Advertisement

ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾದ ಎಚ್‌ಡಿಡಿ

12:40 AM Dec 30, 2018 | |

ಬೆಂಗಳೂರು:ಸಮ್ಮಿಶ್ರ ಸರ್ಕಾರದಲ್ಲಿ ಸಂಪುಟ ಪುನಾರಚನೆ ಹಾಗೂ ನಿಗಮ ಮಂಡಳಿ ಅಧ್ಯಕ್ಷರ ನೇಮಕ ಕುರಿತು ದೋಸ್ತಿ ಪಕ್ಷಗಳ ನಡುವೆ ಉಂಟಾಗಿದ್ದ ಕಗ್ಗಂಟು ವಿಚಾರದಲ್ಲಿ ಡ್ಯಾಮೇಜ್‌ ಕಂಟ್ರೋಲ್‌ಗೆ ಜೆಡಿಎಸ್‌ ರಾಷ್ಟ್ರೀಯ ಆಧ್ಯಕ್ಷ ಎಚ್‌.ಡಿ.ದೇವೇಗೌಡ ಮುಂದಾಗಿದ್ದು, ಮಾಧ್ಯಮಗಳಲ್ಲಿ ಬರುತ್ತಿರುವುದೆಲ್ಲಾ ಊಹಾಪೋಹ. ಮೈತ್ರಿ ಸರ್ಕಾರಕ್ಕೆ ಯಾವುದೇ ಅಪಾಯವೂ ಇಲ್ಲ ಎಂದು ಹೇಳಿದ್ದಾರೆ.

Advertisement

ಶನಿವಾರ ತುರ್ತು ಪತ್ರಿಕಾಗೋಷ್ಠಿ ಕರೆದು ಮಾತನಾಡಿದ ಅವರು, ನಿಗಮ ಮಂಡಳಿ ನೇಮಕ, ಲೋಕಸಭೆ ಚುನಾವಣೆಯಲ್ಲಿನ ಮೈತ್ರಿ ವಿಚಾರದಲ್ಲಿ ಯಾವುದೇ ಭಿನ್ನಾಭಿಪ್ರಾಯ ಎರಡೂ ಪಕ್ಷಗಳಲ್ಲಿ ಇಲ್ಲ. ಮಾಲಿನ್ಯ ಮಂಡಳಿ ಅಧ್ಯಕ್ಷರ ನೇಮಕ ಸಂಬಂಧ ಸ್ವಲ್ಪ ತಾಂತ್ರಿಕ ಸಮಸ್ಯೆ ಇದೆ. ನ್ಯಾಯಾಲಯ ಹೇಳಿರುವ ನಿಯಮಾವಳಿ ಪಾಲನೆ ಮಾಡಬೇಕಿದೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲೂ ಆ ಮಂಡಳಿಗೆ ಶಾಸಕರನ್ನು ನೇಮಿಸಿರಲಿಲ್ಲ ಎಂದು ತಿಳಿಸಿದರು.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಖಚಿತ. ನಾವು ಹನ್ನೆರಡು ಸೀಟು ಬಯಸಿದ್ದೇವೆ. ಆದರೆ, ಕುಳಿತು ಮಾತನಾಡುವಾಗ  ಕೊಟ್ಟು ತೆಗೆದುಕೊಳ್ಳುವಿಕೆ ಆಗುತ್ತದೆ. ಅದೇನೂ ದೊಡ್ಡ ಸಮಸ್ಯೆಯಾಗದು. ವೇಣುಗೋಪಾಲ್‌, ಸಿದ್ದರಾಮಯ್ಯ, ಪರಮೇಶ್ವರ್‌, ದಿನೇಶ್‌ಗುಂಡೂರಾವ್‌ ಅವರ ಜತೆ ಚರ್ಚಿಸಿಯೇ ತೀರ್ಮಾನ ಮಾಡಲಿದ್ದೇವೆ. ಸಿದ್ದರಾಮಯ್ಯ, ಕುಮಾರಸ್ವಾಮಿ ಹಾಗೂ ನಾನು  ಈಗಾಗಲೇ ಆ ಬಗ್ಗೆ  ಮಾತುಕತೆ ಸಹ ಮಾಡಿದ್ದೇವೆ . ಜನವರಿ 15 ರೊಳಗೆ ಎಲ್ಲವೂ ಸ್ಪಷ್ಟವಾಗಲಿದೆ. ಫೆಬ್ರವರಿ ಮೂರನೇವಾರ ಅಥವಾ ಮಾರ್ಚ್‌ ಮೊದಲ ವಾರದ ಲೋಕಸಭೆ ಚುನಾವಣೆ ಅಧಿಸೂಚನೆ ಹೊರಬೀಳಬಹುದು ಎಂದು ಹೇಳಿದರು.

