ಹೊಸದಿಲ್ಲಿ: ಇದು ಮೊದಲ ಸಲ “ಫ್ಯಾಬ್ ಫೈವ್’ ಖ್ಯಾತಿಯ ಭಾರತ ತಂಡಕ್ಕೆ ಬೌಲಿಂಗ್ ಮಾಡಿದ ವಿಂಡೀಸ್ ವೇಗಿಯೊಬ್ಬನ ಅನುಭವ ಕಥನ. ತನ್ನ ಓವರಿನಲ್ಲಿ ಹ್ಯಾಟ್ರಿಕ್ ಬೌಂಡರಿ ಬಾರಿಸಿದ ಭಾರತದ ಬ್ಯಾಟ್ಸ್‌ಮನ್ ಓರ್ವ ಪಂದ್ಯದ ಬಳಿಕ ಧೈರ್ಯ ತುಂಬಿದ ವಿಶಿಷ್ಟ ವಿದ್ಯಮಾನ. ಅಂದಹಾಗೆ, ವಿಂಡೀಸಿನ ಆ ವೇಗಿ ಟಿನೊ ಬೆಸ್ಟ್. ಬ್ಯಾಟ್ಸ್‌ಮನ್ ಬೇರೆ ಯಾರೂ ಅಲ್ಲ, “ಗೋಡೆ’ ಖ್ಯಾತಿಯ ರಾಹುಲ್ ದ್ರಾವಿಡ್!
“ಅದು ಶ್ರೀಲಂಕಾದಲ್ಲಿ ನಡೆದ 2005ರ ತ್ರಿಕೋನ ಸರಣಿ. ನಾನು ಮೊದಲ ಸಲ ಬಲಿಷ್ಠ ಬ್ಯಾಟಿಂಗ್ ಸರದಿಗೆ ಬೌಲಿಂಗ್ ಮಾಡಲಿಳಿದಿದ್ದೆ. ಆಗ ದ್ರಾವಿಡ್ ನನಗೆ ಹ್ಯಾಟ್ರಿಕ್ ಬೌಂಡರಿಯ ರುಚಿ ತೋರಿಸಿದರು. ಸಹಜವಾಗಿಯೇ ನಾನು ಧೈರ್ಯ ಕಳೆದುಕೊಂಡೆ. ಆದರೆ ಆ ಪಂದ್ಯದ ಬಳಿಕ ನಡೆದ ಘಟನೆಯನ್ನು ನಾನು ಮರೆಯುವಂತಿಲ್ಲ…’ ಎಂದು ಟಿನೊ ಬೆಸ್ಟ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
“ಆಗ ದ್ರಾವಿಡ್ ನನ್ನ ಬಳಿ ಬಂದು ಧೈರ್ಯ ತುಂಬುವ ಕೆಲಸ ಮಾಡಿದರು. ಯಂಗ್ ಮ್ಯಾನ್, ನಾನು ನಿಮ್ಮ ಸಾಮರ್ಥ್ಯವನ್ನು ಮೆಚ್ಚುತ್ತೇನೆ. ಇದನ್ನು ನೀವು ಕಳೆದುಕೊಳ್ಳಬಾರದು. ನಿಮ್ಮ ಎಸೆತಗಳಿಗೆ ಬೌಂಡರಿ ಬೀಳಬಹುದು, ಆದರೆ ಇಲ್ಲಿಗೇ ನಿಲ್ಲಬಾರದು… ಎಂದು ದ್ರಾವಿಡ್ ಸಲಹೆ ನೀಡಿದರು. ಇದು ನಿಜವಾದ ಕ್ರೀಡಾಸ್ಫೂರ್ತಿ. ಭಾರತೀಯರ ಈ ಗುಣವನ್ನು ನಾನು ಯಾವತ್ತೂ ಮೆಚ್ಚುತ್ತೇನೆ. ಒಮ್ಮೆ ಯುವರಾಜ್ ಸಿಂಗ್ ನನಗೊಂದು ಬ್ಯಾಟ್ ನೀಡಿದ್ದರು. ನನಗೆ ಭಾರತೀಯ ಕ್ರಿಕೆಟಿಗರ ಮೇಲೆ ಪ್ರೀತಿ ಜಾಸ್ತಿ’ ಎಂದು ಟಿನೊ ಬೆಸ್ಟ್ ಹೇಳಿದರು.
ಭಾರತೀಯರೆಂದರೆ ಇಷ್ಟ
“ಭಾರತೀಯ ಕ್ರಿಕೆಟಿಗರೆಲ್ಲ ಒಳ್ಳೆಯವರು. ತಮಗೆ 1.5 ಬಿಲಿಯನ್ ಜನರ ಬೆಂಬಲವಿದೆ ಎಂಬ ರೀತಿಯಲ್ಲಿ ಅವರು ವರ್ತಿಸುವುದೇ ಇಲ್ಲ. ತುಂಬ ವಿನಮ್ರ ಸ್ವಭಾವದವರು. ಅವರು ಕ್ರೀಡೆಗೆ ಕೊಡುವ ಗೌರವ ದೊಡ್ಡದು. ನನಗಿದು ಬಹಳ ಇಷ್ಟ…’ ಎಂದು ವಿಂಡೀಸ್ ವೇಗಿ ಗುಣಗಾನ ಮಾಡಿದರು.