Advertisement

ನನ್ನನ್ನೂ ಸೇರಿ 83 ತಾಲೂಕಿನ ಜನಕ್ಕೆ ಮಕ್ಮಲ್‌ ಟೋಪಿ:ಡಿಕೆಶಿ ವಿರುದ್ಧ ಕುಮಾರಸ್ವಾಮಿ ವ್ಯಂಗ್ಯ

10:52 AM Dec 29, 2021 | Team Udayavani |

ಬೆಂಗಳೂರು : ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿರುವ ಪಾದಯಾತ್ರೆಯಲ್ಲಿ ಭಾಗವಹಿಸುವಂತೆ ತಮಗೂ ಆಹ್ವಾನ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ತಿರುಗೇಟು ನೀಡಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ “ನನ್ನನ್ನೂ ಸೇರಿ 83 ತಾಲೂಕು ಜನರಿಗೆ ಮಕ್ಮಲ್‌ ಟೋಪಿ ಹಾಕಲು ಹೊರಟಿದ್ದಾರೆ ʼʼ ಎಂದು ವ್ಯಂಗ್ಯವಾಡಿದ್ದಾರೆ.

Advertisement

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಅವರು, ಮೇಕೆದಾಟು ಯೋಜನೆಯ ಮೂಲ ರೂವಾರಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ. ಅವರನ್ನೇ ಮರೆತ ಕಾಂಗ್ರೆಸ್‌ ನಾಯಕರು ಸತ್ಯದ ಸಮಾಧಿ ಮಾಡಲು ಹೊರಟಿದ್ದಾರೆ. ಸತ್ಯ ಹೇಳಲು ಅವರಿಗೆ ನಾಲಿಗೆ ಹೊರಳುತ್ತದೆ. ಮಣ್ಣಿನ ಮಕ್ಕಳ ನಂಬಿಕೆಯನ್ನು ಬುಲ್ಡೋಜ್‌ ಮಾಡುವಂಥ ರಾಜಕಾರಣವನ್ನು ಕಾಂಗ್ರೆಸ್‌ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ನ್ಯಾಯಯುತ ಪಾಲು ಕಾವೇರಿ 4 ನೇ ಹಂತದ 9 ಟಿಎಂಸಿ ನೀರನ್ನು ತಮಿಳುನಾಡಿನ ಒತ್ತಡಕ್ಕೆ ಮಣಿದು ಕಾಂಗ್ರೆಸ್‌ ತಡೆದಿತ್ತು. ಆಗ ಪಿ.ವಿ.ನರಸಿಂಹರಾವ್‌ ಪ್ರಧಾನಿಯಾಗಿದ್ದರು. ಕನ್ನಡಿಗರ ಕನಸುಗಳಿಗೆ ಕೊಳ್ಳಿ ಇಟ್ಟ ಅದೇ ಪಕ್ಷ ಈಗ ಸತ್ಯಗಳನ್ನು ಹೂತು ಮುಜುಗರವಿಲ್ಲದೆ ಮತಯಾತ್ರೆಗೆ ಹೊರಟಿದೆ.

ಆಗ ಮುಖ್ಯಮಂತ್ರಿಯಾಗಿದ್ದ ದೇವೇಗೌಡರನ್ನು ತಡೆದ ಕಾಂಗ್ರೆಸ್‌ ಪಕ್ಷಕ್ಕೆ ಪ್ರಧಾನಿಯಾದ ಮೇಲೆ ಗೌಡರನ್ನು ತಡೆಯುವುದಕ್ಕೆ ಧೈರ್ಯ ಸಾಲಲಿಲ್ಲ. ಕಾಂಗ್ರೆಸ್‌ ನ ಕುತ್ಸಿತತನದಿಂದ ತಡೆಯಲ್ಪಟ್ಟ 9 ಟಿಎಂಸಿ ನೀರಿನ ಯೋಜನೆಗೆ ಮಣ್ಣಿನಮಗ ಎದೆಗುಂದದೆ ಹಸಿರು ನಿಶಾನೆ ತೋರಿದರು. ಜಪಾನ್‌ ನಿಂದ ಇದಕ್ಕಾಗಿ ಹಣವನ್ನೂ ತಂದರು.

ರಾಜ್ಯದಲ್ಲಿ ಈ ಹಿಂದೆ ಐದು ವರ್ಷ ಕಾಂಗ್ರೆಸ್‌ ಸರಕಾರವೇ ಇತ್ತು. ಸಿದ್ದಹಸ್ತರೇ ಸಿಎಂ ಆಗಿದ್ದರು. ಆಗ ಕೇಂದ್ರದ ಮುಂದೆ ಪ್ರತಾಪ ತೋರಬಹುದಿತ್ತು. ಬರಿ ಮಾತಿನ ಪೌರುಷ. ಆಗ ಗಾಂಧಿ ಪ್ರತಿಮೆ ಮುಂದೆ ಉಪವಾಸ ಕುಳಿತ ಮಣ್ಣಿನ ಮಗನ ಖದರಿಗೆ ಕೇಂದ್ರವೇ ನಡುಗಿತ್ತು. ಕಾಂಗ್ರೆಸ್‌ ಪವಿತ್ರ ಗಂಗೆಯನ್ನೂ ರಾಜಕೀಯಕ್ಕೆ ಬಳಸುತ್ತದೆ. ಆಗ ಏನೂ ಮಾಡದ ಉತ್ತರಕುಮಾರ ಸಿದ್ದಸೂತ್ರಧಾರ ಈಗೇನು ಮಾಡಲು ಸಾಧ್ಯ ? ಕಪಟ ನಾಟಕ ಮಾಡುವ ಸಿದ್ದಹಸ್ತ ಡಿಸೈನ್‌ ಶೂರರಿಗೆ ಮುಂದೆ ಶಾಸ್ತಿ ಕಾದಿದೆ. ಭೂತಾಯಿ ಒಡಲಿನ ಮಣ್ಣು ಬಗೆದ ಕಲ್ಲುಬಂಡೆಗಳನ್ನೇ ನುಂಗಿದ ರಕ್ಕಸ ರಾಜಕಾರಣದ ಕಾಕದೃಷ್ಟಿ ಈಗ ತಾಯಿ ಕಾವೇರಿ ಮೇಲೂ ಬಿದ್ದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next