ಬೆಂಗಳೂರು: ಮೈತ್ರಿ ಸರ್ಕಾರದ ನಡೆಯನ್ನು ವಿರೋಧಿಸಿ ಅಹೋರಾತ್ರಿ ಧರಣಿ ನಡೆಸಿದ ಬಿಜೆಪಿ ನಾಯಕರೊಂದಿಗೆ ಚರ್ಚೆಗೆ ಸಿದ್ಧವಿದ್ದು, ಮಾತುಕತೆಗೆ ಸಮಯ ನಿಗದಿಪಡಿಸುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಮುಖೇನ ಭಾನುವಾರ ಮಾತುಕತೆಗೆ ಆಹ್ವಾನಿಸಿದ್ದರು.
ಆದರೆ ಯಡಿಯೂರಪ್ಪ ಅವರಿಂದ ಸಕಾರಾತ್ಮಕ ಸ್ಪಂದನೆ ಸಿಗದಿದ್ದರಿಂದ ಬೇಸರಗೊಂಡ ಕುಮಾರಸ್ವಾಮಿಯವರು ಟ್ವಿಟ್ಟರ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ನಗರದ ಮೌರ್ಯ ವೃತ್ತದಲ್ಲಿ ಶುಕ್ರವಾರ, ಶನಿವಾರ ಅಹೋರಾತ್ರಿ ಧರಣಿ ನಡೆಸಿದ ಬಿಜೆಪಿ ನಾಯಕರು ಭಾನುವಾರ ಬೆಳಗ್ಗೆ ಮುಖ್ಯಮಂತ್ರಿಗಳ ಗೃಹ ಕಚೇರಿ “ಕೃಷ್ಣಾ’ಗೆ ಮುತ್ತಿಗೆ ಹಾಕಲು ಸಜ್ಜಾಗಿದ್ದರು.
ಆ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರಿಗೆ ಭಾನುವಾರ ಪತ್ರ ಬರೆದ ಕುಮಾರಸ್ವಾಮಿಯವರು, “ತಮ್ಮೊಂದಿಗೆ ಚರ್ಚಿಸಲು ಸಿದ್ಧನಿದ್ದೇನೆ. ತಮ್ಮ ಸಮಯಕ್ಕೆ ಅನುಗುಣವಾಗಿ ಚರ್ಚಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದರು. ಈ ಸಂಬಂಧ ಶನಿವಾರ ತಡರಾತ್ರಿ ಟ್ವೀಟ್ ಕೂಡ ಮಾಡಿದ್ದರು.
ಈ ಪತ್ರವನ್ನು ಸಚಿವ ವೆಂಕಟರಾವ್ ನಾಡಗೌಡ ಯಡಿಯೂರಪ್ಪ ಅವರಿಗೆ ತಲುಪಿಸಿದ್ದರು. ಇದಕ್ಕೆ ಸ್ಪಂದನೆ ಸಿಗಲಿಲ್ಲ. ಬಿಜೆಪಿ ನಾಯಕರು ಗೃಹ ಕಚೇರಿಗೆ ಮುತ್ತಿಗೆ ಹಾಕುವ ಹೋರಾಟ ನಡೆಸಿದರು. ಬಳಿಕ ಮತ್ತೂಂದು ಟ್ವೀಟ್ ಮಾಡಿರುವ ಕುಮಾರಸ್ವಾಮಿ, “ರಾಜ್ಯದ ಅಭಿವೃದ್ಧಿ ಕುರಿತು ಚರ್ಚೆಗೆ ಆಹ್ವಾನಿಸಿ ಪತ್ರವನ್ನು ಸಚಿವ ವೆಂಕಟರಾವ್ ನಾಡಗೌಡ ಅವರ ಮೂಲಕ ವಿರೋಧ ಪಕ್ಷದ ನಾಯಕರಿಗೆ ಕಳುಹಿಸಿದ್ದೆ.
ಅವರು ಚರ್ಚೆಗೆ ಸಮಯ ಕೊಡಬಹುದು ಎಂದು ನಿರೀಕ್ಷಿಸಿದ್ದೆ. ಆದರೆ ಬಿಜೆಪಿ ನಿಜ ಬಣ್ಣ ಬಯಲಾಗಿದೆ. ಅವರಿಗೆ ಬೇಕಿರುವುದು ಕೇವಲ ಅಗ್ಗದ ಪ್ರಚಾರ, ಅಭಿವೃದ್ಧಿ ಆಧಾರಿತ ಚರ್ಚೆಯಲ್ಲ,’ ಎಂದು ಕುಟುಕಿದ್ದಾರೆ.
ಕಾಂಗ್ರೆಸ್ ಖಂಡನೆ: ಸಿಎಂ ಕುಮಾರಸ್ವಾಮಿ ಟ್ವೀಟ್‌ಗೆ ದನಿಗೂಡಿಸಿರುವ ಕರ್ನಾಟಕ ಕಾಂಗ್ರೆಸ್, “ಬಿಜೆಪಿ ಅಭಿವೃದ್ಧಿ ವಿಷಯ ಕುರಿತು ಚರ್ಚಿಸದೆ ಪ್ರಚಾರಕ್ಕಾಗಿ ನಾಟಕ ಮಾಡುತ್ತಿದೆ. ಇದು ಅಭಿವೃದ್ಧಿ ವಿರೋಧಿ ಮನಸ್ಥಿತಿಯನ್ನು ತೋರಿಸುತ್ತದೆ’ ಎಂದು ಟ್ವಿಟ್ಟರ್‌ನಲ್ಲಿ ಖಂಡಿಸಿದೆ.