ಬೆಂಗಳೂರು : ಉಕ್ರೇನ್ʼನಲ್ಲಿ ಸಿಲುಕಿರುವ ಕನ್ನಡಿಗರನ್ನು ಅತೀ ಶೀಘ್ರ ತಾಯ್ನಾಡಿಗೆ ಕರೆತರುವ ಕೆಲಸ ಸರಕಾರ ಮಾಡಬೇಕೆಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸರಕಾರಕ್ಕೆ ಮನವಿ ಮಾಡಿದ್ದಾರೆ.
ಉಕ್ರೇನ್ʼನಲ್ಲಿ ಸಿಲುಕಿರುವ ಕನ್ನಡಿಗರ ಬಗ್ಗೆ ಸರಣಿ ಟ್ವೀಟ್ ಮಾಡುವ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ ಅದರಂತೆ ರಷ್ಯಾ ದಾಳಿಯಿಂದ ತತ್ತರಿಸಿರುವ ಉಕ್ರೇನ್ʼನಲ್ಲಿ ರಾಜ್ಯದ 91 ವಿದ್ಯಾರ್ಥಿಗಳು ಸಿಲುಕಿರುವ ಮಾಹಿತಿಯನ್ನು ಸರಕಾರವೇ ನೀಡಿದೆ. ಆ ದೇಶದ ಕೀವ್ ನಗರ ಸೇರಿ ವಿವಿಧೆಡೆ ಕಷ್ಟದಲ್ಲಿರುವ ಕನ್ನಡಿಗರ ರಕ್ಷಣೆಗೆ ಎಲ್ಲ ತುರ್ತು ಕ್ರಮಗಳನ್ನು ತಕ್ಷಣವೇ ಕೈಗೊಳ್ಳಬೇಕು, ಅವರೆಲ್ಲರನ್ನೂ ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್ ಕರೆತರಬೇಕು.
ಶೆಲ್, ಕ್ಷಿಪಣಿ, ಬಾಂಬ್ ದಾಳಿ ಭೀತಿಯಿಂದ ವಿದ್ಯಾರ್ಥಿಗಳು ಬಂಕರ್ʼಗಳಲ್ಲಿ ಮತ್ತು ಮೆಟ್ರೋ ರೈಲು ಅಂಡರ್ʼ ಗ್ರೌಂಡ್ʼನಲ್ಲಿ ಆಶ್ರಯ ಪಡೆದಿದ್ದಾರೆ. ಆ ದೃಶ್ಯಗಳು ತುಂಬಾ ಕಳವಳಕಾರಿಯಾಗಿದೆ. ಸ್ಫೋಟದ ಸದ್ದು ಕೇಳಿಸಿಕೊಂಡು ಕ್ಷಣಕ್ಷಣಕ್ಕೂ ಭಯಭೀತಿಯಲ್ಲಿರುವ ಅವರೆಲ್ಲರನ್ನು ನೋಡಿದರೆ ಯುದ್ಧದ ಭೀಕರತೆ ಎಂಥದ್ದು ಎಂಬುದನ್ನು ಅರಿಯಬಹುದು.
ಅಲ್ಲಿ ವಿದ್ಯಾರ್ಥಿಗಳು ಸಂಕಷ್ಟದಲ್ಲಿದ್ದರೆ, ಇಲ್ಲಿ ಅವರ ತಂದೆ-ತಾಯಿ ಮಕ್ಕಳ ಬಗ್ಗೆ ತೀವ್ರ ಆತಂಕದಲ್ಲಿದ್ದಾರೆ. ಉಕ್ರೇನ್ʼನಲ್ಲಿ ಬಾಂಬ್ʼಗಳ ಮೊರೆತಕ್ಕೆ ಅವರು ಮತ್ತಷ್ಟು ಕಂಗಾಲಾಗುತ್ತಿದ್ದಾರೆ.
ನಾನು ಕೂಡ ಕನ್ನಡಿಗರ ರಕ್ಷಣೆಗೆ ನೇಮಕಗೊಂಡಿರುವ ಉಸ್ತುವಾರಿ ಅಧಿಕಾರಿ ಜತೆ ನಿರಂತರ ಸಂಪರ್ಕದಲ್ಲಿದ್ದೇನೆ. ಕೇಂದ್ರ ಸರಕಾರವು ತನ್ನೆಲ್ಲ ರಾಜತಾಂತ್ರಿಕ ಮಾರ್ಗಗಳನ್ನು ಬಳಸಿಕೊಂಡು ಉಕ್ರೇನ್ʼನಲ್ಲಿರುವ ಎಲ್ಲ ಕನ್ನಡಿಗರನ್ನೂ ಏರ್ʼಲಿಫ್ಟ್ ಮಾಡಬೇಕು. ಎಂದು ಸರಕಾರವನ್ನು ಕೇಳಿಕೊಂಡಿದ್ದಾರೆ.
ಇದನ್ನೂ ಓದಿ : ಆ್ಯಸಿಡ್ ಕುಡಿಸಿ ನಗ ನಗದು ದೋಚಿದ ದುಷ್ಕರ್ಮಿಗಳು : ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಸಾವು