Advertisement

ಕ್ಷೇತ್ರಗಳ ಅನುದಾನ ಕಡಿತಕ್ಕೆ ಎಚ್‌ಡಿಕೆ ಆಕ್ರೋಶ

10:44 PM Sep 20, 2019 | Lakshmi GovindaRaju |

ಬೆಂಗಳೂರು: ಶಾಸಕರ ಕ್ಷೇತ್ರಗಳಿಗೆ ನಿಗದಿಪಡಿಸಿದ್ದ ಅನುದಾನ ಕಡಿತಕ್ಕೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದು, ಬಿ.ಎಸ್‌. ಯಡಿಯೂರಪ್ಪ ಹಾಗೂ ಬಿಜೆಪಿ ಹೊಸ ಪರಂಪರೆಗೆ ನಾಂದಿ ಹಾಡಿದ್ದಾರೆ ಎಂದು ಕುಟುಕಿದ್ದಾರೆ.

Advertisement

ಬಹುಮತದ ಸರ್ಕಾರ ನಿಗದಿಪಡಿಸಿದ್ದ ವಿಧಾನಸಭೆ ಕ್ಷೇತ್ರಗಳ ಅಭಿವೃದ್ಧಿಯ ಅನುದಾನವನ್ನು ಕಡಿತ ಮಾಡಿ ಪಕ್ಷಪಾತಿ ನಿಲುವು ಪ್ರತಿಪಾದಿಸಿದ್ದಾರೆಂದು ದೂರಿದ್ದಾರೆ. ಶಾಸಕರ ಕ್ಷೇತ್ರ ಗಳಿಗೆ ಅಗತ್ಯವಿದ್ದರೆ ಮತ್ತಷ್ಟು ನೀಡಲಿ. ಕೊಟ್ಟಿದ್ದನ್ನು ಕಿತ್ತುಕೊಳ್ಳುವುದು ಯಾವ ನ್ಯಾಯ? ಇದ ನಾಚೀಗೇಡಿನ ರಾಜಕೀಯ ಎಂದು ಟೀಕಿಸಿದ್ದಾರೆ.

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಲಾದ ಬಡವರ ಬಂಧು ಯೋಜನೆಗೆ ಆರ್ಥಿಕ ನೆರವು ನೀಡಿರುವ ಬಗ್ಗೆಯೂ ಟ್ವೀಟ್‌ ಮಾಡಿರುವ ಕುಮಾರ ಸ್ವಾಮಿ, ನಿಮಗೆ ದ್ವೇಷ ಇದ್ದದ್ದು ನನ್ನ ಮೇಲಲ್ಲವೇ? ಯಡಿಯೂರಪ್ಪನವರೇ. ಆದರೆ, ಬಡವರ ಮೇಲೆಕೆ ನಿಮ್ಮ ಕೋಪ ? ಎಂದು ಪ್ರಶ್ನಿಸಿದ್ದಾರೆ. ಸೇಡಿನ ರಾಜಕೀಯ ಮಾಡುವುದಿಲ್ಲ ಎಂದು ಸದನದಲ್ಲಿ ಹೇಳಿದ್ದ ನೀವು ಅಧಿಕಾರ ವಹಿಸಿಕೊಂಡ ನಂತರ ನನ್ನ ಸರ್ಕಾರದ ಕಾರ್ಯಕ್ರಮಗಳ ವಿಷಯದಲ್ಲಿ ಮಾಡಿದ್ದೆಲ್ಲವೂ ಸೇಡಿನ ಕ್ರಮ ಎಂದು ದೂರಿದ್ದಾರೆ

ಪ್ರತಿಭಟನೆ: ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕೈಗೊಂಡಿದ್ದ ಯೋಜನೆಗಳ ರದ್ದು, ಶಾಸಕರ ಅನುದಾನ ಕಡಿತ ವಿಚಾರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲು ಜೆಡಿಎಸ್‌ ತೀರ್ಮಾನಿಸಲಾಗಿದೆ. ಅನುದಾನ ಕಡಿತ ರಾಜಕೀಯ ದ್ವೇಷದ ಕ್ರಮ ಎಂದು ಜೆಡಿಎಸ್‌ ಕ್ಷೇತ್ರಗಳಲ್ಲಿ ಜನರಿಗೆ ಮನವರಿಕೆ ಮಾಡಿಕೊಟ್ಟು ಕ್ಷೇತ್ರವಾರು ಪ್ರತಿಭಟನೆ ನಡೆಸುವಂತೆ ಶಾಸಕರಿಗೆ ಸೂಚನೆ ನೀಡಲಾಗಿದೆ.

