ಬೆಂಗಳೂರು: ದೇಶವ್ಯಾಪಿ ಭುಗಿಲೆದ್ದಿರುವ ಸಿಎಎ ವಿರೋಧಿ ಹೋರಾಟ ಕಾಣಿಸದಂತೆ ಯಾವ ಭದ್ರಕೋಟೆ ನಿರ್ಮಿಸುತ್ತಾರೆ? ದೇಶದಲ್ಲಿ ತಾಂಡವವಾಡುತ್ತಿರುವ ಬಡತನ, ನಿರುದ್ಯೋಗ ಸಮಸ್ಯೆ ಮರೆಮಾಚಲು ಯಾವ ತಡೆಗೋಡೆ ನಿರ್ಮಿಸುತ್ತಾರೆ? ಮೋದಿ ಅವರೇ ಉತ್ತರಿಸುವಿರಾ? ಇದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಕೇಳಿರುವ ಪ್ರಶ್ನೆಗಳು.
ಮಂಗಳವಾರ ಮುಂಜಾನೆ ತನ್ನ ಅಧಿಕೃತ ಖಾತೆಯಲ್ಲಿ ಟ್ವೀಡ್ ಮಾಡಿರುವ ಕುಮಾರಸ್ವಾಮಿಯವರು, ಪ್ರಧಾನಿ ಮೋದಿಯವರಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.
ಅಮೇರಿಕಾ ಅಧ್ಯಕ್ಷ ಟ್ರಂಪ್ ಭಾರತ ಭೇಟಿಯ ವೇಳೆಗೆ ಅಹಮದಾಬಾದ್ ನಲ್ಲಿ ಸ್ಲಂಗಳನ್ನು ಕಾಣದಂತೆ ಗೋಡೆಗಳನ್ನು ಕಟ್ಟಿಸಲಾಗುತ್ತಿದೆ ಎಂಬ ವರದಿಯ ಬಗ್ಗೆ ಪ್ರಸ್ತಾವಿಸಿರುವ ಎಚ್ ಡಿಕೆ, ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತದ ಭೇಟಿ ವೇಳೆ ಅಹ್ಮದಾಬಾದ್ ನ ಸ್ಲಂಗಳು ಕಾಣದಂತೆ ಪ್ರಧಾನಿ ಮೋದಿ ಅವರು ಎತ್ತರದ ಗೋಡೆಗಳನ್ನು ಕಟ್ಟಿಸುತ್ತಿದ್ದಾರಂತೆ! ಆದರೆ ಅಧಃಪತನಕ್ಕೆ ಕುಸಿದಿರುವ ದೇಶದ ಆರ್ಥಿಕತೆ ಕಾಣಿಸದಂತೆ ಮೋದಿ ಅವರು ಯಾವ ಗೋಡೆ ಕಟ್ಟುತ್ತಾರೆ? ಎಂದಿದ್ದಾರೆ.
ಮತ್ತೊಂದು ಟ್ವೀಟ್ ಮಾಡಿರುವ ಕುಮಾರಸ್ವಾಮಿಯವರು, ದೇಶವ್ಯಾಪಿ ಭುಗಿಲೆದ್ದಿರುವ ಸಿಎಎ ವಿರೋಧಿ ಹೋರಾಟ ಕಾಣಿಸದಂತೆ ಯಾವ ಭದ್ರಕೋಟೆ ನಿರ್ಮಿಸುತ್ತಾರೆ? ದೇಶದಲ್ಲಿ ತಾಂಡವವಾಡುತ್ತಿರುವ ಬಡತನ, ನಿರುದ್ಯೋಗ ಸಮಸ್ಯೆ ಮರೆಮಾಚಲು ಯಾವ ತಡೆಗೋಡೆ ನಿರ್ಮಿಸುತ್ತಾರೆ? ಮೋದಿ ಅವರೇ ಉತ್ತರಿಸುವಿರಾ? ಎಂದು ಪ್ರಶ್ನಿಸಿದ್ದಾರೆ.