ಹಾಸನ: ನಮ್ಮ ಸಂವಿಧಾನವು ನಮಗೆ ಮೂಲಭೂತ ಹಕ್ಕುಗಳನಷ್ಷೇ ಅಲ್ಲದೇ, ಕರ್ತವ್ಯಗಳನ್ನೂ ನೀಡಿದೆ. ನಮ್ಮ ಹಕ್ಕುಗಳಿಗಷ್ಟೇ ಗಮನ ಹರಿಸದೇ, ದೇಶಕ್ಕಾಗಿ ಮಾಡಬೇಕಾದ ಕರ್ತವ್ಯಗಳನ್ನೂ ನಿಷ್ಠೆಯಿಂದ ಮಾಡಲು ಪ್ರತಿಯೊಬ್ಬ ಭಾರತೀಯನೂ ಕಟಿಬದ್ಧವಾಗಿರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ. ರೇವಣ್ಣ ಅವರು ಹೇಳಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 70ನೇ ಗಣರಾಜ್ಯೋತ್ಸವದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದ ಅವರು, ಬ್ರಿಟಿಷರ ದಾಸ್ಯದಿಂದ ನಲುಗಿದ್ದ ದೇಶವು ಮಹಾತ್ಮಾ ಗಾಂಧೀಜಿ, ಜವಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲರಂಥ ಸ್ವಾತಂತ್ರ್ಯ ಸೇನಾನಿಗಳ ಹೋರಾಟದ ಫಲವಾಗಿ ಸ್ವಾತಂತ್ರ್ಯ ಲಭಿಸಿದೆ ಎಂದರು.
ಅಂಬೇಡ್ಕರ್ ಪರಿಶ್ರಮ: ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ದೂರ ದೃಷ್ಟಿ, ಪರಿಶ್ರಮದಿಂದ ರಚಿತವಾದ ಸಂಧಾ ನವು 1950ನೇ ಜ.26ರಿಂದ ಅಧಿಕೃತವಾಗಿ ಜಾರಿಗೆ ಬಂದ ದಿನವನ್ನು ಇಂದು ಗಣ ರಾಜ್ಯೋತ್ಸವ ದಿನವಾಗಿ ಸಂಭ್ರಮದಿಂದ ಆಚರಿಸುತ್ತಿದ್ದೇವೆ. ನಮ್ಮ ಸ್ವಾತಂತ್ರ್ಯ ಬದುಕಿಗೆ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಾರಣರಾದ ಹಿರಿಯರ ತ್ಯಾಗ ಬಲಿದಾನ ಮಾಡಿದ ಮಹನೀಯರನ್ನು ಸ್ಮರಿಸಿ ಗೌರವ ಸಲ್ಲಿಸಲೇಬೇಕಿದೆ ಎಂದರು.
ದೇಶದ ಅಭಿವೃದ್ಧಿಗೆ ಶ್ರಮಿಸಿ: ಜಗತ್ತಿನಲ್ಲೇ ಅತಿ ಹೆಚ್ಚಿನ ಯುವ ಸಮುದಾಯವು ಭಾರತದಲ್ಲಿದೆ. ದೇಶವನ್ನು ವಿಶ್ವದ ಮುಂಚೂಣಿಯ ಹಂತಕ್ಕೆ ಯುವ ಸಮು ದಾಯ ಕೊಂಡೊಯ್ಯಬೇಕು ಎಂದರು.
ಇತ್ತೀಚೆಗೆ ನಮ್ಮನಗಲಿದ ಸಿದ್ಧಗಂಗಾ ಶ್ರೀ ಡಾ. ಶಿವಕುಮಾರ ಸ್ವಾಮೀಜಿ ತ್ರಿವಿಧ ದಾಸೋಹದ ಮೂಲಕ ಸಾವಿರಾರು ಮಕ್ಕಳ ಬದುಕು ರೂಪಿಸಿದ್ದಾರೆ. ಅವರ ಕಾರ್ಯ ಜಗತ್ತಿಗೇ ಮಾದರಿಯಾಗಿದೆ ಎಂದು ಸ್ಮರಿಸಿ ಶ್ರೀಗಳಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ಶಾಸಕ ಪ್ರೀತಂ ಜೆ .ಗೌಡ ಅಧ್ಯಕ್ಷತೆ ವಹಿಸಿದ್ದರು, ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಿ.ಎಸ್.ಶ್ವೇತಾ, ತಾ.ಪಂ. ಅಧ್ಯಕ್ಷ ಬಿ.ಟಿ. ಸತೀಶ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎ.ಎನ್. ಪ್ರಕಾಶ್‌ಗೌಡ, ಜಿ.ಪಂ.ಸಿಇಓ ಪುಟ್ಟಸ್ವಾಮಿ, ಅಪರ ಜಿಲ್ಲಾಧಿಕಾರಿ ಎಂ.ಎಲ್. ವೈಶಾಲಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವರಾಜ್, ಮತ್ತಿತರರು ಹಾಜರಿದ್ದರು.