ಬೆಂಗಳೂರು: ರಾಜ್ಯದ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆಗ ಘೋಷಣೆಯಾಗಿದ್ದು, ಪಕ್ಷಗಳು ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಇದರೊಂದಿಗೆ ಟೀಕೆ- ಆರೋಪಗಳು ಆರಂಭವಾಗಿದೆ. ಇದೀಗ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಟೀಕೆ ಮಾಡಿದ್ದು, ಚುನಾವಣಾ ಕಾಲದ ನಿಮ್ಮ ಅಭಿವೃದ್ಧಿಯ ಜಪ ಬೂಟಾಟಿಕೆತನದ್ದು ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಎಚ್ ಡಿಕೆ, ಮಸ್ಕಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡುವುದಾಗಿ ಸಿಎಂ ಬಿಎಸ್ ವೈ ಇತ್ತೀಚೆಗೆ ಪ್ರಚಾರ ಸಭೆಯಲ್ಲಿ ಹೇಳಿರುವುದು ಗಮನಕ್ಕೆ ಬಂತು. ಮಸ್ಕಿಯಲ್ಲಿ ಶಾಸಕರಾಗಿದ್ದವರ ಮಹಾತ್ಯಾಗ(?)ದಿಂದ ಬಿಎಸ್‌ವೈ ಅವರಿಗೆ ಅಧಿಕಾರ ಸಿಕ್ಕು 2 ವರ್ಷಗಳಾಗುತ್ತಾ ಬಂದಿವೆ. ಈ ವರೆಗೆ ಯಾಕಾಗಿರಲಿಲ್ಲ ಮಸ್ಕಿಯ ಅಭಿವೃದ್ಧಿ? ಪ್ರಗತಿಗೆ ಉಪಚುನಾವಣೆ ಮುಹೂರ್ತವಾಗಿತ್ತೇ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ಯುವತಿ ಜತೆ ಮತ್ತೂಬ್ಬ ಉತ್ತರದ ಶಾಸಕನಿಗೆ ಸಂಪರ್ಕ?
ಚುನಾವಣೆ ನಿಗದಿಯಾಗಿದ್ದರಿಂದ ಮಸ್ಕಿ ಅಭಿವೃದ್ಧಿಗೆ ಈಗ ಮುಹೂರ್ತ ಬಂದಿದೆ, ಒಪ್ಪೋಣ. ಆದರೆ, ವರ್ಷದ ಹಿಂದೆಯೇ ಚುನಾವಣೆಗಳಾದ ‘ಬಾಂಬೆ ತಂಡ’ದ ಸದಸ್ಯರ ಕ್ಷೇತ್ರಗಳ ಅಭಿವೃದ್ಧಿ ಎಷ್ಟಾಗಿದೆ? ಅವೆಲ್ಲವೂ ಭೂಲೋಕದ ಸ್ವರ್ಗಗಳಾಗಿವೆಯೇ ಸಿಎಂ ಯಡಿಯೂರಪ್ಪನವರೇ? ಚುನಾವಣಾ ಕಾಲದ ನಿಮ್ಮ ಅಭಿವೃದ್ಧಿಯ ಜಪ ಬೂಟಾಟಿಕೆತನದ್ದು ಎಂದು ನಿಮಗಾದರೂ ಅನಿಸದೇ ಎಂದು ಟೀಕಿಸಿದ್ದಾರೆ.
ಮಸ್ಕಿ ಕ್ಷೇತ್ರವಿರಲಿ, ಬೇರಾವ ಕ್ಷೇತ್ರವೇ ಆಗಿರಲಿ ಅಭಿವೃದ್ಧಿಗೆ ಸರ್ಕಾರದಲ್ಲಿ ಹಣವೆಲ್ಲಿದೆ ಮುಖ್ಯಮಂತ್ರಿಗಳೇ? ರಾಜ್ಯದ ತೆರಿಗೆ ಹಣ, ಜನರ ಬೆವರಿನ ಋಣ ನಿಮ್ಮ ಸರ್ಕಾರದಲ್ಲಿರುವ ‘ಏಕಗವಾಕ್ಷಿ’ಗೆ ಆಪೋಷನವಾಗುತ್ತಿಲ್ಲವೇ? ಚುನಾವಣಾ ಕಾಲದಲ್ಲಿ ಮುಖ್ಯಮಂತ್ರಿ ಮತ್ತು ಅವರ ಸರ್ಕಾರದ ‘ಏಕಗವಾಕ್ಷಿ’ ಆಡುವ ಮಾತುಗಳಿಗೆ ಜನ ಮನ್ನಣೆ ನೀಡಬಾರದು ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಮತ್ತೆ ಮಿಂಚಿದ ಶ್ರೀನಿವಾಸ ಗೌಡ: ನೇಗಿಲು ಹಿರಿಯ ವಿಭಾಗದಲ್ಲಿ ಇರುವೈಲು ಪಾಣಿಲ ಚಾಂಪಿಯನ್