ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತದ್ವಿರುದ್ಧ ದಿಕ್ಕಿನಲ್ಲಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 12 ವರ್ಷಗಳ ನಂತರ ಜಂಟಿ ಸುದ್ದಿಗೋಷ್ಠಿ ನಡೆಸಿ ಒಂದೇ ವೇದಿಕೆಗೆ ಬರುವ ಮೂಲಕ ರಾಜಕೀಯ ರಂಗದಲ್ಲಿ ಸಂಚಲನ ಮೂಡಿಸಿದ್ದಾರೆ.
ಮುಂದಿನ ಲೋಕಸಭೆ ಚುನಾವಣೆಯನ್ನು ಗಮನವಿಟ್ಟುಕೊಂಡು ನಾವೆಲ್ಲಾ ಹಳೆಯದನ್ನು ಮರೆತು ಒಂದಾಗಿದ್ದೇವೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಹೇಳಿದ್ದಾರೆ.
ನಮಗೆ ರಾಜ್ಯದ ಅಭಿವೃದ್ಧಿ ಮುಖ್ಯ, ಹಳೆಯದನ್ನು ಮರೆತು ಬಿಡಿ ಎಂದ ದೇವೇಗೌಡರು ನಮ್ಮದು ತಪ್ಪಾಗಿದ್ದರೆ ಕ್ಷಮಿಸಿ ಬಿಡಿ ಎಂದು ಅಚ್ಚರಿ ಮೂಡಿಸಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ , ಮೋದಿ ಪ್ರಧಾನಿ ಆದ ಮೇಲೆ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿದೆ. ಜನಸಾಮಾನ್ಯರಿಗೆ ನೀಡಿದ ಭರವಸೆಗಳು ಹುಸಿಯಾಗಿದೆ. ಜನಸಾಮಾನ್ಯರ ಬದುಕು, ರೈತರ ಬದುಕು ದುಸ್ಥರವಾಗಿದೆ. ಜನರ ಕಷ್ಟಗಳನ್ನು ಆಲಿಸುವ ಕೆಲಸವನ್ನು ಮೋದಿ ಮಾಡಿಲ್ಲ ಎಂದರು.
ನಾವು ಕಾಯಾ, ವಾಚಾ, ಮನಸಾ ಕೆಲಸ ಮಾಡುತ್ತಿದ್ದೇವೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ 28 ಕ್ಕೆ 28 ಸ್ಥಾನಗಳನ್ನೂ ಹೊಂದಾಣಿಕೆಯಿಂದ ಗೆಲ್ಲಬೇಕು ಎನ್ನುವುದು ನಮ್ಮ ಉದ್ದೇಶ ಎಂದರು.
ಉಪಚುನಾವಣೆಯಲ್ಲಿ 3 ಲೋಕಸಭಾ ಕ್ಷೇತ್ರಗಳು ಮತ್ತು 2 ವಿಧಾನಸಭಾ ಕ್ಷೇತ್ರಗಳಲ್ಲಿ ಜಂಟಿ ಪ್ರಚಾರ ನಡೆಸುವುದಾಗಿ ತಿಳಿಸಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಾತನಾಡಿ ದೇವೇಗೌಡರು ಮತ್ತು ಸಿದ್ದರಾಮಯ್ಯ ಅವರ ನಡುವೆ ಹಳೆಯ ಸ್ನೇಹದ ಬಾಂಧವ್ಯ ಇದೆ ಸ್ವಲ್ಪ ಕಾಲ ದೂರವಾಗಿದ್ದರು .ಮನಸ್ಸಿನಲ್ಲಿ ಅವರಿಬ್ಬರು ಒಂದಾಗಿದ್ದರು.
ಸುದ್ದಿಗೋಷ್ಠಿಯಲ್ಲಿ ಸಚಿವರಾದ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಡಿಸಿಎಂ ಡಾ.ಜಿ.ಪರಮೇಶ್ವರ್ ಮೊದಲಾದವರು ಹಾಜರಿದ್ದರು.