Advertisement
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಸಚಿವ ಕೆ.ಸುಧಾಕರ್ ಅವರೇ; ಸಾವು, ಕ್ರೌರ್ಯವನ್ನೇ ಸಂಭ್ರಮಿಸುವ ʼಸಾವುಗೇಡಿ ಸರಕಾರʼದ ಆಡಳಿತದಲ್ಲಿ ಸರಕಾರಿ ಆಸ್ಪತ್ರೆಗಳನ್ನು ಸಾವಿನಕೂಪಗಳನ್ನಾಗಿ ಪರಿವರ್ತನೆ ಮಾಡಿದ ಕೀರ್ತಿ ನಿಮ್ಮದು. ತುಮಕೂರು ಆಸ್ಪತ್ರೆ ಮತ್ತು ವೈದ್ಯೆಯ ದರ್ಪದಿಂದ ಆದ ಮೂರು ಅಮಾನುಷ ಸಾವುಗಳ ಬಗ್ಗೆ ನಿಮಗೆ ಕೊನೆಪಕ್ಷ ಪಶ್ಚಾತ್ತಾಪ, ಪಾಪಪ್ರಜ್ಞೆ ಬೇಡವೇ? ನಾನು ಎತ್ತಿದ ಪ್ರಶ್ನೆ ಏನು? ನೀವು ಕೊಟ್ಟ ಉತ್ತರವೇನು? ಮನುಷ್ಯತ್ವ ಇದೆಯಾ ನಿಮಗೆ? ನಿಮ್ಮ ವೈಫಲ್ಯಗಳನ್ನು ಸಮರ್ಥಿಸಿಕೊಳ್ಳುತ್ತಿದ್ದೀರಿ ಎಂದರೆ; ಆ ಬಾಣಂತಿ, ಆಕೆಯ ಎರಡು ನವಜಾತ ಶಿಶುಗಳ ಧಾರುಣ ಸಾವನ್ನೂ ಸಂಭ್ರಮಿಸುತ್ತಿದ್ದೀರಿ ಎಂದೇ ಅರ್ಥ. ನಿಮ್ಮ ವಿಕೃತ ಮನಃಸ್ಥಿತಿಗೆ ನನ್ನ ಧಿಕ್ಕಾರವಿದೆ ಎಂದು ಕಿಡಿಕಾರಿದ್ದಾರೆ.
Related Articles
Advertisement
ಕಾಸಿಗಾಗಿ ಹುದ್ದೆ; ಇದು ನಿಮ್ಮ ಸುಲಿಗೆ ನೀತಿ. ವೈದ್ಯರು, ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಬಿಕರಿಗಿಟ್ಟಿದ್ದೀರಿ. ಅವರ ಒಂದು ವರ್ಷದ ವೇತನ ನೀವು ನಿಗದಿ ಮಾಡಿರುವ ದರ. ಬೆಕ್ಕು ಕಣ್ಮುಚ್ಚಿ ಹಾಲು ಕುಡಿಯುತ್ತಿದೆ ಎಂದರೆ ಲೋಕಕ್ಕೆ ಕಾಣುವುದಿಲ್ಲವೇ? ಕಳ್ಳಬೆಕ್ಕಿನ ಆಟ ಕಾಲದುದ್ದಕ್ಕೂ ನಡೆಯುವುದಿಲ್ಲ, ನೆನಪಿರಲಿ ಸಚಿವರೇ! ನಿಮ್ಮ ಪರ್ಸಂಟೇಜ್ ವ್ಯವಹಾರದ ಬಗ್ಗೆ ಮಾತನಾಡಿದ ಗುತ್ತಿಗೆದಾರರಾದ ಕೆಂಪಣ್ಣ ಅವರು ಚಿಕ್ಕಬಳ್ಳಾಪುರದ ಕಾರ್ಯಕ್ರಮ ಒಂದಕ್ಕೆ ಬರಬೇಕಿತ್ತು. ಅವರನ್ನು ಬರದಂತೆ ತಡೆಯಲು ಏನೆಲ್ಲಾ ಹೈಡ್ರಾಮಾ ನಡೆಸಿದಿರಿ, ಯಾರ ಕಾಲು ಹಿಡಿದಿರಿ ಎನ್ನುವ ಮಾಹಿತಿ ನನಗೂ ಇದೆ. ʼಗಾಜಿನ ಮನೆಯಲ್ಲಿ ಕೂತು ಗೋಲಿಯಾಟ ಆಡುವುದು ಕ್ಷೇಮವಲ್ಲʼ ಸಚಿವರೇ ಎಂದಿದ್ದಾರೆ.
ಸಚಿವರೇ, ತುಮಕೂರು ಘಟನೆಗೆ ನೈತಿಕ ಹೊಣೆ ಹೊತ್ತು ನೀವು ರಾಜೀನಾಮೆ ನೀಡಲೇಬೇಕು. ಆ ನೈತಿಕತೆ ನಿಮಗೆ ಇಲ್ಲದಿದ್ದರೆ, ಅದನ್ನು ಕೊನೆಪಕ್ಷ ನಿಮ್ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಾದರೂ ಪ್ರದರ್ಶಿಸಬೇಕು. ನಿಮ್ಮನ್ನು ಸಂಪುಟದಿಂದ ಕಿತ್ತೊಗೆಯಲೇಬೇಕು. ನಿಮ್ಮ ಪಕ್ಷಕ್ಕೂ ಅಂಥ ನೈತಿಕತೆ ಬಿಜೆಪಿ ಸರಕಾರಕ್ಕೆ ಇದೆಯಾ ಎಂದು ಕುಮಾರಸ್ವಾಮಿ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.