ಕಾಂಗ್ರೆಸ್‌ ಶಾಸಕರ ಕ್ಷೇತ್ರಗಳಲ್ಲಿನ ಅನುದಾನವೂ ಕಡಿತವಾಗಿದ್ದು, ಈ ವಿಷಯಕ್ಕೆ ಕುರಿತು ಜಂಟಿ ಪ್ರತಿಭಟನೆ ಹಮ್ಮಿಕೊಳ್ಳಲು ಪಕ್ಷದ ಕೆಲವರು ಸಲಹೆ ನೀಡಿದ್ದು ಈ ಬಗ್ಗೆ ಕಾಂಗ್ರೆಸ್‌ ನಾಯಕರ ಜತೆ ಮಾತುಕತೆ ನಡೆಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

ಬಿಎಸ್‌ವೈಯಿಂದ ದ್ವೇಷದ ರಾಜಕಾರಣ: ದೇವೇಗೌಡ
ಬೆಂಗಳೂರು: ಸಿಎಂ ಯಡಿಯೂರಪ್ಪ ದ್ವೇಷದ ರಾಜ ಕಾರಣ ಮಾಡುತ್ತಿದ್ದಾರೆಂದು ಮಾಜಿ ಪ್ರಧಾನಿ ದೇವೇಗೌಡರು ಆರೋಪಿಸಿದ್ದಾರೆ. ಜೆಡಿಎಸ್‌ ಕಚೇರಿಯಲ್ಲಿ ಮಾತನಾಡಿ, ಅಧಿಕಾರ ಯಾರಿಗೂ ಶಾಶ್ವತವಲ್ಲ. ದ್ವೇಷದ ರಾಜಕಾರಣ ಬಹಳ ದಿನ ನಡೆಯಲ್ಲ. ಇದನ್ನು ಅರ್ಥ ಮಾಡಿಕೊಂಡರೆ ಒಳ್ಳೆಯದು ಎಂದರು. ಬಿಎಸ್‌ವೈ ಕಾರ್ಯವೈಖರಿ ಬಗ್ಗೆ ಕುಮಾರಸ್ವಾಮಿ ಟೀಕಿಸಿ ಟ್ವೀಟ್‌ ಮಾಡಿರುವುದು ಸರಿಯಾಗಿಯೇ ಇದೆ.

ರಾಜ್ಯದ ಜನತೆಯೂ ಎಲ್ಲವನ್ನು ಗಮನಿಸುತ್ತಿದ್ದಾರೆಂದು ತಿಳಿಸಿದರು. ರಾಜಕಾರಣ ಎಂಬುದು ನಿಂತ ನೀರಲ್ಲ. ನನ್ನ ರಾಜಕಾರಣವೂ ನಿಲ್ಲಲ್ಲ, ಸಿದ್ದರಾಮಯ್ಯ, ಯಡಿಯೂರಪ್ಪ ಅವರದೂ ನಿಲ್ಲಲ್ಲ. ನಾನು ಮಾತನಾಡುವುದು ಬಹಳ ಇದೆ. ಸೂಕ್ತ ಸಮಯದಲ್ಲಿ ಮಾತನಾಡುತ್ತೇನೆ ಎಂದರು. ಜೆಡಿಎಸ್‌ ಸಂಘಟನೆ ಮಾಡಲು ಜಿಲ್ಲಾವಾರು ಸಭೆಗಳನ್ನು ನಡೆಸಲಾಗುತ್ತಿದೆ. ಸದ್ಯದಲ್ಲೇ ನಾನು ರಾಜ್ಯ ಪ್ರವಾಸ ಕೈಗೊಳ್ಳುತ್ತೇನೆಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next