ನಿಗಮ ಮಂಡಳಿಗಳ ನೇಮಕ ವಿಚಾರದಲ್ಲಿ ಆ ಪಕ್ಷದವರು  ಈ ಪಕ್ಷದವರು ಎಂಬ ಪ್ರಶ್ನೆಯಿಲ್ಲ. ರೇವಣ್ಣ  ಅವರ ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುವ ನಿಗಮಕ್ಕೆ ಕಾಂಗ್ರೆಸ್‌ ಶಾಸಕರನ್ನು ನೇಮಿಸಿರುವ ಬಗ್ಗೆ ಅವರು ಹೇಳಿರಬಹುದು. ಆದರೆ, ಕಾಂಗ್ರೆಸ್‌ ಸಚಿವರಾಗಿರುವ ಖಾತೆಗಳ ವ್ಯಾಪ್ತಿಗೆ ಬರುವ ನಿಗಮಕ್ಕೆ ಜೆಡಿಎಸ್‌ನವರು ಅಧ್ಯಕ್ಷರಾಗಬಹುದಲ್ಲವೇ? ಎರಡೂ ಪಕ್ಷಗಳ ಸದಸ್ಯರು ಎಲ್ಲ ನಿಗಮಗಳಲ್ಲೂ ಸದಸ್ಯರಾಗಿರುತ್ತಾರೆ ಎಂದು ತಿಳಿಸಿದರು.

ಮುಖ್ಯಮಂತ್ರಿಯವರು ವಿದೇಶ ಪ್ರವಾಸದಲ್ಲಿರುವ ಬಂದ ನಂತರ  ಜೆಡಿಎಸ್‌ನ ಪಾಲಿನ ನಿಗಮ ಮಂಡಳಿ ಸೇರಿ ಎಲ್ಲವನ್ನೂ ಒಂದೇ ಕಂತಿನಲ್ಲಿ ಆದೇಶ ಹೊರಡಿಸಲಾಗುವುದು. ಜೆಡಿಎಸ್‌ ಕಡೆಯಿಂದ ನಿಗಮ ಮಂಡಳಿ ನೇಮಕ ಮಾಡಲು ಜ. 3 ರಂದು ಶಾಸಕರು, ಮಾಜಿ ಶಾಸಕರು, ರಾಜ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಪ್ರತನಿಧಿಗಳ ಸಭೆ ಕರೆಯಲಾಗಿದೆ ಎಂದು ಹೇಳಿದರು.

Advertisement

ಪರಮೇಶ್ವರ್‌ಗೆ ಗೃಹ ಸಚಿವ ಸ್ಥಾನ ತಪ್ಪಿಸಿದ್ದು ಸರಿಯಲ್ಲ ಎಂದು ರೇವಣ್ಣ ಹೇಳಿರುವ ಬಗ್ಗೆಯೂ ಅದು ಕಾಂಗ್ರೆಸ್‌ ತೀರ್ಮಾನ. ಅವರ ಪಕ್ಷದ ತೀರ್ಮಾನಕ್ಕೆ ನಾವು ಮಾತನಾಡುವುದು ಸರಿಯಲ್ಲ ಎಂದು ತಿಳಿಸಿದರು.

ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ರಾಜೀನಾಮೆ ನೀಡಲು ಮುಂದಾಗಿರುವ ಬಗ್ಗೆ ಪ್ರತಿಕ್ರಿಯಿಸಿ, ಅದೆಲ್ಲವೂ ಊಹಾಪೋಹ. ಅವರು ಅಧ್ಯಕ್ಷರಾದ ಮೇಲೆ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಐದು ಕಾರ್ಯಾಧ್ಯಕ್ಷರ ನೇಮಕ ಮಾಡಲು ಹೇಳಿದ್ದಾರೆ. ಆದಷ್ಟು ಬೇಗ ಮಾಡಲಾಗುವುದು. ರಾಜ್ಯ ಹಾಗೂ ಜಿಲ್ಲಾ ಘಟಕಗಳ ಪುನರ್‌ರಚನೆ ಹಾಗೂ ಹೊಸ ಪದಾಧಿಕಾರಿಗಳ ನೇಮಕ ಸಹ ಮಾಡಲಾಗುವುದು ಎಂದು ತಿಳಿಸಿದರು.

ಸಮ್ಮಿಶ್ರ ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದ್ದು ಜನವರಿ 15 ರೊಳಗೆ ಸಹಕಾರ ಬ್ಯಾಂಕ್‌ ಹಾಗೂ ರಾಷ್ಟ್ರೀಕೃತ ಬ್ಯಾಂಕಿನ ಮೊದಲನೇ ಕಂತಿನ ಸಾಲ ಮನ್ನಾ ಆಗಲಿದೆ. ಇವತ್ತೂ ಸಹ ಮುಖ್ಯ ಕಾರ್ಯದರ್ಶಿಗಳು ವಿಡಿಯೋ ಕಾನ್ಫರೆನ್ಸಿಂಗ್‌ ಮೂಲಕ ಸಭೆ ನಡೆಸಿ ರೈತರಿಗೆ ಋಣಮುಕ್ತ ಪತ್ರ ನೀಡುವ ಬಗ್ಗೆ ಸೂಕ್ತ ದಾಖಲೆ ಸಂಗ್ರಹಣೆ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದಾರೆ. ಅವರೇ ಹೊಣೆಗಾರಿಕೆ ವಹಿಸಿಕೊಂಡಿದ್ದಾರೆ. ಹೀಗಾಗಿ, ಸಾಲ ಮನ್ನಾ ಬಗ್ಗೆ ಯಾವುದೇ ಅನುಮಾನ ಬೇಡ. ನಾನು ಪ್ರಧಾನಿಯವರ ಹೇಳಿಕೆಯನ್ನೂ ಗಮನಿಸಿದ್ದೇನೆ. ಆದರೆ, ಅದಕ್ಕೆ ಉತ್ತರ ಋಣಮುಕ್ತ ಪತ್ರದ ಮೂಲಕ ನೀಡಲಾಗುವುದು ಎಂದು ಹೇಳಿದರು.

