Advertisement

ಬಾಡಿಗೆ ವಿಚಾರಕ್ಕೆ ಜಗಳ ತೆಗೆದು ಪ್ರಯಾಣಿಕನನ್ನು ಹೊರ ದಬ್ಬಿದ 

12:41 PM Jun 17, 2017 | Team Udayavani |

ಬೆಂಗಳೂರು: ಡ್ರಾಪ್‌ ನೀಡುವುದಾಗಿ ದಂಪತಿಯನ್ನು ಹತ್ತಿಸಿಕೊಂಡ ಕ್ಯಾಬ್‌ ಚಾಲಕನೊಬ್ಬ ಬಾಡಿಗೆ ಹಣದ ವಿಚಾರಕ್ಕೆ ಅವರೊಂದಿಗೆ ಜಗಳ ತೆಗೆದು, ಕೊನೆಗೆ ಹೊರದಬ್ಬಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 

Advertisement

ಜೂ.6ರಂದು ಬೆಳಗ್ಗೆ 5 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಹೆಣ್ಣೂರು ಠಾಣೆಯ ಗೃಹ ರಕ್ಷಕ ದಳದ ಸಿಬ್ಬಂದಿ ಮಧುಕರನ್‌ ವಿರುದ್ಧ ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಮಧುಕರ್‌ ಬೆಳಗ್ಗೆಯಿಂದ ಸಂಜೆ ವರೆಗೆ ಹೆಣ್ಣೂರು ಠಾಣೆಯಲ್ಲಿ ಗೃಹರಕ್ಷಕ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ.

ರಾತ್ರಿಯಿಂದ ಮುಂಜಾನೆ ವರೆಗೆ ಕ್ಯಾಬ್‌ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಘಟನೆ ವೇಳೆ ಆರೋಪಿ ಮದ್ಯ ಸೇವಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುವ ಆಂಧ್ರಪ್ರದೇಶ ಮೂಲದ ಕೃಷ್ಣ ಎಂಬುವವರಿಗೆ ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ಏನು?: ಬಾಣಸವಾಡಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೃಷ್ಣ ಮತ್ತು ಪತ್ನಿ ಅಂಜನಮ್ಮ ಜೂ.6ರಂದು ಬೆಳಗ್ಗೆ 5 ಗಂಟೆ ಸುಮಾರಿಗೆ ಆಂಧ್ರಪ್ರದೇಶದ ಕಡಪ ಜಿಲ್ಲೆಗೆ ತೆರಳಲು ಬಾಣಸವಾಡಿಯ ಬಸ್‌ ನಿಲ್ದಾಣದ ಬಳಿ ನಿಂತಿದ್ದರು. ಈ ವೇಳೆ ಕ್ಯಾಬ್‌ನಲ್ಲಿ ಬಂದ ಮಧುಕರನ್‌, ಕೃಷ್ಣ ಅವರಿಗೆ ಡ್ರಾಪ್‌ ಬೇಕಾ ಎಂದಿದ್ದಾನೆ. ಟಿನ್‌ ಫ್ಯಾಕ್ಟರಿಗೆ ಹೋಗಬೇಕಿದ್ದು, 30 ರೂ.ಕೊಡುತ್ತೇನೆಂದು ಕೃಷ್ಣ ಹೇಳಿದ್ದಾರೆ.

ಇದನ್ನು ನಿರಾಕರಿಸಿದ ಆರೋಪಿ 200 ರೂ. ಕೊಡುವಂತೆ ಬೇಡಿಕೆ ಇಟ್ಟಿದ್ದಾನೆ. ಇದೇ ವಿಚಾರವಾಗಿ ಇಬ್ಬರ ನಡುವೆ ಚೌಕಾಸಿ ನಡೆದಿದೆ. ಕೊನೆಗೆ ಕೊಟ್ಟಷ್ಟು ಕೊಡಿ ಎಂದು ಆರೋಪಿಯು ದಂಪತಿಯನ್ನು ಕಾರಿಗೆ ಹತ್ತಿಸಿಕೊಂಡಿದ್ದಾನೆ. ಮದ್ಯದ ಅಮಲಿನಲ್ಲಿದ್ದ ಮಧುಕರನ್‌, ಮತ್ತೆ 200 ರೂ. ಕೊಡುವಂತೆ ಒತ್ತಾಯಿಸಿದ್ದಾನೆ. ಆಗ ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಕೃಷ್ಣ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವಿಚಾರಕ್ಕೆ ಇಬ್ಬರ ನಡೆವೆ ಜಗಳವಾಗಿದೆ.

