Advertisement

ಎಚ್‌ಡಿಕೆ ರೈತರ ಕ್ಷಮೆ ಕೋರಲಿ

12:46 PM Nov 20, 2018 | Team Udayavani |

ಮೈಸೂರು: ಬೆಳೆಗಾರರಿಗೆ ಕಬ್ಬಿನ ಬಾಕಿ ಕೊಡದ ಕಾರ್ಖಾನೆಗಳಿಗೆ ದಂಡ ಹಾಕುವ ಹಾಗೂ ಎರಡು ವರ್ಷ ಜೈಲು ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ತರಬೇಕು. ಹೋರಾಟ ಮಾಡುತ್ತಿರುವ ರೈತರನ್ನು ದರೋಡೆಕೋರರು, ಗೂಂಡಾಗಳು ಎಂದು ಕರೆದಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕೂಡಲೇ ರೈತರ ಕ್ಷಮೆ ಕೇಳಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಆಗ್ರಹಿಸಿದರು.

Advertisement

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಹುತೇಕ ಸಕ್ಕರೆ ಕಾರ್ಖಾನೆಗಳು ಶಾಸಕರು, ಸಂಸದರು, ಸಚಿವರ ಮಾಲಿಕತ್ವದಲ್ಲಿ ಇರುವ ಕಾರಣ ಕಬ್ಬು ಬೆಳೆಗಾರರು ಕಬ್ಬಿನ ಹಣಕ್ಕಾಗಿ ಪ್ರತಿವರ್ಷ ಸಂಕಷ್ಟ ಎದುರಿಸುವಂತಾಗಿದೆ. ಅದಕ್ಕಾಗಿ ಕಬ್ಬು ಖರೀದಿ ನಿಯಂತ್ರಣ (ಎಸ್‌ಎಪಿ) ಕಾಯ್ದೆಗೆ ತಿದ್ದುಪಡಿ ತಂದು ಕಬ್ಬಿನ ಬಾಕಿ ಕೊಡದ ಕಾರ್ಖಾನೆಗಳಿಗೆ ದಂಡ ಹಾಕುವ ಹಾಗೂ ಎರಡು ವರ್ಷ ಜೈಲು ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ತರಬೇಕು ಎಂದರು.

ಸಕ್ಕರೆ ಕಾರ್ಖಾನೆಗಳು ಬಾಕಿ ಇಲ್ಲ ಎಂದು ಸುಳ್ಳು ಮಾಹಿತಿ ನೀಡುತ್ತಿವೆ. ಇದನ್ನು ಜಿಲ್ಲಾಡಳಿತ ಹಾಗೂ ಸಕ್ಕರೆ ಆಯುಕ್ತರು ಪರಿಶೀಲಿಸದೆ ಕಾರ್ಖಾನೆ ಬಾಕಿ ಇಲ್ಲ ಎಂದು ದೃಢೀಕರಣ ನೀಡಲಾಗುತ್ತಿದೆ. ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿರುವ ಕಾರ್ಖಾನೆ ಮಾಲಿಕರ ವಿರುದ್ಧ ಕೂಡಲೇ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು. ಇದರಿಂದ ಮುಂದೆ ಯಾರೂ ತಪ್ಪು ಮಾಹಿತಿ ನೀಡಲು ಮುಂದಾಗುವುದಿಲ್ಲ ಎಂದು ಹೇಳಿದರು.

