Advertisement

ಕುಡಿಯಲು ಹಣ ಕೊಡದಿದ್ದಕ್ಕೆ ಪತ್ನಿಯನ್ನೇ ಕೊಂದ

06:35 AM Mar 18, 2019 | Team Udayavani |

ಬೆಂಗಳೂರು: ಕುಡಿಯಲು ಹಣ ಕೊಡದ ಪತ್ನಿಯನ್ನು ಬಿಎಂಟಿಸಿ ನಿರ್ವಾಹಕನೊಬ್ಬ ಲೋಹದ ಪ್ರತಿಮೆಯಿಂದ ಹತ್ಯೆಗೈದಿರುವ ಘಟನೆ ಅನ್ನಪೂರ್ಣೇಶ್ವರಿನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

Advertisement

ನಾಗರಬಾವಿ ನಿವಾಸಿ ಜವರೇಗೌಡ (59) ಬಂಧಿತ. ಆರೋಪಿ ಮಾ.14ರಂದು ಪತ್ನಿ ಮಂಜುಳಾ(49) ಅವರನ್ನು ಮದ್ಯದ ಅಮಲಿನಲ್ಲಿ ಮನೆಯಲ್ಲಿದ್ದ ಲೋಹದ ಪ್ರತಿಮೆಯಿಂದ ಹಲ್ಲೆ ನಡೆಸಿ ಕೊಂದಿದ್ದರು ಎಂದು ಪೊಲೀಸರು ಹೇಳಿದರು.

ಹಾಸನ ಮೂಲದ ಜವರೇಗೌಡ ಸುಮಾರು 30 ವರ್ಷಗಳ ಹಿಂದೆ ಮಂಜುಳಾ ಅವರನ್ನು ವಿವಾಹವಾಗಿದ್ದು, ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಮೊದಲನೇ ಮಗ ಚೇತನ್‌ ವಿದೇಶದಲ್ಲಿ ನೆಲೆಸಿದ್ದಾರೆ. ಎರಡನೇ ಪುತ್ರ ಚಂದನ್‌ ನಗರದಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿದ್ದು, ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ.

ಇಪ್ಪತ್ತು ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದಿದ್ದ ಜವರೇಗೌಡ, ಕಳೆದ 19 ವರ್ಷಗಳಿಂದ ಬಿಎಂಟಿಸಿಯಲ್ಲಿ ಬಸ್‌ ನಿರ್ವಾಹಕರಾಗಿದ್ದರು. ಈ ನಡುವೆ ಕುಡಿತದ ಚಟ ಅಂಟಿಸಿಕೊಂಡಿದ್ದ ಅವರು, ಫೆ.18ರಂದು ಕುಡಿದು ಮನೆಯಲ್ಲೇ ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು.

ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದರು. ಹೀಗಾಗಿ ಒಂದು ತಿಂಗಳಿಂದ ಕೆಲಸಕ್ಕೆ ಹೋಗದೇ ಮನೆಯಲ್ಲೇ ಇದ್ದರು ಈ ಸಮಯದಲ್ಲಿ ಮದ್ಯದ ವಿಷಯವಾಗಿ ಪತಿ-ಪತಿ ನಡುವೆ ಜಗಳ ನಡೆದು ಕೃತ್ಯ ನಡೆದಿದೆ ಎಂದು ಪೊಲೀಸರು ಹೇಳಿದರು.

Advertisement

ಲೋಹದ ಪ್ರತಿಮೆಯಿಂದ ಹೊಡೆದು ಕೊಲೆ: ಮಾ.14ರಂದು ಸಂಜೆ ಆರೋಪಿ ಜವರೇಗೌಡ, ಮದ್ಯ ಸೇವಿಸಲು ಹಣ ನೀಡುವಂತೆ ಪತ್ನಿ ಮಂಜುಳಾ ಜತೆ ಜಗಳವಾಡಿದ್ದಾನೆ. ಆದರೆ, ಪತ್ನಿ ಮಂಜುಳಾ, ಕುಡಿದು ಹಾಳಾಗಬೇಡಿ ಎಂದು ಬುದ್ದಿ ಹೇಳಿ ಹಣ ಕೊಡಲು ನಿರಾಕರಿಸಿದ್ದರು.

ಇದರಿಂದ ಆಕ್ರೋಶಗೊಂಡ ಆರೋಪಿ, ಪತ್ನಿಯೊಂದಿಗೆ ಜಗಳ ಮಾಡಿ, ಮನೆಯಲ್ಲಿದ್ದ ಲೋಹದ ಬುದ್ಧನ ಪ್ರತಿಮೆಯಿಂದ ಮಂಜುಳಾ ತಲೆಗೆ ಬಲವಾಗಿ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದ ಮಂಜುಳಾ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದಂಪತಿಯ ಚೀರಾಟ ಕೇಳಿದ ಸ್ಥಳೀಯರು ಜವರೇಗೌಡ ಮನೆಗೆ ಬಂದು ನೋಡಿದಾಗ ಕೃತ್ಯ ಬೆಳಕಿಗೆ ಬಂದಿದೆ.

ಸ್ಥಳೀಯರೊಬ್ಬರು ಚಂದನ್‌ಗೆ ಕರೆ ಮಾಡಿದ್ದಾರೆ. ಮಗ ಮನೆಗೆ ಬಂದಾಗ ತಾಯಿ ಮಂಜುಳಾ ರಕ್ತದ ಮಡುವಿನಲ್ಲಿದ್ದರು. ಈ ಸಂಬಂಧ ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿ ತಂದೆ ಜವರೇಗೌಡ ವಿರುದ್ಧ ದೂರು ನೀಡಿದ್ದರು. ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next