ಹಾಸನ: ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಜಿಲ್ಲೆಯಲ್ಲಿ ಯಾವುದೇ ಶಿಕ್ಷಣ ಸಂಸ್ಥೆ ಸ್ಥಾಪನೆ ಮಾಡದೆ ಜಿಲ್ಲೆಯ ಯುವ ಜನರನ್ನು ಶಿಕ್ಷಣದಿಂದ ವಂಚಿಸಿದ್ದವು. ಆದರೆ, ಜೆಡಿಎಸ್ ಅಧಿಕಾರದಲ್ಲಿದ್ದಾಗ ಹಾಸನ ನಗರ ಸೇರಿದಂತೆ ಜಿಲ್ಲೆಯಲ್ಲಿ ಸರ್ಕಾರದಿಂದಲೇ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಶೈಕ್ಷಣಿಕ ಕ್ರಾಂತಿ ಮಾಡಿದೆ ಎಂದು ಜೆಡಿಎಸ್ ಮುಖಂಡ, ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರ ನಿರ್ಲಕ್ಷಿಸಿದ್ದ ಕಾಂಗ್ರೆಸ್ ಹಾಗೂ ಬಿಜೆಪಿಗೆ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಜಿಲ್ಲೆಯ ಜನರ ಮತಗಳನ್ನು ಕೇಳುವ ನೈತಿಕೆಯಿಲ್ಲ. ಜಿಲ್ಲೆಯ ಮತದಾರರು ಜೆಡಿಎಸ್ ಅಭ್ಯರ್ಥಿ ಎಚ್. ಕೆ.ರಾಮು ಅವರಿಗೆ ಮತ ನೀಡಿ ಗೆಲ್ಲಿಸುವ ಮೂಲಕ ಜಿಲ್ಲೆಯಲ್ಲಿ ಇನ್ನಷ್ಟು ಶೈಕ್ಷಣಿಕ ಸಾಧನೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ದೇಶ ಮತ್ತು ರಾಜ್ಯದಲ್ಲಿ 50 ವರ್ಷದಿಂದ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದರೂ ಗ್ರಾಮೀಣ ಹಾಗೂ ನಗರ ಪ್ರದೇಶದ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಲಿಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದರೂ ಶಾಲೆ, ಕಾಲೇಜುಗಳಿಗೆ ಮೂಲಭೂತ ಸೌಕರ್ಯ ಹಾಗೂ ಶಿಕ್ಷಣ ಇಲಾಖೆಯ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿದೆ ಕಾಲಹರಣ ಮಾಡಿತು. ಹಾಗಾಗಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ಪದವೀಧರ ಕ್ಷೇತ್ರದಲ್ಲಿ ಮತ ಕೇಳುವ ನೈತಿಕ ಹಕ್ಕಿಲ್ಲ ಎಂದರು.
ಮತ್ತಷ್ಟು ಕೊಡುಗೆ ನೀಡುತ್ತೇವೆ: 2023 ರಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ಖಚಿತ. ಆಗ ಅತಿಥಿ ಉಪನ್ಯಾಸಕರು ಹಾಗೂ ಶಿಕ್ಷಕರನ್ನು ಕಾಯಂ ಮಾಡುತ್ತೇವೆ. ಇನ್ನಷ್ಟು ಕೆಪಿಎಸ್ ಹಾಗೂ ವಸತಿ ಶಾಲೆಗಳನ್ನು ತೆರೆಯುತ್ತೇವೆ. ಆದ್ದರಿಂದ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎಚ್.ಕೆ. ರಾಮು ಅವರಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಬೇಕು ಎಂದು ಕೋರಿದರು.
ಪ್ರತಿ 3 ಕಿ.ಮೀ.ಗೊಂದು ಶಾಲೆ: ಹಾಸನ ಜಿಲ್ಲೆಯಲ್ಲಿ ಪ್ರತಿ 3 ಕಿ.ಮೀ.ಗೆ ಒಂದು ಹೈಸ್ಕೂಲ್, ಮೋರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ನೀಡಿರುವುದು ಜೆಡಿಎಸ್ ಕೊಡುಗೆ. ಹಾಸನ ಜಿಲ್ಲೆಯ ಎಲ್ಲ ಸರ್ಕಾರಿ ಡಿಪ್ಲೊಮಾ ಕಾಲೇಜುಗಳಲ್ಲಿ ಈ ವರ್ಷ ಎಲ್ಲ ಸೀಟುಗಳೂ ಭರ್ತಿಯಾಗಿವೆ. ಜೆಡಿಎಸ್ ಸರ್ಕಾರದಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪನೆ ಮಾಡದಿದ್ದರೆ ಜಿಲ್ಲೆಯ ಮಕ್ಕಳು ಶಿಕ್ಷಣ ಪಡೆಯಲು ಎಲ್ಲಿಗೆ ಹೋಗಬೇಕಾಗಿತ್ತು ಎಂದು ರೇವಣ್ಣ ಅವರು ಪ್ರಶ್ನಿಸಿದರು.