480 ಕೋಟಿ ಬಾಕಿ: ರಾಜ್ಯದಲ್ಲಿ ಬೆಳಗಾವಿ, ಬಾಗಲಕೋಟೆ, ಹಳಿಯಾಳ, ಕಲಘಟಗಿ, ವಿಜಯಪುರ, ಕಲುºರ್ಗಿ, ಬೀದರ್‌ ಮತ್ತು ಮಂಡ್ಯ ಜಿಲ್ಲೆಗಳ ಕಾರ್ಖಾನೆಗಳು ರೈತರಿಗೆ 480 ಕೋಟಿ ರೂ. ಬಾಕಿ ಉಳಿಸಿಕೊಂಡಿವೆ. ಸಚಿವ ರಮೇಶ್‌ ಜಾರಕಿಹೊಳಿ ಅವರ ಕಾರ್ಖಾನೆಯೇ 19 ಕೋಟಿ ರೂ. ಬಾಕಿ ಕೊಡಬೇಕಿದೆ. ಬಾಕಿ ಉಳಿಸಿಕೊಂಡಿರುವ ಕಾರ್ಖಾನೆಗಳನ್ನು ಸರ್ಕಾರವೇ ಬಂದ್‌ ಮಾಡಿಸಬೇಕು ಎಂದು ಆಗ್ರಹಿಸಿದರು.

ಕಳೆದ 14 ತಿಂಗಳಿಂದ ಬಾಕಿ ಪಾವತಿಸದಿರುವುದರಿಂದ ಕಬ್ಬು ಬೆಳೆಗಾರರ ಹೋರಾಟ ತಾರಕಕ್ಕೇರಿದೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಹೋರಾಟಮಾಡುತ್ತಿರುವ ರೈತರನ್ನು ದರೋಡೆಕೋರರು, ಗೂಂಡಾಗಳು ಎಂದು ಕರೆದಿರುವುದು ಖಂಡನೀಯ. ಕೂಡಲೇ ಮುಖ್ಯಮಂತ್ರಿಯವರು ನಾಡಿನ ರೈತರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು. 

Advertisement

ರಾಜ್ಯಾದ್ಯಂತ ಹೋರಾಟ: ರಾಜಕೀಯ ಪಕ್ಷಗಳನ್ನು ನಂಬಿ ನಾವು ಹೋರಾಟ ಮಾಡುತ್ತಿಲ್ಲ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಂಗಳವಾರ ವಿಧಾನಸೌಧದಲ್ಲಿ ಕರೆದಿರುವ ಸಭೆಯಲ್ಲಿ ಸಮಸ್ಯೆ ಇತ್ಯರ್ಥ ಪಡಿಸದಿದ್ದರೆ ಬುಧವಾರದಿಂದ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸಲಾಗುವುದು. ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಬಿಡಲ್ಲ. ಸರ್ಕಾರ ಪೊಲೀಸ್‌ ಬಲಬಳಸಿ ರೈತರ ಚಳವಳಿಯನ್ನು ಹತ್ತಿಕ್ಕಲು ಯತ್ನಿಸುವುದನ್ನು ಸಹಿಸಲ್ಲ ಎಂದು ಎಚ್ಚರಿಸಿದರು.

ಜಾರ್ಜ್‌ ನಾಪತ್ತೆ: ಸಕ್ಕರೆ ಸಚಿವ ಕೆ.ಜೆ.ಜಾರ್ಜ್‌ ಕಬ್ಬು ಬೆಳೆಗಾರರ ಹೋರಾಟ ತಾರಕಕ್ಕೇರಿದ್ದರೂ ನಾಪತ್ತೆಯಾಗಿದ್ದಾರೆ ಎಂದು ಟೀಕಿಸಿದರು.
ಸಂಘದ ಮಹಿಳಾ ಘಟಕದ ಮೈಸೂರು ಜಿಲ್ಲಾಧ್ಯಕ್ಷೆ ಪುಷ್ಪಾ ಪ್ರಸಾದ್‌ ಮಾತನಾಡಿ, ಮಹಿಳೆಯ ಬಗ್ಗೆ ಹಗುರವಾಗಿ ಮಾತನಾಡಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕೂಡಲೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು. ಸಂಘದ ಪದಾಧಿಕಾರಿಗಳಾದ ವೆಂಕಟೇಶ್‌, ಮಂಜುನಾಥ್‌ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next