Advertisement
ತೋಂಟದ ಶ್ರೀಗಳ ದೀಕ್ಷಾ ಗುರು ಶಾಂತವೀರ ಪಟ್ಟಾಧ್ಯಕ್ಷರು. ತೋಂಟದ ಸಿದ್ದಲಿಂಗ ಶ್ರೀಗಳು ಹಾವೇರಿ ಸಿಂದಗಿ ಮಠದಲ್ಲಿಯೇ ಇದ್ದು ಧಾರ್ಮಿಕ ಪಾಠಶಾಲೆಯಲ್ಲಿ ಅಭ್ಯಾಸ ಮಾಡಿದವರು. ಶಾಂತವೀರ ಪಟ್ಟಾಧ್ಯಕ್ಷರ ಮಾರ್ಗದರ್ಶನದಲ್ಲಿ ಸಾಧನೆಗೈದವರಲ್ಲಿ ತೋಂಟದ ಶ್ರೀಗಳು ಪ್ರಮುಖರು. ಗದುಗಿನ ಮಠ ಹಾಗೂ ಹಾವೇರಿ ಸಿಂದಗಿ ಮಠ ಎರಡೂ ನನ್ನೆರಡು ಕಣ್ಣುಗಳಿದ್ದಂತೆ ಎಂದು ಅನೇಕ ಕಡೆಗಳಲ್ಲಿ ಹೇಳುತ್ತಿದ್ದ ಶ್ರೀಗಳು, ಅಕ್ಷರಶಃ ಎರಡೂ ಮಠಗಳ ಚಟುವಟಿಕೆ, ಅಭಿವೃದ್ಧಿಯತ್ತ ಕಣ್ಣಿಟ್ಟು ಕಾಪಾಡಿ ಭಕ್ತರ ಪ್ರೀತಿಗೆ ಪಾತ್ರರಾದವರು.
ಶಾಂತವೀರ ಪಟ್ಟಾಧ್ಯಕ್ಷರು ಅನಾರೋಗ್ಯದಲ್ಲಿದ್ದಾಗ ತೋಂಟದ ಶ್ರೀಗಳು ದಿನ ಬಿಟ್ಟು ದಿನ ಬಂದು ಪೂಜ್ಯರ ಯೋಗಕ್ಷೇಮ ವಿಚಾರಿಸುತ್ತಾ ಅವರ ಸ್ಥಿತಿಗಾಗಿ ಮಮ್ಮಲ ಮರುಗಿ ಕಣ್ಣೀರು ತುಂಬಿಕೊಂಡು ಮಠಕ್ಕೆ ಮರಳುತ್ತಿದ್ದರು. ತೋಂಟದ ಶ್ರೀಗಳು ಸಿಂದಗಿಮಠದ ಜವಾಬ್ದಾರಿ ಹೊತ್ತ ಮೇಲೆ ಸಿಂದಗಿ ಪಾಠಶಾಲೆ, ಆಯುರ್ವೇದ ಕಾಲೇಜ್ ಹಾಗೂ ಮಠದ ಅಭಿವೃದ್ಧಿ ವೇಗ ಹೆಚ್ಚಿಸಿಕೊಂಡಿತು. 10 ಲಕ್ಷ ರೂ.ಗಳಲ್ಲಿ ಶಾಂತವೀರ ಶಿವಾನುಭವ ಮಂಟಪ, 15 ಲಕ್ಷ ರೂ.ಗಳಲ್ಲಿ ತರಗತಿ ಕೊಠಡಿ, 25 ಲಕ್ಷ ರೂ.ಗಳಲ್ಲಿ “ಘೇಗುರು ಕುಮಾರೇಶ್ವರ ಪ್ರಸಾದ ನಿಲಯ’, 140 ವಿದ್ಯಾರ್ಥಿಗಳ ವಾಸ್ತವ್ಯಕ್ಕಾಗಿ 18 ಲಕ್ಷ ರೂ.ಗಳಲ್ಲಿ “ಪ್ರಾಶಂತಧಾಮ’, ಶಿವಬಸವ ನಗರದ ಹೆದ್ದಾರಿಯಲ್ಲಿ 5 ಲಕ್ಷ ರೂ.ಗಳಲ್ಲಿ ಮಹಾದ್ವಾರ, 7 ಲಕ್ಷ ರೂ.ಗಳಲ್ಲಿ “ಶಾಂತ ಸನ್ನಿ ’ ಗ್ರಂಥಾಲಯ, ಪಟ್ಟಾಧ್ಯಕ್ಷರ ಗದ್ದುಗೆ ಮೇಲೆ 8 ಲಕ್ಷ ರೂ.ಗಳಲ್ಲಿ ಮನಮೋಹಕ ಗೋಪುರ, ಮಠದ ಮುಂದೆ ಭವ್ಯ ಶಿಲಾನಿರ್ಮಿತ ಮುಖದ್ವಾರ ನಿರ್ಮಾಣ ಹೀಗೆ ಹತ್ತು ಹಲವು ಅಭಿವೃದ್ಧಿ ಚಟುವಟಿಕೆಗಳು ನಡೆದವು. ಪ್ರತಿವರ್ಷ ಸಿಂದಗಿ ಮಠದಲ್ಲಿ ತೋಂಟದ ಶ್ರೀಗಳ ನೇತೃತ್ವದಲ್ಲಿ ಶಾಂತವೀರ ಪಟ್ಟಾಧ್ಯಕ್ಷ ಪುಣ್ಯ ಸ್ಮರಣೋತ್ಸವ, ಪ್ರವಚನ, ಸಾಹಿತ್ಯ, ಕಲೆ, ಜನಪದ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯುತ್ತಾ ಬಂದಿವೆ. ಕಾರ್ಯಕ್ರಮಗಳಿಗೆ ಹೊಸ ಪ್ರತಿಭೆ, ವಿಶಿಷ್ಟ ಕಲೆ, ಕಲಾವಿದರನ್ನು ಕರೆಸಿ, ಅವರನ್ನು ಮಠದ ಮೂಲಕ ಪರಿಚಯಿಸುತ್ತಿದ್ದರು. ಸಾವಿರಾರು ಬಡ, ಅನಾಥ ಮಕ್ಕಳಿಗೆ ಅನ್ನ, ಅಕ್ಷರ, ಆಶ್ರಯ ನೀಡಿ ಅವರನ್ನು ಸ್ವಾಮೀಜಿ, ಶಾಸ್ತ್ರೀಗಳನ್ನಾಗಿ ಮಾಡಿ ಅವರ ವ್ಯಕ್ತಿತ್ವಕ್ಕೊಂದು ಘನತೆ ಒದಗಿಸುತ್ತಿರುವ ಮಠಕ್ಕೆ ತೋಂಟದ ಶ್ರೀಗಳು ಅಕ್ಷರಶ: ಕಳಸಪ್ರಾಯರಾಗಿದ್ದರು.
Related Articles
Advertisement