Advertisement

ಜಿಟಿಡಿ ಜತೆಗೆ ಅಂತರ ಕಾಯ್ದುಕೊಂಡ ಎಚ್‌ಡಿಕೆ

12:18 PM May 13, 2017 | Team Udayavani |

ಮೈಸೂರು: ಮಾಜಿ ಸಂಸದ ಎಚ್‌.ವಿಶ್ವನಾಥ್‌ ಕಾಂಗ್ರೆಸ್‌ ತ್ಯಜಿಸಿ, ಜೆಡಿಎಸ್‌ ಸೇರುವ ಅಧಿಕೃತ ಪ್ರಕ್ರಿಯೆಯಷ್ಟೇ ಬಾಕಿ ಇದೆ. 2018ರ ವಿಧಾನಸಭಾ ಚುನಾವಣೆಗೆ ಹುಣಸೂರು ಕ್ಷೇತ್ರದಿಂದ ಎಚ್‌.ವಿಶ್ವನಾಥ್‌ ಅವರೇ ಜೆಡಿಎಸ್‌ ಅಭ್ಯರ್ಥಿ ಎಂಬುದೂ ಕೂಡ ಪಕ್ಕಾ ಆಗಿದ್ದು, ಅಧಿಕೃತ ಘೋಷಣೆಯಷ್ಟೇ ಬಾಕಿ ಉಳಿದಿದೆ.

Advertisement

ಈ ನಡುವೆ ಮಾಜಿ ಸಚಿವ ಎಚ್‌.ಡಿ.ರೇವಣ್ಣ ರ ಪುತ್ರ ಪ್ರಜ್ವಲ್‌ ರೇವಣ್ಣ  ಹುಣಸೂರು ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಹೆಸರಲ್ಲಿ ಹಳ್ಳಿ ಹಳ್ಳಿ ಸುತ್ತುತ್ತಾ ಮುಖಂಡರ ಮನೆಗಳಿಗೆ ಭೇಟಿ ನೀಡಿ ಉಪಾಹಾರ ಕೂಟ, ಭೋಜನ ಕೂಟಗಳಲ್ಲಿ ಪಾಲ್ಗೊಳ್ಳುತ್ತಿರುವುದು ಗೊಂದಲಕ್ಕೆ ಕಾರಣವಾಗಿದೆ.

ಹಾಗೆ ನೋಡಿದರೆ ಜಿಲ್ಲೆಯಲ್ಲಿರುವ ಜೆಡಿಎಸ್‌ನ ಮೂವರು ಶಾಸಕರೂ ಮೂರು ದಿಕ್ಕುಗಳಲ್ಲಿದ್ದು, ಜಿಲ್ಲೆಯ ದಳಪತಿಯಾರು ಎಂಬುದು ಖಚಿತವಾಗದೆ ಕಾರ್ಯಕರ್ತರು ಗೊಂದಲದಲ್ಲಿದ್ದಾರೆ. ಪಕ್ಷದಲ್ಲಿ ಹಿರಿಯರಾಗಿರುವ ಮಾಜಿ ಸಚಿವ ಜಿ.ಟಿ.ದೇವೇಗೌಡರ ಜತೆಗೆ ಎಚ್‌.ಡಿ.ಕುಮಾರಸ್ವಾಮಿ ಅಂತರ ಕಾಯ್ದುಕೊಂಡಿರುವುದು ಹಾಗೂ ಗೌಡರ ಕುಟುಂಬಕ್ಕೆ ಅತ್ಯಾಪ್ತರಾಗಿರುವ ಕೆ.ಆರ್‌.ನಗರ ಶಾಸಕ ಸಾ.ರಾ.ಮಹೇಶ್‌ಗೆ ಪಕ್ಷದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಸಿಗುತ್ತಿರುವುದು ಕೂಡ ಈ ಎಲ್ಲ ಗೊಂದಲಗಳಿಗೆ ಕಾರಣ ಎನ್ನಲಾಗುತ್ತಿದೆ.

ಗೊಂದಲ ನಿವಾರಣೆ ಮಾಡಬೇಕಾದ ಎಚ್‌.ಡಿ.ಕುಮಾರಸ್ವಾಮಿ ಕೂಡ ಈ ವಿಷಯದಲ್ಲಿ ಮೌನ ತಳೆದಿದ್ದಾರೆ. ಮೊನ್ನೆಯಷ್ಟೆ ಮೈಸೂರಿನಲ್ಲಿ ನಡೆದ ಪಕ್ಷದ ಬೂತ್‌ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಈ ಗೊಂದಲಗಳು ಪ್ರತಿಧ್ವನಿಸಿವೆ.

