Advertisement

ಬಿಜೆಪಿ ವಿರುದ್ಧ ಎಚ್‌ಡಿಕೆ ವಾಗ್ಧಾಳಿ; ರಾಜ್ಯದಲ್ಲಿ ಫಾಕ್ಸ್‌ಕಾನ್‌ ಹೂಡಿಕೆ ಒಪ್ಪಂದ ಗೊಂದಲ

09:19 PM Mar 05, 2023 | Team Udayavani |

ಬೆಂಗಳೂರು: ಐಫೋನ್‌ ತಯಾರಿಸುವ ತೈವಾನ್‌ ದೇಶದ ಫಾಕ್ಸ್‌ಕಾನ್‌ ಕಂಪೆನಿ ರಾಜ್ಯದಲ್ಲಿ ಹೂಡಿಕೆ ಸಂಬಂಧ ನೀಡಿರುವ ಸ್ಪಷ್ಟೀಕರಣವನ್ನು ಮುಂದಿಟ್ಟುಕೊಂಡು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.

Advertisement

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಕುಮಾರಸ್ವಾಮಿ, ರಾಜ್ಯ ಬಿಜೆಪಿ ಸರಕಾರದ್ದು ಪ್ರಚಾರ ಜಾಸ್ತಿ, ಫ‌ಲಿತಾಂಶ ನಾಸ್ತಿ ಎನ್ನುವ ನೀತಿ. ಇದೇ ಅದರ ಘೋಷವಾಕ್ಯ, ಧ್ಯೇಯವಾಕ್ಯ. ಜಾಹೀರಾತುಗಳಲ್ಲಿಯೇ ಜಳಕ ಮಾಡುತ್ತಿರುವ ಈ ಸರಕಾರಕ್ಕೆ ಜನರ ಕ್ಷೇಮ, ಅಭಿವೃದ್ಧಿಯ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಉದ್ಯೋಗ ಸೃಷ್ಟಿ ಬಗ್ಗೆ ಎಳ್ಳಷ್ಟೂ ದೂರದೃಷ್ಟಿಯಿಲ್ಲ.

ಐಫೋನ್‌ ತಯಾರಿಸುವ ತೈವಾನ್‌ ದೇಶದ ಫಾಕ್ಸ್‌ಕಾನ್‌ ಕಂಪೆನಿ ರಾಜ್ಯದಲ್ಲಿ ಹೂಡಿಕೆ ಮಾಡಲು ಬಂದಿದೆ ಎಂದು ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಇಬ್ಬರು ಸಚಿವರು ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಂಡರು. ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಸಹಿ ಪತ್ರಗಳನ್ನು ಹಿಡಿದು ಮಾಧ್ಯಮಗಳಿಗೆ ಪೋಸು ಕೊಟ್ಟರು.

ಆ ಬೆನ್ನಲ್ಲೇ ತೈವಾನ್‌ನ ತೈಪೆಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಕಂಪೆನಿ, ಕರ್ನಾಟಕದಲ್ಲಿ ಹೂಡಿಕೆ ಮಾಡುವ ಯಾವುದೇ ನಿರ್ಣಾಯಕ ಒಪ್ಪಂದ ಆಗಿಲ್ಲ ಎಂದು ಸ್ಪಷ್ಟಪಡಿಸಿದೆ. ಹಾಗಾದರೆ ಶುಕ್ರವಾರ ಮುಖ್ಯಮಂತ್ರಿಯವರ ಸಮಕ್ಷಮದಲ್ಲಿ ಆಗಿದ್ದೇನು? ಅದೇನು ಒಪ್ಪಂದವೋ ಅಥವಾ ಪ್ರಚಾರದ ಗಿಮಿಕ್ಕೋ ಎಂಬುದನ್ನು ಜನರಿಗೆ ತಿಳಿಸಬೇಕಿದೆ ಎಂದು ಹೇಳಿದ್ದಾರೆ.

ಕೋವಿಡ್‌ ಬಳಿಕದ ಕಾಲದಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆಗೆ ಬಹಳ ಮಹತ್ವವಿದೆ. ಸರಕಾರ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಎಡವಟ್ಟು ಮಾಡಿಕೊಂಡ ಕಾರಣಕ್ಕೆ ಓಲಾ ಕಂಪೆನಿ ಕರ್ನಾಟಕದ ಕೈ ಜಾರಿತು. 7,614 ಕೋಟಿ ರೂ. ಹೂಡಿಕೆ ತಮಿಳುನಾಡು ರಾಜ್ಯದ ಪಾಲಾಯಿತು. ಚುನಾವಣೆ, ಪ್ರಚಾರಕ್ಕಿಂತ ಜನರ ಬದುಕು ಮುಖ್ಯ. ಈ ಬಿಜೆಪಿ ಸರಕಾರಕ್ಕೆ ಅಧಿಕಾರವೇ ಮುಖ್ಯ. ಕನ್ನಡಿಗರ ಕಷ್ಟಗಳಿಗೆ ಕೊನೆ ಇಲ್ಲ ಎನ್ನುವಂತಾಗಿದೆ ಎಂದು ವಾಗ್ಧಾಳಿ ನಡೆಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next