್‌ ಜತೆಗಿನ ಪ್ರಸಂಗವೊಂದನ್ನು ಪಾರ್ಥಿವ್‌ ಪಟೇಲ್‌ ನೆನಪಿಸಿಕೊಂಡರು. ‘ಅದು ಬ್ರಿಸ್ಬೇನ್‌ ಟೆಸ್ಟ್‌ ಪಂದ್ಯ. ಶತಕ ಬಾರಿಸಿದ ಮ್ಯಾಥ್ಯೂ ಹೇಡನ್‌ ಅವರನ್ನು ಆಗಷ್ಟೇ ಇರ್ಫಾನ್‌ ಪಠಾಣ್‌ ಔಟ್‌ ಮಾಡಿದ್ದರು. ನಾನಾಗ ಡ್ರಿಂಕ್ಸ್‌ ತೆಗೆದುಕೊಂಡು ಅಂಗಳಕ್ಕಿಳಿದೆ. ಹೇಡನ್‌ ನನ್ನ ಮುಂದೆ ಹಾದುಹೋಗುವಾಗ ಅವರನ್ನು ನೋಡಿ ತಮಾಷೆ ಮಾಡಿದೆ…’

‘ಇದರಿಂದ ಹೇಡನ್‌ ಸಿಟ್ಟಾದರು. ನಾನು ವಾಪಸಾಗುವಾಗ ಅವರು ಸುರಂಗದಂತಿರುವ ಬ್ರಿಸ್ಬೇನ್‌ನ ಡ್ರೆಸ್ಸಿಂಗ್‌ ರೂಮ್‌ ಬಾಗಿಲಲ್ಲಿ ನಿಂತಿದ್ದರು. ನನ್ನನ್ನು ನೋಡಿದವರೇ, ಇನ್ನೊಮ್ಮೆ ಇದೇ ರೀತಿ ಮಾಡಿದರೆ ನಿನ್ನ ಮುಸುಡಿಗೆ ಗುದ್ದುತ್ತೇನೆ ಎಂದು ಸಿಟ್ಟಿನಿಂದ ಹೇಳಿದರು. ನಾನು ಕೂಡಲೇ ಸಾರಿ ಹೇಳಿದೆ…’ ಎಂಬುದಾಗಿ ಪಾರ್ಥಿವ್‌ ನಗುತ್ತ ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next