ನವದೆಹಲಿ:ಈ ದೇಶವನ್ನು ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರ ಮತ್ತು ಸ್ವಜಪಕ್ಷಪಾತದಿಂದ ಕತ್ತಲೆಯ ಕೂಪದಲ್ಲಿಯೇ ಇರಿಸಿತ್ತು ಎಂದು ಕಿಡಿಕಾರಿದ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧವೂ ವಾಗ್ದಾಳಿ ನಡೆಸಿದರು.
ನವದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಮಂಡಳಿಯ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಶನಿವಾರ ಮಾತನಾಡಿದರು.
ಕರ್ನಾಟಕದಲ್ಲಿ ಇದು ಮೈತ್ರಿ ಟ್ರೇಲರ್ ಅಷ್ಟೇ. ಮೈತ್ರಿ ಸರ್ಕಾರಕ್ಕೆ ಕೆಲತಿಂಗಳಷ್ಟೇ ಆಗಿದೆ. ಕಾಂಗ್ರೆಸ್ ಪಕ್ಷ ಎಚ್.ಡಿ.ಕುಮಾರಸ್ವಾಮಿಯನ್ನು ಸಿಎಂ ಬದಲು ಕ್ಲರ್ಕ್ ಮಾಡಿದೆ ಎಂದು ವ್ಯಂಗ್ಯವಾಡಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಸಿಎಂ ಕ್ಲರ್ಕ್ ಆಗಿ ಕೆಲಸ ಮಾಡುವ ವಾತಾವರಣ ನಿರ್ಮಾಣ ಮಾಡಿದೆ.. ಮೈತ್ರಿ ಸರ್ಕಾರವನ್ನು ಕಾಂಗ್ರೆಸ್ ಕಾಡುತ್ತಿದೆ. ಇದು ಮೈತ್ರಿ ಸರ್ಕಾರ ನಡೆಸುತ್ತಿರುವ ಕಾಂಗ್ರೆಸ್ ಸ್ಥಿತಿ ಎಂದು ಚಾಟಿ ಬೀಸಿದರು.
ಕಾಂಗ್ರೆಸ್ ಕೈಯಲ್ಲಿ ಕುಮಾರಸ್ವಾಮಿ ಅಸಹಾಯಕರಾಗಿ ವಿಲವಿಲ ಒದ್ದಾಡುತ್ತಿದ್ದಾರೆ. ಮಹಾಘಟಬಂಧನ್ ಟ್ರೇಲರ್ ಕೂಡಾ ಜೋರಾಗಿಯೇ ಇತ್ತು. ತೆಲಂಗಾಣದಲ್ಲೂ ಘಟಬಂಧನ್ ಗೆ ಸೋಲಾಯ್ತು..ನಾನು ಮುಖ್ಯಮಂತ್ರಿಯಲ್ಲ, ಕ್ಲರ್ಕ್ ಎಂದು ಕುಮಾರಸ್ವಾಮಿಯೇ ಹೇಳಿರುವುದಾಗಿ ತಿಳಿಸಿದರು.