ಬೆಂಗಳೂರು: ಕಾಂಗ್ರೆಸ್ ಪಕ್ಷವು ಜೆಡಿಎಸ್ ಗೆ ಮೋಸ ಮಾಡಲಿಲ್ಲ. ಕೋಮುವಾದಿ ಪಕ್ಷವನ್ನ ಅಧಿಕಾರದಿಂದ ದೂರ ಇರಿಸಲು ಮೈತ್ರಿ ಸರ್ಕಾರ ರಚನೆ ಮಾಡಿದ್ದೆವು. ನಾವು ಸಮ್ಮಿಶ್ರ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ಕೊಟ್ಟಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಐದು ವರ್ಷ ಒಳ್ಳೆಯ ಕೆಲಸ ಮಾಡಿದ್ದರೂ ಅಧಿಕಾರಕ್ಕೆ ಬರಲಾಗಲಿಲ್ಲ. ನಮ್ಮ ಕಾರ್ಯಕ್ರಮಗಳನ್ನ ಸರಿಯಾಗಿ ಪ್ರಚಾರ ಮಾಡಲು ಆಗಲಿಲ್ಲ. ಹೀಗಾಗಿ ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರ ಇರಿಸಲು ಸಮ್ಮಿಶ್ರ ಸರ್ಕಾರ ರಚನೆ ಮಾಡಿದ್ದೆವು ಎಂದರು.
ದೇವೇಗೌಡರು ಕೋಮುವಾದಿಗಳ ವಿರುದ್ಧ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಅವರೇ ಜೆಡಿಎಸ್ ಗೆ ಪರಮೋಚ್ಚ ನಾಯಕರು. ಅವರು ಬಿಜೆಪಿ ಜತೆ ಹೋಗುವುದಿಲ್ಲ. ಹೋದರೆ ಸಿದ್ದಾಂತ ಬದಲಿಸಿದಂತೆ ಆಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ:ಬಿಜೆಪಿ ಜೊತೆ ಸೇರಿದ್ದರೆ ಈಗಲೂ ನಾನೇ ಮುಖ್ಯಮಂತ್ರಿಯಾಗಿರುತ್ತಿದ್ದೆ: ಕುಮಾರಸ್ವಾಮಿ ಅಳಲು
ಕುಮಾರಸ್ವಾಮಿಯವರಿಗೆ ನಾವು ಕಿರುಕುಳ ಕೊಟ್ಟಿಲ್ಲ. ಅವರು ಎರಡು ಬಾರಿ ಸಿಎಂ ಆಗಿದ್ದಾರೆ. ಯೋಚನೆ ಮಾಡಿ ಹೇಳಿಕೆ ಕೊಡಬೇಕು. ಸರ್ಕಾರ ರಚನೆ ಆಗುವಾಗ ಮತ್ತು ಬೀಳುವಾಗ ಕಾಂಗ್ರೆಸ್ ನಾಯಕರು ಸರ್ಕಾರ ಉಳಿಸಿಕೊಳ್ಳಲು ಏನೆಲ್ಲಾ ಪ್ರಯತ್ನ ಪಟ್ಟೆವು. ಸರ್ಕಾರ ರಚನೆ ಮಾಡುವಾಗ ಹೈದರಾಬಾದ್ ಮತ್ತು ಪತನವಾಗುವಾಗ ಮುಂಬಯಿ ಗೆ ಹೋಗಿ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದೆವೆ ಎಂದರು.
ಮುಖ್ಯಮಂತ್ರಿಯಾಗಿದ್ದಾಗ ಕುಮಾರಸ್ವಾಮಿಗೆ ಯಾವುದೇ ಸಮಸ್ಯೆ ಮಾಡಲಿಲ್ಲ. ನಮ್ಮ ಎಲ್ಲಾ ನಾಯಕರು ಸೇರಿ ಸರ್ಕಾರ ರಚನೆಗೆ ಸಾಥ್ ಕೊಟ್ಟಿದ್ದೆವು ಎಂದು ಸಲೀಂ ಅಹಮದ್ ಹೇಳಿದರು.