ಹಾಸನ: ಜೆಡಿಎಸ್ ಟಿಕೆಟ್ ಗೊಂದಲದ ನಡುವೆಯೇ ಎಚ್.ಡಿ.ರೇವಣ್ಣ ಪರಿವಾರದವರು ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಗುರುವಾರದಿಂದ ಬಿರುಸಿನ ಪ್ರಚಾರ ಆರಂಭಿಸಿದ್ದಾರೆ.
ಬಿಜೆಪಿ ಶಾಸಕ ಪ್ರೀತಂ ಜೆ.ಗೌಡ ಅವರ ಸವಾಲು, ಪಂಥಾಹ್ವಾನವನ್ನು ಗಂಭೀರವಾಗಿ ಪರಿಗಣಿಸಿರುವ ಎಚ್.ಡಿ.ರೇವಣ್ಣ ಕುಟುಂಬದವರು ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲಲೇಬೇಕು ಎಂದು ದೇವಾಲಯಗಳಲ್ಲಿ ಪೂಜೆ ಸಲ್ಲಿಸುವ ಮೂಲಕ ಚುನಾವಣಾ ರಣಕಹಳೆ ಮೊಳಗಿಸಿದ್ದಾರೆ.
ಹರದನಹಳ್ಳಿಯ ಶ್ರೀ ಈಶ್ವರ ದೇವಾಲಯ, ಮಾವಿನಕೆರೆ ಬೆಟ್ಟದ ಶ್ರೀ ರಂಗನಾಥ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದ ಎಚ್.ಡಿ.ರೇವಣ್ಣ ದಂಪತಿ, ಹಾಸನ ತಾಲೂಕಿನ ದೊಡ್ಡಪುರ ಗ್ರಾಮದ ಶ್ರೀ ಉದ್ಭವ ರಾಮೇಶ್ವರ ದೇವಾಲಯದಲ್ಲಿಯೂ ಪೂಜೆ ಸಲ್ಲಿಸಿ ಪ್ರಚಾರಕ್ಕೆ ಚಾಲನೆ ನೀಡಿದರು. ಅಪ್ಪ- ಅಮ್ಮನ ಜೊತೆ ಸಂಸದ ಪ್ರಜ್ವಲ್ ರೇವಣ್ಣ ಅವರೂ ಪಾಲ್ಗೊಂಡಿದ್ದರು.
ಮತ್ತೂಂದೆಡೆ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಮಾಜಿ ಶಾಸಕ ದಿ.ಎಚ್.ಎಸ್.ಪ್ರಕಾಶ್ ಅವರ ಪುತ್ರ, ಜಿಪಂ ಮಾಜಿ ಸದಸ್ಯ ಎಚ್.ಪಿ.ಸ್ವರೂಪ್ ಅವರೂ ಬಿರುಸಿನ ಪ್ರಚಾರ ಮುಂದುವರಿಸಿದ್ದಾರೆ.
ಎಚ್.ಡಿ.ರೇವಣ್ಣ ಮತ್ತು ಕುಟುಂಬದವವರ ಜೊತೆ ಸೇರದೆ ಎಚ್.ಪಿ.ಸ್ವರೂಪ್ ಅವರು ಪ್ರತ್ಯೇಕವಾಗಿ ಪ್ರಚಾರ ನಡೆಸುತ್ತಿರುವುದು ಟಿಕೆಟ್‌ಗಾಗಿ ಪೈಪೋಟಿ ತೀವ್ರಗೊಂಡಿರುವುದಕ್ಕೆ ಸಾಕ್ಷಿಯಾಗಿದೆ.