Advertisement

ಅವರ ಪಾಪದ ದುಡ್ಡಿನಲ್ಲಿ ವಿದೇಶಕ್ಕೆ ಹೋಗಬೇಕಾ?: ಚಲುವರಾಯಸ್ವಾಮಿಗೆ ಎಚ್ ಡಿಕೆ ತಿರುಗೇಟು

11:25 AM Aug 14, 2023 | Team Udayavani |

ಬೆಂಗಳೂರು: ಕುಮಾರಸ್ವಾಮಿ ವಿದೇಶದಲ್ಲಿಯೇ ಇರಲಿ, ಅದಕ್ಕೆ ಬೇಕಾದ ವ್ಯವಸ್ಥೆ ನಾವು ಮಾಡುತ್ತೇವೆ ಎಂದು ಹೇಳಿದ್ದ ಕೃಷಿ ಸಚಿವ ಚಲುವರಾಯ ಸ್ವಾಮಿ ಅವರಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತೀವ್ರ ತಿರುಗೇಟು ನೀಡಿದ್ದಾರೆ.

Advertisement

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿ ಲೂಟಿ ಹೊಡೆಯೋಕೆ ನಮ್ಮನ್ನ ಬಿಟ್ಬಿಡಿ, ನೀವು ವಿದೇಶದಲ್ಲಿ ಇರಿ ಅಂತ ಸಲಹೆ ಕೊಟ್ಟ ಹಾಗಿದೆ. ಏಕೆಂದರೆ, ಮಾನ ಮಾರ್ಯಾದೆ ಇಲ್ಲದೆ ಇಲ್ಲಿ ದರೋಡೆ ಮಾಡಿಕೊಂಡು ಕೂತಿದ್ದಾರೆ. ನಾನು ಇಲ್ಲಿದ್ದರೆ ಅವರಿಗೆ ಆಗ್ತೀನಿ ಅಲ್ಲವೇ ಎಂದರು.

ವಿದೇಶಿ ಪ್ರವಾಸಕ್ಕೆ ಅವರಿಂದ ವ್ಯವಸ್ಥೆ ಮಾಡಿಸಿಕೊಂಡು ಹೋಗಬೇಕಾ ನಾನು? ಆ ಪಾಪದ ಹಣ ತಗೊಂಡು ಹೋಗಬೇಕೆ? ವಿದೇಶಕ್ಕೆ ಹೋಗುವ ಯೋಗ್ಯತೆಯೂ ನನಗಿಲ್ಲವೇ? ಕಳೆದ 12 ವರ್ಷದಿಂದ ಪಕ್ಷದ ಸಂಘಟನೆಗೆ ಸಮಯ ಮೀಸಲಿಟ್ಟಿದ್ದೆ. ಎಲ್ಲೂ ಹೊರಗೆ ಹೋಗಿ ಬರುವ ಅವಕಾಶ ಸಿಕ್ಕಿರಲಿಲ್ಲ. ದೇಶ ಸುತ್ತು, ಕೋಶ ಓದು ಎಂಬ ಹಿರಿಯರ ಮಾತಿದೆ. ಯಾವ ದೇಶದಲ್ಲಿ ಏನೇನಿದೆ ಎಂದು ತಿಳ್ಕೊಬೇಕಲ್ಲಾ? ಅಲ್ಲಿ ಯಾವ ರೀತಿ ಇದೆ, ನಮ್ಮಲ್ಲಿ ಯಾವ ರೀತಿ ಇದೆ ನೋಡಬೇಕಲ್ಲಾ. ಕಾಂಬೋಡಿಯಾಗೆ ಸ್ನೇಹಿತರ ಆಹ್ವಾನ ಇತ್ತು, ಹೋಗಿದ್ದೆ. ಅಲ್ಲಿನ ಸುವಿಶಾಲ ಪ್ರದೇಶದಲ್ಲಿ ಕಟ್ಟಿರುವ ಆಂಕರ್ ವಾಟ್ ಎಂಬ ಅದ್ಭುತವಾದ ದೇವಸ್ಥಾನ ಇದೆ. ನಮ್ಮ ದೇಶದಲ್ಲೂ ಇಲ್ಲ ಅಂತ ದೇವಸ್ಥಾನ. ಬ್ರಹ್ಮ, ವಿಷ್ಣು, ಮಹೇಶ್ವರ ತ್ರಿಮೂರ್ತಿಗಳು ಇರುವ ದೇವಸ್ಥಾನ. ಅದನ್ನು ಕಂಡು ನಾನು ವಿಸ್ಮಿನಾದೆ ಎಂದರು.