ಶಾಸಕ ಜಿ.ಟಿ.ದೇವೇಗೌಡ ಕುಟುಂಬ ಸಮೇತ ತಿರುಪತಿಗೆ ತೆರಳಿದ್ದ ಸಂದರ್ಭದಲ್ಲಿ ಶಾಸಕ ಸಾ.ರಾ.ಮಹೇಶ್‌ ಮುತುವರ್ಜಿ ವಹಿಸಿ ಬೂತ್‌ ಮಟ್ಟದ ಕಾರ್ಯಕರ್ತರ ಸಭೆ ಆಯೋಜಿಸಿ ಕುಮಾರಸ್ವಾಮಿ ಅವರ ಪ್ರವಾಸವನ್ನು ದಿಢೀರ್‌ ನಿಗದಿಪಡಿಸಿದ್ದಾರೆ. ಈ ವಿಷಯ ತಿಳಿದ ಜಿ.ಟಿ.ದೇವೇಗೌಡ ತಿರುಪತಿಯಿಂದ ಬೆಂಗಳೂರಿಗೆ ವಾಪಸ್ಸಾಗಿ ಎಚ್‌.ಡಿ.ಕುಮಾರಸ್ವಾಮಿಗೆ ದೂರವಾಣಿ ಕರೆ ಮಾಡಿದರೂ ಸ್ವೀಕರಿಸಲಿಲ್ಲ ಎನ್ನಲಾಗಿದೆ.

Advertisement

ಇದರಿಂದಾಗಿ ಇಬ್ಬರು ನಾಯಕರ ನಡುವೆ ಮುನಿಸು ಮುಂದುವರಿದಿದೆ. ಇದನ್ನು ಶಮನ ಮಾಡುವ ಬದಲಿಗೆ ಉರಿವ ಬೆಂಕಿಗೆ ತುಪ್ಪಸುರಿಯುವ ಕೆಲಸವನ್ನು ಒಂದಷ್ಟು ಮಂದಿ ಮಾಡುತ್ತಿರುವುದರಿಂದ ಪಕ್ಷದಲ್ಲಿ ಈ ಎಲ್ಲ ಗೊಂದಲಗಳಿಗೆ ಕಾರಣವಾಗಿದೆ ಎನ್ನುತ್ತಾರೆ ಜಿಟಿಡಿ ಬೆಂಬಲಿಗರಾದ ಜೆಡಿಎಸ್‌ನ ಕೆಲ ಮುಖಂಡರು.

ಸಾ.ರಾ.ಮಹೇಶ್‌ ಕೆ.ಆರ್‌.ನಗರ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಎಚ್‌.ವಿಶ್ವನಾಥ್‌ರನ್ನು ಜೆಡಿಎಸ್‌ಗೆ ಕರೆತಂದು ಹುಣಸೂರು ಕ್ಷೇತ್ರಕ್ಕೆ ಸಾಗಾಕುವ ಪ್ರಯತ್ನ ನಡೆಸಿದ್ದರೆ, ಜಿ.ಟಿ.ದೇವೇಗೌಡರ ಜತೆಗೆ ಅಷ್ಟಕಷ್ಟೆ ಎಂಬಂತಿರುವ ಎಚ್‌.ಡಿ.ಕೋಟೆ ಶಾಸಕ ಎಸ್‌.ಚಿಕ್ಕಮಾದು ಅವರು ಪ್ರಜ್ವಲ್‌ ರೇವಣ್ಣ ಅವರನ್ನು ಹುಣಸೂರಿಗೆ ಕರೆತಂದು ಓಡಾಡಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಎಚ್‌.ವಿಶ್ವನಾಥ್‌ ಕಾದು ನೋಡುವ ತಂತ್ರ ಅನುಸರಿಸುತ್ತಿರುವುದು ಕೂಡ ಗೊಂದಲ ಹೆಚ್ಚಲು ಕಾರಣವಾಗಿದೆ. ಹುಣಸೂರು ಕ್ಷೇತ್ರದ ಕುರುಬ ಸಮುದಾಯದ ಮುಖಂಡರು ಈಗಾಗಲೇ ವಿಶ್ವನಾಥ್‌ ಜೆಡಿಎಸ್‌ ಅಭ್ಯರ್ಥಿ ಎಂಬಂತೆ ಮಾತನಾಡತೊಡಗಿದ್ದರೆ, ಒಕ್ಕಲಿಗ ಸಮುದಾಯದ ಕೆಲ ಯುವ ಮುಖಂಡರುಗಳು ಪ್ರಜ್ವಲ್‌ ರೇವಣ್ಣ ಪರ ಬ್ಯಾಟಿಂಗ್‌ ಮಾಡುತ್ತಿದ್ದಾರೆ.

