ದಾವಣಗೆರೆ: ಹರಿಹರದಲ್ಲಿ ಮೇ 7ರಂದು ಅತ್ಯಂತ ಯಶಸ್ವಿಯಾಗಿ ಜನತಾ ಜಲಧಾರೆ ರಥಯಾತ್ರೆ ಕಾರ್ಯಕ್ರಮ ನಡೆಸಲಾಗುವುದು ಎಂದು ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ತಿಳಿಸಿದರು.
ನಗರದ ಶ್ರೀರಾಮ ದೇವಸ್ಥಾನದಲ್ಲಿ ಬುಧವಾರ ನಡೆದ ಜನತಾ ಜಲಧಾರೆ ರಥಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಅಂದು ಸಂಜೆ ನಡೆಯುವ ಜನತಾ ಜಲಧಾರೆ ರಥಯಾತ್ರೆಯ ಸಮಾರೋಪದಲ್ಲಿ ಪಕ್ಷದ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಚನ್ನಗಿರಿ, ಮಾಯಕೊಂಡ, ಜಗಳೂರು, ದಾವಣಗೆರೆ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಆಯಾ ಅಧ್ಯಕ್ಷರು ಹಾಗೂ ಮುಖಂಡರ ತೀರ್ಮಾನದಂತೆ ಜನತಾ ಜಲಧಾರೆ ರಥಯಾತ್ರೆ, ಕಾರ್ಯಕ್ರಮಗಳು ನಡೆಯಲಿವೆ . ಹರಿಹರ ತಾಲೂಕಿನ ಹಲವರು ಗ್ರಾಮಗಳಿಗೆ ಜಲಧಾರೆ ಕಾರ್ಯಕ್ರಮಕ್ಕೆ ಜನರಿಗೆ ಆಹ್ವಾನಿಸಲು ಹೋದ ಕಡೆ ಜನರು ಬಿಜೆಪಿ ಮತ್ತು ಕಾಂಗ್ರೆಸ್ ಬಗ್ಗೆ ಬಹಳ ಬೇಸರ ವ್ಯಕ್ತಪಡಿಸಿದರು.
ಕೋಮು ಸಂಘರ್ಷ ನಡೆಸುವ ರಾಜಕೀಯ ಪಕ್ಷಗಳು ಬೇಡ. ರೈತರ, ಕಾರ್ಮಿಕರ, ಬಡವರ ಅಭಿವೃದ್ಧಿ ಮಾಡುವಂತಹ ಪ್ರಾದೇಶಿಕ ಪಕ್ಷ ಬೇಕು. ಕುಮಾರಸ್ವಾಮಿ ಅವರು ಮತ್ತೆ ಮುಖ್ಯಮಂತ್ರಿ ಆಗಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಮುಂದೆ ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿ ಆಗುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪಕ್ಷದ ಜಿಲ್ಲಾಧ್ಯಕ್ಷ ಬಿ. ಚಿದಾನಂದಪ್ಪ ಮಾತನಾಡಿ, ಜನತಾ ಜಲಧಾರೆ ಕಾರ್ಯಕ್ರಮದಿಂದ ನದಿಗಳ ನೀರು ಸಂಗ್ರಹಿಸಲಾಗುವುದು. ಆಯಾ ಪ್ರದೇಶಗಳಿಗೆ ಅನ್ವಯ ನೀರಾವರಿ ಯೋಜನೆ ರೂಪಿಸಿ ಜೆಡಿಎಸ್ ಸರ್ಕಾರ ಬಂದ ಮೇಲೆ ಅನುಷ್ಠಾನಕ್ಕೆ ತರುವ ಉದ್ದೇಶ ಹೊಂದಲಾಗಿದೆ. ಅದರಿಂದ ಪಕ್ಷದ ಕಾರ್ಯಕರ್ತರು ಜನತಾ ಜಲಧಾರೆ ರಥಯಾತ್ರೆಯ ಉದ್ದೇಶದ ಬಗ್ಗೆ ಜನರಿಗೆ ತಿಳಿಸಬೇಕು. ಜನತಾ ಜಲಧಾರೆ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರಿಗೆ ಸೇರಿಸಿ ದಾವಣಗೆರೆ ಜಿಲ್ಲೆಯಲ್ಲಿ ಜನತಾ ಜಲಧಾರೆ ರಥಯಾತ್ರೆ ಯಶಸ್ವಿಗೊಳ್ಳಿಸಬೇಕು ಎಂದು ಮನವಿ ಮಾಡಿದರು.
ರಾಜ್ಯ ಕಾರ್ಯದರ್ಶಿ ಟಿ. ಅಸ್ಗರ್, ಜಿಲ್ಲಾ ಕಾರ್ಯಾಧ್ಯಕ್ಷ ಟಿ. ಗಣೇಶ್ ದಾಸಕರಿಯಪ್ಪ, ಮಹಾ ಪ್ರಧಾನ ಕಾರ್ಯದರ್ಶಿ ಜೆ. ಅಮಾನುಲ್ಲಾಖಾನ್, ಶೀಲಾಕುಮಾರಿ, ಯು. ಎಂ. ಮನ್ಸೂರ್ ಅಲಿ, ಜಮೀರ್ ಅಹ್ಮದ್‌ಖಾನ್, ಬಾತಿ ಶಂಕರ್ ಶಾನವಾಜ್‌ಖಾನ್, ಗಂಗಾಧರಪ್ಪ, ಕುಬೇರಪ್ಪ ತ್ಯಾವಣಿಗೆ, ಜಾವೀದ್, ಕಿರಣ್ ಹುಲ್ಮನಿ, ವಾಜಿದ್, ಸಮೀವುಲ್ಲಾ ಪರ್ವಿನ್‌ಬಾನು, ಹಾಲಮ್ಮ ಇತರರು ಇದ್ದರು.