ಬೆಳಗಾವಿ: ವಯಸ್ಸು ಐದಾಗಿದ್ದರೂ ಅಸ್ವಾಭಾವಿಕವಾಗಿ ಹಾರ್ಮೋನ್ ಪ್ರಮಾಣ ಏರುತ್ತ ತೂಕ ಹೆಚ್ಚುವ ಸಮಸ್ಯೆ ಹೊಂದಿದ್ದ ಬಾಲಕ ಸಂಕೇತ ಮೋರಕರ ಚಿಕಿತ್ಸೆ ಫಲಿಸದೇ ಶನಿವಾರ ಕೊನೆಯುಸಿರೆಳೆದಿದ್ದಾನೆ.
ಮೊದಲಿನಂತೆ ಆಹಾರ ಸೇವನೆಯಿದ್ದರೂ ಆಡ್ರೆನಾಲಿನ್ ಗ್ರಂಥಿಯಲ್ಲಿ ಕಾರ್ಟಿಸೋಲ್ ಪ್ರಮಾಣ ಜಾಸ್ತಿಯಾಗಿ ಈತನ ತೂಕ ದಿನಕ್ಕೆ 300 ಗ್ರಾಂ ಹೆಚ್ಚುತ್ತಿತ್ತು.
ತಾಲೂಕಿನ ಸುಳೇಭಾವಿ ಗ್ರಾಮದ ಸಂಕೇತ ಕಾಶೀನಾಥ ಮೋರಕರ ಎಂಬ ಬಾಲಕನಿಗೆ ಈ ಹಿನ್ನೆಲೆಯಲ್ಲಿ ಶಸ್ತ್ರ ಚಿಕಿತ್ಸೆಯ ಅಗತ್ಯವೂ ಇತ್ತು. ಇನ್ನೆನೂ ಕೆಲವು ದಿನಗಳಲ್ಲಿ ಶಸ್ತ್ರ ಚಿಕಿತ್ಸೆಗೆ ತಯಾರಿ ಮಾಡಿಕೊಂಡಿದ್ದ ಪಾಲಕರಿಗೆ ಮಗನ ಸಾವು ಆಘಾತ ತಂದಿಟ್ಟಿದೆ. ಗುರುವಾರ ರಾತ್ರಿ ಏಕಾಏಕಿ ಬಾಲಕ ಸಂಕೇತನಿಗೆ ಫಿಟ್ಸ್ ಬಂದಿದೆ. ಕೂಡಲೇ ಭಯಭೀತರಾದ ಪಾಲಕರು ಸಂಕೇತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೆದುಳಿಗೆ ರಕ್ತ ಸಂಚಾರ ಆಗುವ ನರದಲ್ಲಿ ಸಮಸ್ಯೆ ಕಂಡು ಬಂದಿದ್ದರಿಂದ ಹೃದಯ ಬಡಿತವೂ ಇಳಿಕೆಯಾಗಿದೆ. ವೈದ್ಯರು ಎಷ್ಟೇ ಚಿಕಿತ್ಸೆ ನೀಡಿದರೂ ಫಲಿಸದೇ ಬಾಲಕ ಸಂಕೇತ ಸಾವನ್ನಪ್ಪಿದ್ದಾನೆ.
ಬೆಳಗಾವಿಯ ಖಾಸಗಿ ವೈದ್ಯರ ಬಳಿ ಬಾಲಕ ಸಂಕೇತನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಬಾಲಕನ ಆರೋಗ್ಯ ಸಮಸ್ಯೆ ಬಗ್ಗೆ ಉದಯವಾಣಿಯಲ್ಲಿ ಆಗಸ್ಟ್ 2ರಂದು, ಅಡ್ರೆನಾಲಿನ್ ಕಾಟ: ತೂಕ ನಾಗಾಲೋಟ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟವಾಗಿತ್ತು. ತ್ವರಿತವಾಗಿ ಬಾಲಕನಿಗೆ ಶಸ್ತ್ರ ಚಿಕಿತ್ಸೆ ಮಾಡಬೇಕಿರುವ ಬಗ್ಗೆ ವರದಿ ಎಚ್ಚರಿಸಿತ್ತು. ಆದರೆ ಇನ್ನೇನು ಕೆಲವೇ ದಿನಗಳಲ್ಲಿ ಶಸ್ತ್ರಚಿಕಿತ್ಸೆಗೆ ಸಿದ್ಧ ಮಾಡಿಕೊಂಡಿದ್ದರೂ ವಿಧಿ ಕೈ ಹಿಡಿಯಲಿಲ್ಲ. ಮಗುವನ್ನು ಕಳೆದುಕೊಂಡಿರುವ ತಂದೆ-ತಾಯಿ ದುಃಖ ಶಮನವಾಗದಂಥದು. ಶನಿವಾರ ಬೆಳಗ್ಗೆ ವಿಧಿ-ವಿಧಾನದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ಹಾರ್ಮೋನ್‌ಗಳ ಪ್ರಮಾಣ ದಿನ ದಿನಕ್ಕೂ ಹೆಚ್ಚಾಗುತ್ತ ಹೋದಂತೆ ಮಗುವಿನ ದೇಹದ ಪ್ರತಿ ಅಂಗದ ಮೇಲೂ ಪರಿಣಾಮ ಬೀರುತ್ತದೆ. ರಕ್ತ ನಾಳಗಳು ಬ್ಲಾಕ್ ಆಗುವ ಸಾಧ್ಯತೆಯೂ ಹೆಚ್ಚು. ಹೃದಯ, ಮೆದುಳಿನ ರಕ್ತನಾಳಗಳು ಬ್ಲಾಕ್ ಆಗುತ್ತವೆ. ಇದೇ ಕಾರಣದಿಂದಲೇ ಬಾಲಕ ಸಂಕೇತನ ವಯಸ್ಸು ಕಡಿಮೆ ಇದ್ದಾಗ ಹಾರ್ಮೋನ್ ಗ್ರಂಥಿಗಳ ಪ್ರಮಾಣ ಹೆಚ್ಚಾಗಿ ಜೀವಕ್ಕೆ ಎರವಾಗಿದೆ.
•ಡಾ| ವಿಕ್ರಾಂತ ಘಟನಟ್ಟಿ, ವೈದ್ಯರು