Advertisement

ಇದರಿಂದ ಕೋಪಗೊಂಡ ಆರೋಪಿ ಕಾರು ನಿಲ್ಲಿಸಿ ಕೃಷ್ಣನನ್ನು ಹೊರ ತಳ್ಳಿದ್ದಾನೆ. ಇದನ್ನು ಕಂಡ ಪತ್ನಿ ಅಂಜನಮ್ಮ ಜೋರಾಗಿ ಕೂಗಿಕೊಂಡಿದ್ದು, ಹಿಂಬದಿಯ ಕಾರಿನ ಬಾಗಿಲು ತೆರೆಯಲು ಯತ್ನಿಸಿದ್ದಾರೆ. ಆದರೆ, ಸಾಧ್ಯವಾಗಿಲ್ಲ. ಗಾಬರಿಗೊಂಡ ಆರೋಪಿ ಮಧುಕರನ್‌, ಸುಮಾರು 500 ಮೀಟರ್‌ ದೂರ ಕಾರನ್ನು ಓಡಿಸಿದ್ದಾನೆ.

ಆಯಾ ತಪ್ಪಿ ಮಿಲಿಟರಿ ವಸತಿ ನಿಲಯದ ಗೇಟ್‌ಗೆ ಡಿಕ್ಕಿಯೊಡೆದಿದ್ದಾನೆ. ಇತ್ತ ಮಹಿಳೆ ಜೋರಾಗಿ ಕೂಗಿಕೊಳ್ಳುತ್ತಿದ್ದರಿಂದ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದಾರೆ. ಸಾರ್ವಜನಿಕರು ಹೆಚ್ಚಾಗುತ್ತಿದ್ದಂತೆ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ವೇಳೆ ಕೃಷ್ಣ ಅವರ ತಲೆಗೆ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೂರು ಪಡೆಯಲು ಹಿಂದೇಟು: ಘಟನೆ ಮಹದೇವಪುರದ ಟೀನ್‌ಫ್ಯಾಕ್ಟರಿ ಬಳಿ ನಡೆದಿದ್ದರಿಂದ ಅಂಜನಮ್ಮ ಮೊದಲಿಗೆ ಮಹದೇವಪುರ ಠಾಣೆಗೆ ದೂರು ನೀಡಲು ಹೋಗಿದ್ದಾರೆ. ಆದರೆ, ಠಾಣೆಯ ಸಿಬ್ಬಂದಿ, ಕಾರು ಹತ್ತಿದ್ದು ಬಾಸಣವಾಡಿ ಠಾಣಾ ವ್ಯಾಪ್ತಿಯಲ್ಲಿ ಹಾಗಾಗಿ ಅಲ್ಲಿಯೇ ದೂರು ನೀಡುವಂತೆ ಸೂಚಿಸಿದ್ದಾರೆ.

ಆದರೆ, ಘಟನೆ ನಿಮ್ಮ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದರು ಸಿಬ್ಬಂದಿ ಸ್ಪಂದನೆ ನೀಡಿಲ್ಲ. ಆದ್ದರಿಂದ ಬಾಣಸವಾಡಿ ಠಾಣೆಗೆ ದೂರು ನೀಡಿದ್ದಾರೆ. ಕೃಷ್ಣ ಮತ್ತು ಪತ್ನಿ ಅಂಜನಮ್ಮ ಅವರಿಗೆ ಕನ್ನಡ ಮಾತನಾಡಲು, ಬರೆಯಲು ಬರುವುದಿಲ್ಲ. ಹಾಗಾಗಿ ಘಟನೆಯ ವಿವರವನ್ನು ತೆಲುಗಿನಲ್ಲಿ ಬರೆದುಕೊಟ್ಟಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next