ಜೆಡಿಎಸ್‌ ಕಾರ್ಯಕಾರಿಣಿ
*ಜನವರಿ 29 ಹಾಗೂ 30 ರಂದು ಬೆಂಗಳೂರಿನಲ್ಲಿ ಜೆಡಿಎಸ್‌ ಕಾರ್ಯಕಾರಿಣಿ ಸಭೆ ನಡೆಯಲಿದೆ. ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರಮಟ್ಟದಲ್ಲಿ ಮೈತ್ರಿ ಸೇರಿ ಹಲವು ವಿಚಾರಗಳು ಚರ್ಚೆಗೆ ಬರಲಿವೆ. ಕರ್ನಾಟಕದಲ್ಲಿ ಕಾಂಗ್ರೆಸ್‌, ಕೇರಳದಲ್ಲಿ ಎಡಪಕ್ಷಗಳ ಜತೆ ಮೈತ್ರಿ ಸರ್ಕಾರ ಮಾಡಿದ್ದೇವೆ. ಅಲ್ಲಿ ಸೀಟು ಹೊಂದಾಣಿಕೆ ಸಹ ಆಗಲಿದೆ.  ಉತ್ತರ ಪ್ರದೇಶದಲ್ಲಿ ನಮ್ಮ ಪಕ್ಷದ ಮಹಾಪ್ರಧಾನ ಕಾರ್ಯದರ್ಶಿ ಡ್ಯಾನಿಶ್‌ ಆಲಿ ಸ್ಪರ್ಧೆ ಮಾಡಲಿದ್ದೇವೆ. ಮಹಾರಾಷ್ಟ್ರದಲ್ಲಿಯೂ ಸ್ಪರ್ಧೆಗೆ ಒತ್ತಡ ಇದೆ. ಬೇರೆ ಬೇರೆ ರಾಜ್ಯಗಳಲ್ಲಿ ಸ್ಥಳೀಯ ಪ್ರಾದೇಶಿಕ ಪಕ್ಷಗಳು ಮೈತ್ರಿಗೆ ಮುಂದಾಗಿವೆ. ಆ ಎಲ್ಲ ವಿಚಾರ ಚರ್ಚೆ ಮಾಡಿ ತೀರ್ಮಾನಿಸುತ್ತೇವೆ. ನಾವು ಇಲ್ಲಿ ಮೈತ್ರಿ ಮಾಡಿಕೊಂಡಿದ್ದರೂ ಪಕ್ಷ ಬಲಿಷ್ಠಗೊಳಿಸಲು ನಮ್ಮ ಕೆಲಸ ನಾವು ಮಾಡಬೇಕಲ್ಲವೇ?
– ಎಚ್‌.ಡಿ.ದೇವೇಗೌಡ, ಮಾಜಿ ಪ್ರಧಾನಿ

ಹಾಸನಕ್ಕೆ ಪ್ರಜ್ವಲ್‌
ಹಾಸನ ಲೋಕಸಭೆ ಕ್ಷೇತ್ರಕ್ಕೆ ಪ್ರಜ್ವಲ್‌ಗೆ ಅವಕಾಶ ಕೊಡಬೇಕಾಗುತ್ತದೆ. ಎಂಟು ವರ್ಷಗಳಿಂದ ಜಿಲ್ಲೆಯಲ್ಲಿ  ಪಕ್ಷದ ಕೆಲಸ ಹಾಗೂ ಸಾರ್ವಜನಿಕರ ಕೆಲಸ ಮಾಡುತ್ತಿದ್ದಾನೆ ಎಂದು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮೊಮ್ಮಗನ ಸ್ಪರ್ಧೆ ಖಚಿತಪಡಿಸಿದರು. ನಾನು ಸ್ಪರ್ಧಿಸಬೇಕೇ ಬೇಡವೇ ಎಂಬ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ. ರಾಷ್ಟ್ರೀಯ ಮಟ್ಟದಲ್ಲಿ ಹಿತೈಷಿಗಳ ಜತೆ ಚರ್ಚಿಸಿ ತೀರ್ಮಾನಿಸುತ್ತೇನೆ. ಮಂಡ್ಯದಲ್ಲಿ ನಮ್ಮ ಪಕ್ಷದ ಎಂಟು ಶಾಸಕರು, ಮೂವರು ಸಚಿವರು, ಮೂವರು ಪರಿಷತ್‌ ಸದಸ್ಯರು ಇದ್ದಾರೆ ಎಂದು ಹೇಳುವ ಮೂಲಕ ತಾವು ಮಂಡ್ಯದಿಂದಲೂ ಸ್ಪರ್ಧೆ ಮಾಡಬಹುದು ಎಂಬ ಇಂಗಿತ ಪರೋಕ್ಷವಾಗಿ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next