Advertisement

ಹಿಂದೆ ವಿರೋಧ- ಈಗ..! ಇದೇನಾ ನಿಮ್ಮ ಸಂಸ್ಕೃತಿ: ಬಿಎಸ್ ವೈ ಸರ್ಕಾರದ ವಿರುದ್ಧ ಕಿಡಿಕಾರಿದ HDK

12:07 PM Apr 27, 2021 | Team Udayavani |

ಬೆಂಗಳೂರು: ‘ಬಿಎಸ್‌ವೈ ಅಹೋರಾತ್ರಿ ಧರಣಿ, ಬಿಜೆಪಿ ಯುವ ಮೋರ್ಚಾದಿಂದ ವಿಧಾನಸೌಧ ಮುತ್ತಿಗೆ, ಮೈತ್ರಿ ಸರ್ಕಾರದ ಮೇಲೆ ಕಿಕ್‌ ಬ್ಯಾಕ್‌ ಆರೋಪ…’ ಜಿಂದಾಲ್‌ಗೆ 3677 ಎಕರೆ ಭೂಮಿ ಮಾರಾಟ ಮಾಡಲು ನಿರ್ಧರಿಸಿದ್ದ ಮೈತ್ರಿ ಸರ್ಕಾರದ ವಿರುದ್ಧ ಬಿಜೆಪಿ ನಡೆಸಿದ್ದ ಹೋರಾಟಗಳಿವು. ಆದರೆ ಇಂದು ಬಿಜೆಪಿ ಅದೇ ಜಿಂದಾಲ್‌ಗೆ ಅದೇ ಭೂಮಿಯನ್ನು ಸದ್ದಿಲ್ಲದೇ ಮಾರಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

Advertisement

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ವಿರೋಧಕ್ಕಾಗಿಯೇ ವಿರೋಧ ಮಾಡುವುದು, ವಿರೋಧ ಪಕ್ಷದಲ್ಲಿದ್ದಾಗ ವಿರೋಧಿಸಿದ್ದನ್ನೇ ಆಡಳಿತಕ್ಕೆ ಬಂದಾಗ ಕದ್ದು ಮುಚ್ಚಿ ಮಾಡುವುದು ಬಿಜೆಪಿಯ ‘ಸಂಸ್ಕೃತಿ’. ಜಿಂದಾಲ್‌ಗೆ ಭೂಮಿ ನೀಡುವ ವಿಚಾರದಲ್ಲಿ ಅಂದು ನನ್ನ ಸರ್ಕಾರದ ವಿರುದ್ಧ, ನನ್ನ ವಿರುದ್ಧ ಸಲ್ಲದ ಆರೋಪ ಮಾಡಿದ್ದ ಬಿಎಸ್‌ವೈ ಇಂದು ಅದೇ ಆರೋಪಗಳನ್ನು ತಮ್ಮ ಮೇಲೆ ಹೊತ್ತುಕೊಳ್ಳುವರೇ ಎಂದು ಪ್ರ‍ಶ್ನಿಸಿದ್ದಾರೆ.

ಆಗ ಕಾಂಗ್ರೆಸ್‌ ಶಾಸಕರಾಗಿದ್ದ, ಈಗ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿರುವ ಆನಂದ್‌ ಸಿಂಗ್‌ ಜಿಂದಾಲ್‌ಅನ್ನು’ಈಸ್ಟ್‌ ಇಂಡಿಯಾ ಕಂಪನಿ’ ಎಂದಿದ್ದರು. ಜಿಂದಾಲ್‌ ವಿರುದ್ಧ ಅಂದಿನ ಗೃಹ ಸಚಿವರಿಗೆ ಪತ್ರ ಬರೆದಿದ್ದರು. ಅವರೇ ಇರುವ ಈಗಿನ ಸಂಪುಟ ಸಭೆ ಜಿಂದಾಲ್‌ಗೆ ಭೂಮಿ ನೀಡಿದೆ. ಆನಂದ್‌ ಸಿಂಗ್‌ ಈಗ ಈಸ್ಟ್‌ ಇಂಡಿಯಾ ಕಂಪನಿ ಪರವಾಗಿದ್ದಾರಾ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.

ಇದನ್ನೂ ಓದಿ:ಮಾಸ್ಕ್ ರೀತಿ ಬಣ್ಣ ಬಳಿದುಕೊಂಡು ಯಾಮಾರಿಸಲು ಹೋದವರೇ ತಗ್ಲಾಕ್ಕೊಂಡ್ರು..!

