ಗದಗ: ಜೀವನ ಪೂರ್ತಿ ರಾಜಕೀಯದಲ್ಲೇ ಕಳೆದರೂ ಕೆಲವರಿಗೆ ಸಾಂವಿಧಾನಿಕವಾದ ಮಹೋನ್ನತ ಸ್ಥಾನಗಳು ದಕ್ಕುವುದು ಕಷ್ಟ ಸಾಧ್ಯ. ಆದರೆ, ಜಿಲ್ಲೆಯಲ್ಲಿ 27ನೇ ವಯಸ್ಸಿನ ಯುವಕನಿಗೆ ಜಿಪಂ ಅಧ್ಯಕ್ಷ ಸ್ಥಾನ ಒಲಿದು ಬಂದಿದೆ. ಅರ್ಧ ತೋಳಿನ ಅಂಗಿ, ಸಣ್ಣಗೆ ದಾಟಿ ಬಿಟ್ಟುಕೊಂಡು ಸದಾ ಓಡಾಡುವ ಲಕ್ಕುಂಡಿ ಕ್ಷೇತ್ರದ ಜಿಪಂ ಸದಸ್ಯ ಸಿದ್ದು ಪಾಟೀಲ ಅವರಿಗೆ ಜಿಪಂ ಅಧ್ಯಕ್ಷ ಸ್ಥಾನ ಒಲಿದಿದೆ. ಶನಿವಾರ ನಡೆದ ಜಿಪಂ ಅಧ್ಯಕ್ಷ ಚುನಾವಣೆಯಲ್ಲಿ ಅವರು ಅವಿರೋಧವಾಗಿ ಆಯ್ಕೆಯಾಗಿ ರಾಜ್ಯದ ಗಮನ ಸೆಳೆದಿದ್ದಾರೆ.
ಇತಿಹಾಸ ಸೃಷ್ಟಿಸಿದ ಸಿದ್ದು: ಜಿಪಂ ಮಾಜಿ ಉಪಾಧ್ಯಕ್ಷ, ಕಾಂಗ್ರೆಸ್ ಕಟ್ಟಾಳು ಹೊಳೆಯಪ್ಪಗೌಡ ಕೆ. ಪಾಟೀಲ ಮತ್ತು ರೇಣುಕಾ ದಂಪತಿ ಪುತ್ರರಾಗಿ 25-9-1992ರಲ್ಲಿ ಜನಿಸಿದ ಸಿದ್ದು ಪಾಟೀಲ ಬಿಎ ವಿದ್ಯಾರ್ಹತೆ ಹೊಂದಿದ್ದಾರೆ. ತಮ್ಮ ತಂದೆಯ ಅಕಾಲಿಕ ನಿಧನ ಬಳಿಕ ರಾಜಕೀಯ ರಂಗ ಪ್ರವೇಶಿಸಿದರು. 2012ರಲ್ಲಿ ಮೊದಲ ಬಾರಿ ಎಪಿಎಂಸಿ ಸದಸ್ಯರಾಗಿ ಆಯ್ಕೆಯಾದ ಅವರು, 2013ರಲ್ಲಿ ಎಪಿಎಂಸಿ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಈ ಮೂಲಕ ಅತೀ ಚಿಕ್ಕ ವಯಸ್ಸಿ(20)ನಲ್ಲಿ ಎಪಿಎಂಸಿ ಉಪಾಧ್ಯಕ್ಷರಾದ ಹಿರಿಮೆ ಅವರದಾಗಿತ್ತು.
ಕಾಂಗ್ರೆಸ್ ಯುವ ಘಟಕದಲ್ಲಿ ಸಕ್ರಿಯರಾಗಿದ್ದ ಅವರು ಜಿಪಂ ಚುನಾವಣೆಯಲ್ಲಿ ಲಕ್ಕುಂಡಿ ಕ್ಷೇತ್ರದಿಂದ ಮೊದಲ ಬಾರಿ ಸ್ಪ ರ್ಧಿಸಿ ಜಯಭೇರಿ ಬಾರಿಸಿದರು. ಹಿಂದಿನ ಕಾಂಗ್ರೆಸ್ ಸರಕಾರದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಎಚ್.ಕೆ.ಪಾಟೀಲರ ಶಿಷ್ಯ ಎಂದೇ ಸಾರ್ವಜನಿಕ ವಲಯದಲ್ಲಿ ಮನೆ ಮಾತಾಗಿದ್ದರು. ಅದರೊಂದಿಗೆ ಕ್ಷೇತ್ರದಲ್ಲೂ ಪಕ್ಷಾತೀತವಾಗಿ ಜನರಿಗೆ ಸೇವೆ ಒದಗಿಸಿದ್ದಾರೆ. ಲಕ್ಕುಂಡಿ ಸರಕಾರಿ ಶಾಲೆಗಳಿಗೆ ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್, ಗ್ರಾಮೀಣ ಭಾಗದಲ್ಲಿ ಸಿಸಿ ರಸ್ತೆ, ಚರಂಡಿ, ಡಿಬಿಒಟಿ ಕುಡಿಯುವ ನೀರಿನ ಸೌಕರ್ಯ ಕಲ್ಪಿಸುವ ಮೂಲಕ ಕ್ಷೇತ್ರದಲ್ಲೂ ಹಿಡಿತ ಹೊಂದಿದ್ದರೆ. ಅಲ್ಲದೇ, ಇತ್ತೀಚೆಗೆ ನರಗುಂದ ತಾಲೂಕಿನಲ್ಲಿ ಉಂಟಾಗಿದ್ದ ಪ್ರವಾಹ ಸಂದರ್ಭದಲ್ಲಿ ನೆರೆ ಸಂತ್ರಸ್ತರ ರಕ್ಷಣೆ ಮಾಡಿದ್ದಾರೆ.
ಎನ್‌ಡಿಆರ್‌ಎಫ್ ತಂಡದೊಂದಿಗೆ ಕೊಣ್ಣೂರು ಜಿಪಂ ಕ್ಷೇತ್ರದ ಸದಸ್ಯ ರಾಜೂಗೌಡ ಕೆಂಚನಗೌಡ್ರ ಅವರೊಂದಿಗೆ ಕೈಜೋಡಿಸಿದ್ದ ಅವರು ಬೋಟ್ ಮೂಲಕ ನೆರೆ ಸಂತ್ರಸ್ತರ ರಕ್ಷಣೆ ಅ ಧಿಕಾರಿಗಳೊಂದಿಗೆ ಕೈ ಜೋಡಿಸಿದ್ದಾರೆ. ಅವರಲ್ಲಿನ ಪಕ್ಷ ನಿಷ್ಠೆಯನ್ನು ಮೆಚ್ಚಿರುವ ಹೈಕಮಾಂಡ್ ಈ ಬಾರಿ, ಜಿಪಂ ಅಧ್ಯಕ್ಷ ಸ್ಥಾನ ಕರುಣಿಸಿದೆ ಎಂಬ ಮಾತು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿವೆ.
-ವೀರೇಂದ್ರ ನಾಗಲದಿನ್ನಿ