Advertisement

HDK ದಿಲ್ಲಿ ಭೇಟಿ: ಅಮಿತ್‌ ಶಾ ಜತೆ ಮಾತುಕತೆ

11:30 PM Jan 17, 2024 | Team Udayavani |

ಬೆಂಗಳೂರು: ದಿಢೀರ್‌ ರಾಜಕೀಯ ಬೆಳವಣಿಗೆಯೊಂದರಲ್ಲಿ ದಿಲ್ಲಿಗೆ ತೆರಳಿರುವ ಜೆಡಿಎಸ್‌ ನಾಯಕ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರು ಬುಧವಾರ ಸಂಜೆ ಕೇಂದ್ರ ಗೃಹಸಚಿವ ಅಮಿತ್‌ ಶಾ ಜತೆಗೆ ಮಹತ್ವದ ಸಭೆ ನಡೆಸಿದರು.

Advertisement

ಅಮಿತ್‌ ಶಾ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಮಾಜಿ ಸಿಎಂ ಜತೆಯಲ್ಲಿ ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖೀಲ್‌ ಕುಮಾರಸ್ವಾಮಿ ಹಾಗೂ ಮಾಜಿ ಸಂಸದ ಕುಪೇಂದ್ರ ರೆಡ್ಡಿ ಅವರೂ ಭಾಗಿಯಾಗಿದ್ದರು.

ಅಮಿತ್‌ ಶಾ ಜತೆ ಮೈತ್ರಿ ಸಹಿತ ರಾಜ್ಯ ರಾಜಕೀಯದ ಬಗ್ಗೆ 45 ನಿಮಿಷಕ್ಕೂ ಹೆಚ್ಚು ಕಾಲ ಸಮಾ ಲೋಚನೆ ನಡೆಸಿದ ಎಚ್‌ಡಿಕೆ, ರಾಜ್ಯದ ಪ್ರತಿಯೊಂದು ವಿದ್ಯಮಾನ ವನ್ನು ಅವರ ಗಮನಕ್ಕೆ ತಂದರು.

ಕ್ಷೇತ್ರ ಹಂಚಿಕೆ ಸಹಿತ ಜೆಡಿಎಸ್‌ ಅಧಿಕೃತವಾಗಿ ಎನ್‌ಡಿಎ ಮೈತ್ರಿಕೂಟಕ್ಕೆ ಸೇರುವ ಪ್ರಕ್ರಿಯೆಗಳೆಲ್ಲವನ್ನು ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ಮುಗಿದ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಜತೆ ಕೂತು ಚರ್ಚೆ ನಡೆಸಿದ ಬಳಿಕ ಅಂತಿಮಗೊಳಿಸೋಣ ಎಂದು ಶಾ ತಿಳಿಸಿದ್ದಾರೆ. ಅಲ್ಲದೆ, ರಾಜ್ಯದ 28 ಲೋಕಸಭೆ ಕ್ಷೇತ್ರಗಳೆಲ್ಲವನ್ನೂ ಎನ್‌ಡಿಎ ಮೈತ್ರಿಕೂಟ ಗೆದ್ದು ಮತ್ತೂಮ್ಮೆ ನರೇಂದ್ರ ಮೋದಿ ಅವರು ಭಾರತದ ಪ್ರಧಾನಮಂತ್ರಿ ಆಗಬೇಕು. ಅದಕ್ಕಾಗಿ ಕರ್ನಾಟಕದಲ್ಲಿ ಏನೆಲ್ಲ ಮಾಡಬೇಕೋ ಅದೆಲ್ಲವನ್ನೂ ಒಟ್ಟಾಗಿ ಮಾಡೋಣ. ಬಿಜೆಪಿ ಮತ್ತು ಜೆಡಿಎಸ್‌ ಎರಡೂ ಅತ್ಯಂತ ವಿಶ್ವಾಸ, ನಂಬಿಕೆಯ ಆಧಾರದ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ಎಲ್ಲ ನಿರ್ಧಾರಗಳನ್ನು ಮಾಡೋಣ ಎಂದು ಕುಮಾರಸ್ವಾಮಿ ಅವರಿಗೆ ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರಕ್ಕೆ ಒಂದು ವರ್ಷ ತುಂಬುವುದಕ್ಕೆ ಮೊದಲೇ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗಿದೆ. ರಾಜ್ಯ ಸರಕಾರದ ವೈಫ‌ಲ್ಯಗಳನ್ನು ಜನರ ಗಮನಕ್ಕೆ ಪರಿಣಾಮಕಾರಿಯಾಗಿ ತರುವ ನಿಟ್ಟಿನಲ್ಲಿ ಇಬ್ಬರೂ ನಾಯಕರು ಚರ್ಚೆ ನಡೆಸಿದರು.

ಮುಕ್ಕಾಲು ಗಂಟೆ ಕಾಲ ನಡೆದ ಈ ಸಭೆಯಲ್ಲಿ ಗೃಹ ಸಚಿವರ ಜತೆ ಎಲ್ಲ ವಿಷಯಗಳನ್ನು ಮುಕ್ತವಾಗಿ ಚರ್ಚಿಸಿದ್ದೇನೆ. ಕೇಂದ್ರದಲ್ಲಿ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬಂದು ಮತ್ತೂಮ್ಮೆ ನರೇಂದ್ರ ಮೋದಿ ಅವರು ಪ್ರಧಾನಿ ಆಗಬೇಕು. ಈ ಬಗ್ಗೆ ಜೆಡಿಎಸ್‌ ಮತ್ತು ಬಿಜೆಪಿ ಒಟ್ಟಾಗಿ ಕೆಲಸ ಮಾಡುವ ಬಗ್ಗೆ ಮಾತುಕತೆ ನಡೆಸಿದ್ದೇವೆ.
-ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next