ಸಾಮಾಜಿಕ ಜಾಲತಾಣ: ಹಳ್ಳಿ ಹಳ್ಳಿಗಳನ್ನು ಸುತ್ತುವ ಜತೆಗೆ ಪ್ರಜ್ವಲ್‌ ರೇವಣ್ಣ ಹುಣಸೂರು ಎಂಬ ಹೆಸರಲ್ಲಿ ಫೇಸ್‌ಬುಕ್‌ ಖಾತೆ ಹೊಂದಿರುವ ಪ್ರಜ್ವಲ್‌ ಅವರು ಸಾಮಾಜಿಕ ಜಾಲತಾಣದ ಮೂಲಕ ಕ್ಷೇತ್ರದ ಜನರ ನಾಡಿ ಮಿಡಿತ ಅರಿಯುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರಜ್ವಲ್‌ ಅವರ ಅಧಿಕೃತ ಖಾತೆಯ ಜತೆಗೆ ಯುವ ದಳಪತಿ ಪ್ರಜ್ವಲ್‌ ರೇವಣ್ಣ ಹುಣಸೂರು ಬಳಗ, ಪ್ರಜ್ವಲ್‌ ರೇವಣ್ಣ ಯೂತ್‌ ಬ್ರಿಗೇಡ್‌,

ಹುಣಸೂರು ಎಂಬ ತಾಣಗಳಲ್ಲೂ ಚರ್ಚೆಗಳು ನಡೆಯುತ್ತಿವೆ. ತಮ್ಮ ಅಧಿಕೃತ ಖಾತೆಯಲ್ಲೇ ಪ್ರಜ್ವಲ್‌ ರೇವಣ್ಣ ಅವರು, ಪಕ್ಷ ಸಂಘಟನೆ ನನ್ನ ಗುರಿ, ಜಿ.ಟಿ.ದೇವೇಗೌಡರು, ಎಸ್‌.ಚಿಕ್ಕಮಾದು ನಮ್ಮ ನಾಯಕರು. ಎಚ್‌.ಡಿ.ದೇವೇಗೌಡರು, ಕುಮಾರಣ್ಣ, ರೇವಣ್ಣ ಗೆ ನಾಯಕರು. ಒಮ್ಮತದ ತೀರ್ಮಾನಕ್ಕೆ ಬದ್ಧ. ಕುಮಾರಣ್ಣ ಮುಖ್ಯಮಂತ್ರಿ ಆಗುವುದು ನಮ್ಮ ಅಭಿಲಾಷೆ ಎಂದು ಬರೆದುಕೊಂಡಿದ್ದಾರೆ.

ಈ ಖಾತೆಯಲ್ಲಿ ಅವರನ್ನು ಹಿಂಬಾಲಿಸುತ್ತಿರುವ ಯುವ ನಾಯಕರುಗಳು ಅಲ್ಪಾವಧಿಯಲ್ಲಿ ನಮ್ಮ ಮನಗೆದ್ದ ನಾಯಕರು ನೀವು. ನಮ್ಮ ಹಲವಾರು ಕನಸುಗಳಿಗೆ ಜೀವ ತುಂಬಿದವರು. ದಯಮಾಡಿ ಬನ್ನಿ. ನಮ್ಮ ಜೀವ ಒತ್ತೆ ಇಟ್ಟಾದರೂ ನಿಮ್ಮ ಗೆಲ್ಲಿಸುವೆವು. ಹುಣಸೂರಲ್ಲಿ ಸ್ಪರ್ಧೆ ಮಾಡಿ ಅಣ್ಣ ಎಂದು ಅನಿಸಿಕೆ ವ್ಯಕ್ತಪಡಿಸಿದ್ದಾರೆ.

* ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next