Advertisement
ನಾನು ಮದುವೆಯಾಗಿ ಒಂದೂರಿನಿಂದ ಬಹಳ ದೂರದ ಮತ್ತೂಂದು ಊರಿಗೆ ಹೋಗುವ ಸಂದರ್ಭ ಬರಲಿಲ್ಲ. ಬೊಳುವಾರು ಬೈಲು ಎಂಬ ಪಕ್ಕದ ಊರಿನಲ್ಲೇ ನನ್ನ ತವರು. ಈಗಂತೂ ತವರುಮನೆ ಪಕ್ಕವೇ ನಾವು ಮನೆ ಕಟ್ಟಿಕೊಂಡಿರುವುದರಿಂದ ತವರಿನ ಸಂಬಂಧಿಕರೂ, ಗಂಡನ ಕಡೆಯ ಸಂಬಂಧಿಕರೂ ಇಲ್ಲೇ ಆಸುಪಾಸಿನಲ್ಲೇ ನೆಮ್ಮದಿಯಿಂದ ಇದ್ದೇವೆ. ಇವರು ಬಿಎಸ್‌ಎನ್‌ಎಲ್‌ನಲ್ಲಿ ಅಂದರೆ ಆಗಿನ ಟೆಲಿಫೋನ್ ವಿಭಾಗದಲ್ಲಿ ಕೆಲಸದಲ್ಲಿ ಇದ್ದುದರಿಂದ ವರ್ಗಾವಣೆ ಸಹಜವಾಗಿತ್ತು. ಹಾಗಾಗಿ, ಮೂಡುಬಿದಿರೆ, ವಿಟ್ಲ, ಬಪ್ಪಳಿಗೆ ಅಂತೆಲ್ಲ ಏಳು ಮನೆಗಳನ್ನು ಬದಲಾಯಿಸಬೇಕಾಯಿತು. ಬಾಡಿಗೆಮನೆಯ ಕಷ್ಟಸುಖವನ್ನು ಯಥೇತ್ಛವಾಗಿ ಅನುಭವಿಸಿದ್ದೇನೆ. ಯಾಕೆಂದರೆ, ಇವರೋ ವೃತ್ತಿಯ ಹೊರತಾಗಿ ಸಮಯವನ್ನೆಲ್ಲ ರಂಗಭೂಮಿ ಕ್ಷೇತ್ರಕ್ಕೇ ಮೀಸಲಿಟ್ಟವರು. ಮನೆ ಕಟ್ಟಿಕೊಳ್ಳಬೇಕೆಂಬ ಮಹತ್ವಾಕಾಂಕ್ಷೆಯೇನೂ ಇದ್ದವರಲ್ಲ. “ಫಕೀರರಂತೆ ಸುತ್ತುತ್ತಾ ಇರೋಣ’ ಎಂಬ ಮನೋಭಾವನೆಯಲ್ಲಿಯೇ ಇದ್ದರು. ನನಗೂ ಮೊದ ಮೊದಲು ಮನೆಕಟ್ಟಿಕೊಳ್ಳುವ ಬಗ್ಗೆ ಯೋಚನೆಯೇನೂ ತಲೆಗೆ ಹೋಗಲಿಲ್ಲ. ಆದರೆ, ಮಗ ಕಬೀರ ಮಾನವ ಮತ್ತು ಮಗಳು ಸಹಮತ ದೊಡ್ಡವರಾಗುತ್ತಲೇ ಹೀಗೆ ತಿರುಗಾಡುತ್ತ ಜೀವನ ಮಾಡುವುದು ಸರಿಯಲ್ಲ ಎಂದೆನಿಸಿತು. ಹಾಗಾಗಿ, ನಾನು ಮನೆ ಕಟ್ಟಬೇಕು ಎಂದು ದುಂಬಾಲು ಬಿದ್ದೆ. ತವರುಮನೆ ಕಡೆಯಿಂದ ಬಂದ ನಿವೇಶನದಲ್ಲಿ ಮನೆಕಟ್ಟಲು ಶುರು ಮಾಡಿದೆವು.Related Articles
