Advertisement

ತಪ್ಪು ಮಾಡದಿದ್ದರೂ ಆರೋಪ ಮಾಡಿದರು

01:23 PM Dec 23, 2018 | |

ಬೆಂಗಳೂರು: ಯಾವುದೇ ತಪ್ಪು ಮಾಡದಿದ್ದರೂ ನನ್ನ ಮೇಲೆ ಆರೋಪ ಕೇಳಿ ಬಂದವು. ಹೀಗಾಗಿ ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ಲೋಕಾಯುಕ್ತ ಹುದ್ದೆಗೆ ರಾಜೀನಾಮೆ ನೀಡಿದೆ ಎಂದು ನಿವೃತ್ತ ನ್ಯಾಯಮೂರ್ತಿ ಶಿವರಾಜ್‌ ವಿ. ಪಾಟೀಲ್‌ ಹೇಳಿದರು.

Advertisement

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶನಿವಾರ ನಡೆದ “ಸಾಧಕರೊಡನೆ ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆ ಹುದ್ದೆ ನನಗೆ ಅಗತ್ಯವಿರಲಿಲ್ಲ. ರಾಜ್ಯ ಮಟ್ಟದ ಈ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಬೇಕು ಎಂಬ ನಿಯಮಗಳೇನೂ ಇಲ್ಲ. ಆದರೆ ನಾನು ಯಾವುದೇ ಅನ್ಯಾಯ ಎಸಗದಿದ್ದರೂ, ವೃತಾ ಆರೋಪ ಮಾಡಲಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

ತಮ್ಮ ಬಾಲ್ಯದ ದಿನಗಳನ್ನು ನೆನೆದ ನ್ಯಾ. ಶಿವರಾಜ್‌ ಪಾಟೀಲ್‌, ರಾಯಚೂರು ಜಿಲ್ಲೆ, ದೇವರಾಯದುರ್ಗ ತಾಲೂಕಿನ ಅತ್ಯಂತ ಹಿಂದುಳಿದ ಮಲದಕಲ್ಲು ಗ್ರಾಮದಲ್ಲಿ ಹುಟ್ಟಿದ ನಾನು ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ, ಕನ್ನಡ ಮಾಧ್ಯಮದಲ್ಲಿ ಪೂರೈಸಿದೆ. ರಾಯಚೂರಲ್ಲಿ ಹೈಸ್ಕೂಲ್‌ ಮತ್ತು ಕಾನೂನು ಪದವಿಯನ್ನು ಕಲಬುರಗಿಯಲ್ಲಿ ಪಡೆದು, ಅಲ್ಲಿಂದಲೇ ವಕೀಲಿ ವೃತ್ತಿ ಆರಂಭಿಸಿದೆ ಎಂದರು.
 
ವಚನಕಾರ ಬಸವಣ್ಣ ಮತ್ತು ಸ್ವಾಮಿ ವಿವೇಕಾನಂದ ಅವರು ನನ್ನ ಜೀವನದ ಮೇಲೆ ಪ್ರಭಾವ ಬೀರಿದ ವ್ಯಕ್ತಿಗಳಾಗಿದ್ದಾರೆ. 55 ವರ್ಷಗಳ ಸುಖಕರ ದಾಂಪತ್ಯ ಜೀವನ ನಮ್ಮದಾಗಿದ್ದು, ಉತ್ತರ ಕರ್ನಾಟಕದ ಭಾಗದಿಂದ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಯಾಗಿ ಆಯ್ಕೆಯಾದ ಮೊದಲಿಗ ಎಂಬ ಹೆಮ್ಮೆ, ಸಂತಸ ನನಗಿದೆ ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮನು ಬಳಿಗಾರ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next