ಜಿಂದಾಲ್‌ಗೆ ಭೂಮಿ ನೀಡುವ ವಿಚಾರವಾಗಿ ಅಂದು ಮೈತ್ರಿ ಸರ್ಕಾರದ ಭಾಗವಾಗಿದ್ದುಕೊಂಡೇ ಟೀಕೆ ಮಾಡಿದ್ದ, ದಾಖಲೆ, ಪತ್ರಗಳನ್ನು ಬಿಡುಗಡೆ ಮಾಡಿದ್ದ ಎಚ್‌.ಕೆ ಪಾಟೀಲ್‌ ಅವರು ಎಚ್.ಕೆ.ಪಾಟೀಲ್ ಈಗ ಏನು ಮಾಡುತ್ತಿದ್ದಾರೆ. ಅವರ ದಾಖಲೆ ಪತ್ರಗಳೆಲ್ಲವೂ ಎಲ್ಲಿ ಅಡಗಿಕೊಂಡಿವೆ? ಈಗ ಅವುಗಳನ್ನು ಮತ್ತೊಮ್ಮೆ ಬಿಡುಗಡೆ ಮಾಡಲು ಯಾರು ಅಡ್ಡ ಇದ್ದಾರೆ ಎಂದು ಪ್ರಶ್ನಿಸಿದ್ದಾರೆ.

Advertisement

ಜಿಂದಾಲ್‌ ಕಂಪನಿಗೆ 3,667 ಎಕರೆ ಭೂಮಿ ಮಾರಾಟ ಮಾಡಲು ಬಿಜೆಪಿ ಸರ್ಕಾರದ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಆದರೆ, ಎಕರೆವಾರು ಶುದ್ಧ ಕ್ರಯಕ್ಕೆ ನಿಗದಿ ಮಾಡಿದ ಮೊತ್ತವೆಷ್ಟು ಎಂಬ ಪ್ರಶ್ನೆಗೆ ಗೃಹ ಸಚಿವರೇ ‘ಗೊತ್ತಿಲ್ಲ’ ಎಂಬ ಉತ್ತರ ನೀಡಿದ್ದಾರೆ. ಸ್ವತಃ ಗೃಹ ಸಚಿವರಿಗೇ ಮಾಹಿತಿ ಇಲ್ಲ ಎಂದರೆ ಏನು ಅರ್ಥ? ಇದನ್ನು ನಂಬಲು ಸಾಧ್ಯವೇ. ಲೀಸ್‌ ಕಂ ಸೇಲ್‌ ಆಧಾರದ ಭೂಮಿಯನ್ನು ಶುದ್ಧ ಕ್ರಯ ಮಾಡಿಕೊಡಬೇಕಾದ್ದು ಕಾನೂನು. ಅದನ್ನೇ ನನ್ನ ಸರ್ಕಾರ ಮಾಡಲು ಹೊರಟಿತ್ತು. ಆದರೆ ಬಿಜೆಪಿ ಕಿತಾಪತಿ ಮಾಡಿತ್ತು. ಜನರಲ್ಲಿ ಮೂಡಬಹುದಾದ ಸಂಶಯ ನಿವಾರಣೆ ಮಾಡಿ ನಂತರ ಭೂಮಿ ನೀಡುವ ನಿರ್ಧಾರಕ್ಕೆ ಬಂದ ನನ್ನ ಸರ್ಕಾರ ಮಾರಾಟ ಪ್ರಕ್ರಿಯೆಯನ್ನು ನಿಲ್ಲಿಸಿತ್ತು. ಬಿಜೆಪಿಗೆ ಈಗ ಜ್ಞಾನೋದಯವಾಗಿದೆ ಎಂದಿದ್ದಾರೆ.

ಬಿಜೆಪಿ ಸರ್ಕಾರ ಜಿಂದಾಲ್‌ ಮುಂದೆ ಏಕಾಏಕಿ ಮಂಡಿಯೂರಲೂ ಒಂದು ಕಾರಣವಿದೆ. ಅದೇನೆಂದು ಯಡಿಯೂರಪ್ಪರಿಗೆ ಚನ್ನಾಗಿ ಗೊತ್ತಿದೆ. ಅದನ್ನು ಅವರೇ ಬಹಿರಂಗಪಡಿಸಲಿ. ಲೀಸ್‌ ಕಂ ಸೇಲ್‌ ಆಧಾರದ ಭೂಮಿಯನ್ನು ಅಂತಿಮವಾಗಿ ಕ್ರಯ ಮಾಡಿಕೊಡಲೇಬೇಕಾದ ಕಾನೂನು ಬಿಜೆಪಿಗೆ ಈಗಲಾದರೂ ಅರಿವಿಗೆ ಬಂದಿದ್ದರೆ ಸಾಕು. ಇನ್ನಾದರೂ ಬಿಜೆಪಿ ಸಲ್ಲದ ಕಿತಾಪತಿ ಮಾಡದಿರಲಿ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next