ಬೆಂಗಳೂರು : ಸರ್ಕಾರ ಕೋವಿಡ್ ಸೋಂಕನ್ನು ನಿಯಂತ್ರಣ ಮಾಡಲು ಹಲವರು ಕ್ರಮಗಳನ್ನು, ಮ್ಯಾರಾಥಾನ್ ಸಭೆಗಳನ್ನು ಮಾಡಿ, ವಿಪಕ್ಷಗಳ ಸಲಹೆ ಪಡೆದಿದೆ. ಆದರೆ ಕೋವಿಡ್ ಸೋಂಕಿಗೆ ತುತ್ತಾಗಿರುವ ಜನರನ್ನು ರಕ್ಷಿಸಲು ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎನ್ನುವುನ್ನು ಹೇಳಬೇಕೆಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.
ಈ ಕುರಿತು ಬುಧವಾರ ಸರಣಿ ಟ್ವೀಟ್ ಮಾಡಿರುವ ಅವರು, ಟ್ವೀಟ್ ವೊಂದರಲ್ಲಿ, ಮಂಗಳವಾರದ ಸಭೆಯ ನಂತರ ಜನರಿಗೆ ಕೇವಲ ಮಾರ್ಗಸೂಚಿಗಳನ್ನು ಮಾತ್ರ ಸೂಚಿಸಲಾಯಿತು. ಸೋಂಕಿನಿಂದ ದೂರ ಇರುವ ಸಲಹೆ ನೀಡಲಾಯಿತು. ಆದರೆ, ಈಗಾಗಲೇ ಅಸ್ಪತ್ರೆಗಳಲ್ಲಿರುವವರ ರಕ್ಷಣೆಗಾಗಿ ಏನು ಮಾಡಲಾಗಿದೆ, ಏನೇನು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಸಭೆಯ ನಂತರ ಸರ್ಕಾರ ಹೇಳಿಲ್ಲ ಏಕೆ? ಸೋಂಕಿತರ ಪರಿಸ್ಥಿತಿಯನ್ನು ಸರ್ಕಾರ ಅರಿತಿಲ್ಲ ಏಕೆ? ಎಂದು ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.
ಕೋವಿಡ್‌ನ ಎರಡನೇ ಅಲೆ ಬರುವುದಾಗಿ ಸರ್ಕಾರಕ್ಕೆ ತಜ್ಞರು, ವಿಪಕ್ಷ ನಾಯಕರು ಹೇಳುತ್ತಲೇ ಬಂದಿದ್ದಾರೆ. ವರದಿಗಳನ್ನು ಪಡೆದುಕೊಂಡ ಸರ್ಕಾರ ಈ ವರೆಗೆ ಏನು ಮಾಡಿಕೊಂಡಿತ್ತು? ಕೋವಿಡ್ ಬಂದಿದ್ದು ಒಂದೂವರೆ ವರ್ಷಗಳ ಹಿಂದೆ. ಮುಂದೊಂದು ದಿನ ರಾಕ್ಷಸ ರೂಪಿಯಾಗಬಹುದಾದ ಈ ರೋಗದ ವಿರುದ್ಧ ಸರ್ಕಾರ ಈ ವರೆಗೆ ಮಾಡಿಕೊಂಡ ಸಿದ್ಧತೆಗಳು ಏನಾಗಿದ್ದವು? ಎಂದು ಪ್ರಶ್ನಿಸಿದ್ದಾರೆ.
ಕೋವಿಡ್ ಚಿಕಿತ್ಸೆಗೆ ಅಗತ್ಯವಿರುವ ಔಷಧ, ಪರಿಕರಗಳ ಅಭಾವದ ಬಗ್ಗೆ ನಾನು ಈಗಾಗಲೇ ಮಾತಾಡಿದ್ದೇನೆ. ಎಚ್ಚರಿಕೆಯನ್ನೂ ನೀಡಿದ್ದೇನೆ. ಇದರ ಬಗ್ಗೆ ಏನು ಕ್ರಮ ಕೈಗೊಂಡಿದೆ ಸರ್ಕಾರ? ಚಿಕಿತ್ಸೆಯೇ ದುರ್ಬರವಾಗುತ್ತಿರುವ ಬಗ್ಗೆಯೂ ಪ್ರಸ್ತಾಪಿಸಲಾಗಿದೆ. ಈ ಹಂತದಲ್ಲಿ ಕುಗ್ಗಿ ಹೋಗಿರುವ ಜನರಲ್ಲಿ ವಿಶ್ವಾಸ ಮೂಡಿಸಲು ಸರ್ಕಾರ ಕ್ರಮ ಕೈಗೊಂಡಿದೆಯೇ? ಎಂದಿದ್ದಾರೆ.
ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಹಾಸಿಗೆಗಳಿಲ್ಲ.ಚಿಂತಾಜನಕ ಪರಿಸ್ಥಿತಿಯಲ್ಲಿರುವ ಸೋಂಕಿತರಿಗೆ ಆಮ್ಲಜನಕ ಸಿಗುತ್ತಿಲ್ಲ. ರೆಮ್‌ಡಿಸಿವಿರ್ ಔಷಧವೂ ಸಿಗುತ್ತಿಲ್ಲ ಎಂಬುದರ ಬಗ್ಗೆ ಕೆಲವು ದಿನಗಳಿಂದ ಎಚ್ಚರಿಸುತ್ತಲೇ ಬಂದಿದ್ದೇನೆ. ಅತ್ಯಗತ್ಯವಾಗಿರುವ ಈ ಸವಲತ್ತುಗಳನ್ನು ಸರ್ಕಾರ ಹೊಂದಿಸುವ ಪ್ರಯತ್ನ ಮಾಡಿದೆಯೇ? ಇದನ್ನು ಮೊದಲು ಹೇಳಲಿ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಒಂದೆಡೆ ಸೂಕ್ತ ಚಿಕಿತ್ಸೆ ಸಿಗದೇ ಸೋಂಕಿತರು ಪರದಾಡುತ್ತಿದ್ದಾರೆ. ಆರೋಗ್ಯ ಸೇವೆ ಒದಗಿಸಲಾಗದ ಸರ್ಕಾರದ ದೈನೇಸಿ ಸ್ಥಿತಿಯ ಬಗ್ಗೆ ಜನರು ಆತಂಕಗೊಂಡಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಜನರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸವನ್ನು ಸರ್ಕಾರ ಮಾಡಬೇಕಲ್ಲವೇ? ಜನರ ರಕ್ಷಣೆಗಾಗಿ ಮಾಡಿಕೊಂಡಿರುವ ಆರೋಗ್ಯ ವ್ಯವಸ್ಥೆಯ ಬಗ್ಗೆ ಸರ್ಕಾರ ಹೇಳಬೇಕಲ್ಲವೇ? ಎಂದು ಟ್ವೀಟ್ ಮಾಡಿದ್ದಾರೆ.
‘ಜನರನ್ನು ಯಾವುದೇ ಹಂತದಲ್ಲಿ ಸರ್ಕಾರ ರಕ್ಷಣೆ ಮಾಡುತ್ತದೆ. ಅವರ ಜೀವಕ್ಕೆ ಆಧಾರವಾಗಿರುತ್ತದೆ,’ ಎಂಬ ವಿಶ್ವಾಸವನ್ನು ತುಂಬುವುದು ಅಗತ್ಯ. ಅದು ಬಿಟ್ಟು ಯಾವುದೇ ಕಠಿಣ ಕ್ರಮಗಳನ್ನು ಕೈಗೊಂಡರೂ ಅದು ನಗಣ್ಯ. ಈ ವಿಷಯವನ್ನು ಸರ್ಕಾರ ಗಮನದಲ್ಲಿಟ್ಟುಕೊಳ್ಳಬೇಕು. ಆರೋಗ್ಯ ವ್ಯವಸ್ಥೆಯ ಕೊರತೆ ನೀಗಿಸುವ ಕ್ರಮಗಳ ಬಗ್ಗೆ ಸರ್ಕಾರ ಮಾತಾಡಬೇಕು ಎಂದಿದ್ದಾರೆ.