Advertisement
ನಾನು ಆ ಕಾಲದಲ್ಲಿ ಶಾಲೆಗೆ ಹೋಗಿದ್ದರಿಂದ ಇಂದು ಪುಸ್ತಕಗಳನ್ನು ಓದುವುದು, ಪತ್ರಿಕೆಗಳನ್ನು ಓದುವುದು ಸಾಧ್ಯವಾಗಿದೆ. ಅಡುಗೆ ಮತ್ತು ಈ ಗಿಡಗಳ ಪ್ರೀತಿಯ ಹೊರತಾಗಿ ತೀವ್ರವಾದ ಗುಂಗುಹಿಡಿಸುವ ಬೇರೆ ಹವ್ಯಾಸವೇನೂ ನನಗಿಲ್ಲ. ಆದರೆ, ಅಡುಗೆ ಕೆಲಸವನ್ನು ಇಷ್ಟಪಟ್ಟು ಮಾಡುತ್ತೇನೆ. ನಾನು ಮಾಡುವ ಚಹಾ ಇವರಿಗೆ ತುಂಬ ಇಷ್ಟ ಅಂತ ಆಗಾಗ ಹೇಳುತ್ತಾರೆ. ಆದರೆ ಜಪ್ಪಯ್ಯ ಅಂದರೂ ಇವರು ಅಡುಗೆ ಕೆಲಸ ಕಲಿಯುವುದೇ ಇಲ್ಲ. ಈ ಬಗ್ಗೆ ನಾನೂ ಮಗಳೂ ಸೇರಿ ಇವರೊಡನೆ ಭಾರೀ ವಾಗ್ವಾದ ಮಾಡಿದ್ದುಂಟು. ನಮ್ಮಿಬ್ಬರ ಹೋರಾಟದಿಂದಾಗಿ, ಈಗ ನಿವೃತ್ತಿಯ ಬಳಿಕ ಇವರು ಚಹಾ ಮಾಡುವುದನ್ನು ಕಲಿತುಕೊಂಡಿದ್ದಾರೆ. ಬಹುಶಃ ನಾನು ಮಾಡುವ ಎಲ್ಲ ಅಡುಗೆ ಅವರಿಗೆ ಇಷ್ಟ ಎಂದುಕೊಂಡಿದ್ದೇನೆ. ಯಾಕೆಂದರೆ, ಅವರು ಅಡುಗೆಗೆ ಯಾವುದೇ ಕಮೆಂಟ್ ಹೇಳುವುದಿಲ್ಲ. ಬಿರಿಯಾನಿ, ಕೋಳಿಸಾರು, ಮೀನಿನ ಖಾದ್ಯ ಏನೇ ಮಾಡಿದರೂ ನಾನು ಮಾತ್ರ ಕುಚ್ಚಲಕ್ಕಿ ಪ್ರಿಯೆ. ಒಂದಿಷ್ಟು ಕುಚ್ಚಲಕ್ಕಿ ಮತ್ತು ತುಸು ಪದಾರ್ಥವಿದ್ದರೆ, ನನಗೆ ಮೃಷ್ಟಾನ್ನ ಭೋಜನವಿದ್ದಂತೆ. ಈ ಬಗ್ಗೆ ಮಕ್ಕಳೂ, ಅವರೂ ನನಗೆ ದಬಾಯಿಸುತ್ತಾರೆ. “ಅಪರೂಪಕ್ಕಾದರೂ ಭರ್ಜರಿಯಾಗಿ ಬಿರಿಯಾನಿಯನ್ನು ತಿನ್ನು ಮಾರಾಯ್ತಿ’ ಎಂದು ಹೇಳುತ್ತಾರೆ. ಆದರೆ, ಕುಚ್ಚಲಕ್ಕಿ ಕೊಡುವ ರುಚಿ, ಮತಾöವ ಬಿರಿಯಾನಿಯಲ್ಲಿದ್ದೀತು ಹೇಳಿ.