ಇದನ್ನೂ ಓದಿ:Priyanka Gandhi ಸ್ಪರ್ಧಿಸಿದರೆ ಮೋದಿ ವಾರಣಸಿಯಲ್ಲಿ ಸೋಲಲಿದ್ದಾರೆ: ಸಂಜಯ್ ರಾವತ್ ಭವಿಷ್ಯ

ಇತ್ತೀಚಿಗೆ ಆ ದೇಶ ಆರ್ಥಿಕವಾಗಿ ವೇಗವಾಗಿ ಬೆಳೆಯುತ್ತಿದೆ. ಒಂದು ಕಾಲದಲ್ಲಿ ಭಾರೀ ಸಂಕಷ್ಟದಲ್ಲಿ ಇದ್ದ ಆ ದೇಶ ಈಗ ತುಂಬ ಅದ್ಭುತವಾಗಿ ಬೆಳೆಯುತ್ತಿದೆ. ಕಾಂಬೋಡಿಯಾದ ಜಿಡಿಪಿ ಶೇ.7.7 ರಷ್ಟಿದೆ ಎಂದು ಅಲ್ಲಿನ ಮಂತ್ರಿಗಳೊಬ್ಬರು ಹೇಳಿದರು. ಸಾರ್ವಜನಿಕರ ಹಣದ ವಿನಿಯೋಗದ ಬಗ್ಗೆ ಅಲ್ಲಿ ಕಠಿಣ ನಿಯಮಗಳಿವೆ. ನಮ್ಮಲ್ಲಿ ಹಣಕ್ಕೆ ಕೊರತೆ ಇಲ್ಲ, ಈಗ ಲೂಟಿ ಮಾಡುತ್ತಿದ್ದಾರೆ ಎಂದರು.

Advertisement

ಈಗ ಮಧ್ಯಪ್ರದೇಶದಲ್ಲಿಯೂ 40% ಸರ್ಕಾರ ಎಂದು ಹೇಳಿ ಪೋಸ್ಟರ್ ಹಾಕ್ಕೊಂಡಿದ್ದಾರೆ. ಈ ದೇಶವನ್ನು ಇವರು ಎಲ್ಲಿಗೆ ತಗೊಂಡು ಹೋಗ್ತಿದ್ದಾರೆ? ಎಂದು ಅವರು ಕಿಡಿಕಾರಿದರು.

ರಾಜ್ಯಪಾಲರ ಬಳಿ ಏಕೆ ಹೋದರು?: ಕೃಷಿ ಅಧಿಕಾರಿಗಳು ರಾಜ್ಯಪಾಲರ ಬಗ್ಗೆ ಬರೆದಿರುವ ಪತ್ರದ ಪ್ರತಿಕ್ರಿಯೆ ನೀಡಿದ ಅವರು; ತಮ್ಮ ವಿರುದ್ಧ ಬರೆದಿರುವ ಪತ್ರ ನಕಲಿ ಎನ್ನುವುದಾದರೆ ಕೃಷಿ ಸಚಿವರು ರಾಜ್ಯಪಾಲರ ಬಳಿಗೆ ಏಕೆ ಹೋದರು? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.

ನಾನು ಆ ಪ್ರಕರಣದ ಬಗ್ಗೆ ಚರ್ಚೆಯನ್ನೇ ಮಾಡಿಲ್ಲ. ಎಲ್ಲೂ ಆ ಬಗ್ಗೆ ಮಾತನಾಡಿಲ್ಲ. ನನ್ನ ಹೆಸರು ಯಾಕೆ ತಳುಕು ಹಾಕುತ್ತಿದ್ದಾರೆ ಅಲ್ಲಿ? ಅವರಿಗೆ ಅಲ್ಲೂ ನನ್ನ ಹೆಸರೇ ಬೇಕು, ಯಾಕೆಂದರೆ ನನ್ನದೇ ಭಯ ಇರುವುದು ಅವರಿಗೆ ಎಂದು ಕುಟುಕಿದರು.

ಮೊದಲು ಪ್ರಾಮಾಣಿಕವಾಗಿ ನಡೆದುಕೊಳ್ಳುವುದನ್ನು ಕಲಿಯಬೇಕು. ಪ್ರಾಮಾಣಿಕವಾಗಿ ನಡೆದುಕೊಂಡರೆ ಇಂತಹ ಪರಿಸ್ಥಿತಿ ಯಾಕೆ ಬರುತ್ತದೆ? ಮಂತ್ರಿಗಿರಿ ಸಿಕ್ಕಿದೆ ಅಂತಾ ಹಗಲು ದರೋಡೆ ಮಾಡೋದಲ್ಲ. ಒಳ್ಳೆಯ ಕೆಲಸ ಮಾಡಲಿ ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next