ಬನ್ನೂರು: ತಮಗೆ ದೊರೆತ 20 ತಿಂಗಳ ಅಧಿಕಾರ ಅವಧಿಯಲ್ಲಿ ರಾಜ್ಯದಲ್ಲಿ ಎಂದೂ ಕಾಣದ ಅಭಿವೃದ್ಧಿ ಮಾಡಿದ್ದರಿಂದ ರಾಜ್ಯದಲ್ಲಿ ಜೆಡಿಎಸ್‌ನ್ನು ಎಲ್ಲರೂ ಹೆಚ್ಚಾಗಿ ಮೆಚ್ಚುತ್ತಿದ್ದಾರೆಂದು ಜೆಡಿಎಸ್ ಮುಖಂಡ ಎಸ್. ಶಂಕರ್ ತಿಳಿಸಿದರು.
ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರನ್ನು ಭೇಟಿ ಮಾಡಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಗ್ರಾಮವಾಸ್ತವ್ಯ, ಜನತಾದರ್ಶನ ಮೊದಲಾದ ಕಾರ್ಯಕ್ರಮಗಳ ಮೂಲಕ ಮನೆ ಮಾತಾಗಿದ್ದಾರೆ. ರಾಜ್ಯ ಸರ್ಕಾರ ರೂಪಿಸುತ್ತಿರುವ ಬಹುತೇಕ ಎಲ್ಲಾ ಭಾಗ್ಯಗಳು ಕುಮಾರಸ್ವಾಮಿಯವರು ನೀಡಿದ ಕೊಡುಗೆಗಳ ಮುಂದುವರಿದ ಭಾಗ ಎಂದು ತಿಳಿಸಿದರು.
ನಮ್ಮದು ಒಂದು ವಿಶಾಲ ಕುಟುಂಬ. ಇದರಲ್ಲಿ ಎಲ್ಲರೂ ಆಕಾಂಕ್ಷಿಗಳೇ, ವರಿಷ್ಟರು ಯಾರಿಗೆ ಟಿಕೆಟ್ ನೀಡಿದರೂ ಅವರ ಪರ ಕಾರ್ಯ ನಿರ್ವಹಿಸುವುದಾಗಿ ತಿಳಿಸಿದ ಅವರು, ಮನೆಯಲ್ಲಿ ನಡೆಯುವ ಎಲ್ಲಾ ಮಾತುಗಳನ್ನು ಮಾಧ್ಯಮದ ಮುಂದೆ ತೋರ್ಪಡಿಸುವುದು ಸರಿಯಲ್ಲ ಎಂದರು.
ಈ ಭಾಗದಲ್ಲಿ ನಾವು ಎದುರಾಳಿಯನ್ನಾಗಿ ಎದುರಿಸಬೇಕಾಗಿರುವುದು ಲೋಕೋಪಯೋಗಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಹಾಗೂ ಅವರ ಮಗ ಸುನೀಲ್ ಬೋಸ್. ಅವರ ಆಟಕ್ಕೆ ಪ್ರತಿಯಾಗಿ ನಾವು ಕಾರ್ಯವನ್ನು ನಿರ್ವಹಿಸುವ ಮೂಲಕ ರಾಜ್ಯದಲ್ಲಿ ಜೆಡಿಎಸ್‌ನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದು ತಿಳಿಸಿದರು.
ಬನ್ನೂರು ರಾಜಣ್ಣ ಮಾತನಾಡಿ, ಶಂಕರ್‌ರವರೇ ಕ್ಷೇತ್ರಕ್ಕೆ ಅತ್ಯಂತ ಸೂಕ್ತವಾದವರಾಗಿದ್ದು, ಮುಂದಿನ ದಿನಗಳಲ್ಲಿ ಬನ್ನೂರಿನಲ್ಲಿ ನಡೆಸಿದ ಬೃಹತ್ ಸಮಾವೇಶದಂತೆ ನರಸೀಪುರದಲ್ಲೂ ಬೃಹತ್ ಸಮಾವೇಶ ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಗುತ್ತಿದೆ ಎಂದರು. ರಾಧಾಕೃಷ್ಣ, ಹೆಗ್ಗೂರು ಶಂಬೂರಾಜ್, ಬನ್ನೂರು ರಾಜಣ್ಣ, ಶಿವಣ್ಣ, ಮಲಿಯೂರು ಶಿವಕುಮಾರ್, ಶಿವನಂಜೇಗೌಡ, ಮಹೇಶ್, ರಾಧಾಕೃಷ್ಣ, ಇರ್ಷಾದ್ ಖಾನ್ ಮತ್ತಿತರರಿದ್ದರು.