ಇವರ ನಾಟಕದ ಗೀಳಿನ ಪ್ರಭಾವದಿಂದ ನಾನೂ ಕೆಲವು ನಾಟಕ ನೋಡುವಂತಾಗಿದೆ. ಕೆಲವು ನಾಟಕಗಳಂತೂ ಬಹಳ ಇಷ್ಟವಾಗಿವೆ. ಅದರಲ್ಲಿಯೂ ಇವರು ನಿರ್ದೇಶಿಸಿದ ತಮಿಳು ಮೂಲದ ನಾಟಕ ಮಾಯಾ ಕುದುರೆ ನನಗೆ ತುಂಬ ಇಷ್ಟವಾಗಿತ್ತು. ಅದೊಂದು ಫ್ಯಾಂಟಸಿ ಕತೆ. ಸ್ವಲ್ಪ ತಮಾಷೆಯಾಗಿಯೇ ಸಾಗಿತು. ಅದರಲ್ಲಿ ನನ್ನ ಮಗಳು ಸಹಮತ ಕೂಡ ನಟಿಸಿದ್ದಳು. ಇವರು ನಿರ್ದೇಶಿಸಿದ ನೆರಳಿನ ಕೋಟೆ, ಮಳೆ ಹಕ್ಕಿ ನಾಟಕಗಳನ್ನು ತುಂಬ ಇಷ್ಟಪಟ್ಟಿದ್ದೇನೆ. ಮಕ್ಕಳಿಬ್ಬರಿಗೂ ಕಲಾಕ್ಷೇತ್ರದಲ್ಲಿಯೇ ಆಸಕ್ತಿ ಇದೆ. ಕಬೀರ್ ಈಗ ಬೆಂಗಳೂರಿನಲ್ಲಿ ಸಿನಿಮಾ ಕ್ಷೇತ್ರಕ್ಕೆ ಕೆಲಸ ಮಾಡುತ್ತಾನೆ. ಸೊಸೆ ಶಬಾನಾ, ಮೊಮ್ಮಗ ಇಲಾನ್ ಬಂದಾಗಲೇ ನಮ್ಮ ಮನೆಯಲ್ಲಿ ಹಬ್ಬ.
ಉಳಿದಂತೆ ನಮ್ಮ ಹಬ್ಬಗಳನ್ನು ನೆಂಟರಿಷ್ಟರ ಜೊತೆ ಆಚರಿಸುವುದು ಯಾವಾಗಲೂ ಖುಷಿಯೇ. ಸ್ವಾತಂತ್ರ್ಯ ದಿನ ಮತ್ತು ಗಣರಾಜ್ಯೋತ್ಸವ ದಿನವನ್ನೂ ನಾನು ಸಂಭ್ರಮಿಸಿ ಆಚರಿಸುತ್ತೇನೆ.
ಒತ್ತಡ, ಹೇರಿಕೆ ಇಲ್ಲವೇ ಇಲ್ಲನಮ್ಮ ಆಚಾರ-ವಿಚಾರಗಳನ್ನು ಕಲಿಸಿದ ಅಪ್ಪ, ಹೀಗೆಯೇ ಮಾಡು ಎಂಬುದಾಗಿ ಯಾವತ್ತೂ ಕಟ್ಟಾಜ್ಞೆ ಮಾಡಿದವರಲ್ಲ. ಅದೃಷ್ಟವಶಾತ್, ಮದುವೆಯಾದ ಮೇಲೆಯೂ ಇವರು ನನಗೆ, ಹೀಗೆಯೇ ಇರತಕ್ಕದ್ದು ಎಂದು ಕಟ್ಟುಪಾಡುಗಳನ್ನು ವಿಧಿಸಿದವರಲ್ಲ. ನಮ್ಮ ಹೃದಯಕ್ಕೆ ಸರಿ ತೋಚಿದಂತೆ, ಇತರರಿಗೆ ತೊಂದರೆಯಾಗದಂತೆ ಜೀವನ ಮಾಡುವುದು ಅವರಿಗೂ ಇಷ್ಟ , ನನಗೂ ಇಷ್ಟ. ಮಕ್ಕಳನ್ನೂ ಅದೇ ಮಾದರಿಯಲ್ಲಿ ಬೆಳೆಸಿದ್ದರಿಂದ ಅವರೂ ತಮ್ಮದೇ ಕ್ಷೇತ್ರಗಳಲ್ಲಿ ಓದು ಅಧ್ಯಯನ ಎಂದು ಸಾಗಿದ್ದಾರೆ.
– ಅಪ್ಸಾ ಬೊಳುವಾರು (ನಿರೂಪಣೆ : ಟೀಮ್ ಮಹಿಳಾಸಂಪದ)